ಸೋಮವಾರಪೇಟೆ, ಆ. 30: ಸ್ನೇಹಿತರೊಂದಿಗೆ ಬೇಟೆಗೆ ತೆರಳಿದ ಸಂದರ್ಭ ಆಕಸ್ಮಿಕವಾಗಿ ಗುಂಡೇಟು ಬಿದ್ದು ವ್ಯಕ್ತಿಯೋರ್ವರು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ನಾಲ್ಕು ದಿನಗಳ ಕಾಲ ಪೊಲೀಸ್ ವಶಕ್ಕೆÉ ಒಪ್ಪಿಸಲಾಗಿದೆ.
ನಿನ್ನೆ ವಶಕ್ಕೆ ಪಡೆದಿದ್ದ ನಾಲ್ವರನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹೆಚ್ಚಿನ ವಿಚಾರಣೆ ಹಾಗೂ ಕೃತ್ಯಕ್ಕೆ ಬಳಕೆ ಮಾಡಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳುವ ಹಿನ್ನೆಲೆ ನಾಲ್ವರನ್ನು ಮುಂದಿನ 4 ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ.
ಸ್ನೇಹಿತರೊಂದಿಗೆ ಕಳೆದ ತಾ. 28ರಂದು ಬೇಟೆಗೆ ತೆರಳಿದ್ದ ಯಡವಾರೆ ಗ್ರಾಮದ ಶಿವಕುಮಾರ್(58) ಎಂಬವರು ಆಕಸ್ಮಿಕವಾಗಿ ಗುಂಡೇಟು ತಗುಲಿ ನಿನ್ನೆ ದಿನ ಸಾವನ್ನಪ್ಪಿದ್ದರು. ಮೃತದೇಹವನ್ನು ಮಾರುತಿ ಓಮ್ನಿ ಕಾರಿನಲ್ಲಿಟ್ಟುಕೊಂಡಿದ್ದ ಸಹಚರರು, ದಿಕ್ಕುತೋಚದಂತಾಗಿದ್ದರು.
ಈ ಸಂದರ್ಭ ಪೊಲೀಸರು ಇತರ ಸಹಚರರಾದ ಐಗೂರಿನ ಚನ್ನಕೇಶವ, ಚೇತನ್, ತಾಕೇರಿ ಗ್ರಾಮದ ನಂದೀಶ, ಮಂಜುನಾಥ್ ಅವರುಗಳನ್ನು ನಿನ್ನೆಯೇ ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಈ ಸಂದರ್ಭ ಬೇಟೆಗೆ ತೆರಳಿದ್ದ ಕಿರಗಂದೂರಿನ ರವಿಕುಮಾರ್ ಎಂಬಾತ ಪರಾರಿಯಾಗಿದ್ದನು.
ಬಂಧಿತ ಆರೋಪಿಗಳನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಪ್ರಕರಣದ ಹೆಚ್ಚಿನ ತನಿಖೆ ಹಾಗೂ ಮತ್ತೋರ್ವ ಆರೋಪಿಯ ಬಂಧನ ಸೇರಿದಂತೆ ಕೃತ್ಯಕ್ಕೆ ಬಳಕೆ ಮಾಡಿದ್ದ ಆಯುಧಗಳನ್ನು ವಶಪಡಿಸಿಕೊಳ್ಳುವ ಉದ್ದೇಶದಿಂದ ತನಿಖಾಧಿಕಾರಿಗಳು ನ್ಯಾಯಾಲಯದ ಅನುಮತಿ ಕೇಳಿದ ಮೇರೆ, ನಾಲ್ವರನ್ನು ಪೊಲೀಸ್ ವಶಕ್ಕೆ ಒಪ್ಪಿಸಲಾಯಿತು.
ಬೇಟೆಗೆ ಬಳಕೆ ಮಾಡಿದ್ದ ಒಂದು ಕೋವಿಯನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಮೃತ ಶಿವಕುಮಾರ್ ಅವರ ಅಂತ್ಯಕ್ರಿಯೆ ಇಂದು ಸ್ವಗ್ರಾಮದಲ್ಲಿ ನೆರವೇರಿತು. ಮೃತರು ಪತ್ನಿ ಸೇರಿದಂತೆ ಈರ್ವರು ಮಕ್ಕಳನ್ನು ಅಗಲಿದ್ದಾರೆ.