ಗೋಣಿಕೊಪ್ಪಲು, ಸೆ.೧: ನಾಗರಿಕರು,ರೈತರು ತಮ್ಮ ಜೀವನೋಪಾಯಕ್ಕೆ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದವರಿಗೆ ಎದುರಾಗಿದ್ದ ಭೀತಿ ಇನ್ನು ಮುಂದೆ ದೂರವಾಗಲಿದೆ. ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡು ಭಯದಲ್ಲಿದ್ದರು. ಸರ್ಕಾರದ ಧ್ವಂದ್ವ ನಿಲುವಿನಿಂದಾಗಿ ಕ್ರಿಮಿನಲ್ ಪ್ರಕರಣ ಎದುರಿಸಬೇಕಾದ ಆತಂಕ ಒತ್ತುವರಿದಾರರನ್ನು ಕಾಡುತ್ತಿತ್ತು. ರೈತರಿಗೆ ಹಾಗೂ ನಾಗರಿಕರಿಗೆ ಈ ಕಾಯ್ದೆಯ ತಿದ್ದುಪಡಿಯಿಂದ ಇದೀಗ ನಿರಾಳವಾಗಿದೆ. ಭೂ ಬಳಕೆ ನಿಷೇಧ ಕಾಯ್ದೆ ತಿದ್ದುಪಡಿಗೆ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದು ಸೆ.೧೨ರಿಂದ ನಡೆಯುವ ಅದಿವೇಶನದಲ್ಲಿ ಈ ಬಗ್ಗೆ ಕಾಯ್ದೆ ಹೊರ ಬೀಳಲಿದೆ ಎಂದು ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ‘ಶಕ್ತಿ’ಗೆ ತಿಳಿಸಿದರು.
ಪೊನ್ನಂಪೇಟೆಯ ಸರ್ಕಾರಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶಾಸಕ ಕೆ.ಜಿ.ಬೋಪಯ್ಯ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿ ವಿಶೇಷವಾಗಿ ಕೊಡಗು ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ರೈತರು ಹಾಗೂ ಸಾರ್ವಜನಿಕರು ಸರ್ಕಾರದ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದರು. ಈ ಬಗ್ಗೆ ಪ್ರಕರಣ ಎದುರಿಸುವ ಆತಂಕದಲ್ಲಿ ರೈತರಿದ್ದರು. ಇದನ್ನು ಅಧಿವೇಶನದಲ್ಲಿ ಮುಖ್ಯಮಂತ್ರಿಗಳ ಗಮನ ಸೆಳೆದು ಗ್ರಾಮೀಣ ಭಾಗದ ಭೂಮಿ ಒತ್ತುವರಿ ರೈತರಿಗೆ ಯಾವುದೇ ಸಮಸ್ಯೆ ಎದುರಾಗದಂತೆ, ಕಾಯ್ದೆಗೆ ತಿದ್ದುಪಡಿ ತರುವಂತೆ ಸಚಿವರ ಹಾಗೂ ಮುಖ್ಯಮಂತ್ರಿಗಳ ಗಮನ ಸೆಳೆದಿದ್ದೆ. ಇದೀಗ ಸಂಬAಧಿಸಿದ ಸಚಿವರು ಹಾಗೂ ಮುಖ್ಯಮಂತ್ರಿಗಳು ಸಂಸದೀಯ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಂಡಿದ್ದು, ಗ್ರಾಮೀಣ ಭಾಗರ ರೈತರು ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಲ್ಲಿ ಕಾನೂನು ವ್ಯಾಪ್ತಿಯಿಂದ ಇಂತಹ ಪ್ರಕರಣಗಳಿಗೆ ರಿಯಾಯಿತಿ ದೊರೆಯಲಿದೆ. ಮುಂದಿನ ಅಧಿವೇಶನದಲ್ಲಿ ಈ ಕಾನೂನು ಜಾರಿಗೆ ಬರಲಿದೆ ಎಂದರು.
ಈ ಮೂಲಕ ಗ್ರಾಮೀಣ ಭಾಗದ ರೈತರಿಗಿದ್ದ ಭೀತಿ ದೂರಾಗಲಿದೆ. ಕರ್ನಾಟಕ ಭೂಬಳಕೆ ನಿಷೇಧ ಕಾಯ್ದೆ ಜಾರಿ ಬಳಿಕ ಬೆಂಗಳೂರಿನಲ್ಲಿ ವಿಶೇಷ ನ್ಯಾಯಾಲಯಗಳು ಕಾರ್ಯಾರಂಭ ಮಾಡಿದ್ದವು. ಒಂದೆಡೆ ಬಗರ್ ಹುಕುಂನಲ್ಲಿ ಅಕ್ರಮ ಸಕ್ರಮಕ್ಕೆ ಮುಂದಾಗಿದ್ದರೆ ಇನ್ನೊಂದೆಡೆ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡವರನ್ನು ಭೂಗಳ್ಳರ ಪಟ್ಟಿಗೆ ಸೇರಿಸುವ ಪ್ರಯತ್ನವೂ ನಡೆದಿತ್ತು. ಇದಕ್ಕಾಗಿ ಸರ್ಕಾರ ಕಾನೂನು ರಚಿಸಿತ್ತು. ನಿವೃತ್ತ ಐಎಎಸ್ ಅಧಿಕಾರಿ ಬಾಲಸುಬ್ರಮಣ್ಯಂ ಸಮಿತಿ ೧೩ ಲಕ್ಷ ರೈತರಿಂದ ಅಂದಾಜು ೩೦ ಲಕ್ಷ ಎಕರೆ ಭೂಮಿ ಕಬಳಿಕೆಯಾಗಿದೆ ಎಂದು ವರದಿ ನೀಡಿತ್ತು. ಭೂಮಿಯಲ್ಲಿ ಅಕ್ರಮವಾಗಿ ಸಾಗುವಳಿ ಮಾಡುತ್ತ ಸಕ್ರಮವಾಗಿ ಪ್ರಯತ್ನ ನಡೆಸಿ ಬಗರ್ ಹುಕುಂ ಸಾಗುವಳಿ ಸಮಿತಿಗಳ ಮುಂದೆ ಅರ್ಜಿ ಸಲ್ಲಿಸಿದವರೂ ಇದ್ದರು ಎಂದು ತಿಳಿಸಿದರು.
ನಗರ ಹಾಗೂ ಪಟ್ಟಣ ಪ್ರದೇಶದಲ್ಲಿ ರಿಯಲ್ ಎಸ್ಟೇಟ್ ಹಾಗೂ ಇತರೆ ಉದ್ದೇಶಕ್ಕಾಗಿ ಭೂಮಿ ಕಬಳಿಸಿರುವ ಪ್ರಮಾಣ ೫೦ ರಿಂ ೬೦ ಸಾವಿರ ಜನರಿರಬಹುದೆಂದು ಅಂದಾಜಿಸಲಾಗಿದೆ. ನಿಜವಾಗಿಯೂ ಕ್ರಮ ಆಗಬೇಕಾಗಿರುವುದು ಇಂತಹ ಭೂಗಳ್ಳರ ವಿರುದ್ದ ಆದರೆ, ಈಗ ರೈತರು ಸಹ ಭೂಗಳ್ಳರ ಸಾಲಿಗೆ ಬಂದಿದ್ದರು. ಹೀಗಾಗಿ ಸರ್ಕಾರದ ಮೇಲೆ ಒತ್ತಡವಿತ್ತು. ಆಡಳಿತ ಪಕ್ಷದ ಶಾಸಕರು, ಸಚಿವರು ಈ ಕಾನೂನು ಹಿಂಪಡೆಯಬೇಕೆAದು ಒತ್ತಡ ತಂದಿದ್ದರು. ಗಂಭೀರತೆ ಅರಿತ ಸರ್ಕಾರ ಸಣ್ಣ ರೈತರನ್ನು ಹೊರಗಿಡುವ ತಿದ್ದುಪಡಿ ತರುವುದಾಗಿ ಹೇಳಿತ್ತು. ಇದೀಗ ಇದರ ಸಾಧಕ ಬಾಧಕವನ್ನು ಪರಿಶೀಲಿಸಿದ ಸರ್ಕಾರ ಕಾಯ್ದೆಯಿಂದ ರೈತರಿಗೆ ವಿನಾಯಿತಿ ನೀಡಿದೆ ಎಂದು ಹೇಳಿದರು.
-ಹೆಚ್.ಕೆ.ಜಗದೀಶ್