ಮಡಿಕೇರಿ, ಆ. ೨೯: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸೋಮವಾರಪೇಟೆ ಹೋಬಳಿಯ ಘಟಕದ ಐಗೂರು ಕೇಂದ್ರವನ್ನು ಉದ್ಘಾಟನೆ ಮತ್ತು ಶ್ರೀ ಶಾಂತಮಲ್ಲ ಸ್ವಾಮಿ ದತ್ತಿನಿಧಿ ಹಾಗೂ ಸದಸ್ಯತ್ವ ಅಭಿಯಾನ ಕಾರ್ಯಕ್ರಮವು ಸೆ. ೧ ಬೆಳಿಗ್ಗೆ ೧೦ ಗಂಟೆಗೆ ಕಾಜೂರು ಹಿರಿಯ ಪ್ರಾಥಮಿಕ ಶಾಲೆಯ ಕಾವೇರಿ ಸಭಾಂಗಣದಲ್ಲಿ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಎಸ್.ಡಿ.ವಿಜೇತ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಉದ್ಘಾಟನೆಯನ್ನು ಕೊಡಗು ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ. ಚಂಗಪ್ಪ ನೆರವೇರಿಸಲಿದ್ದಾರೆ.
ನೂತನ ಸಮಿತಿಯ ಪದಾಧಿಕಾರಿಗಳಿಗೆ ಮತ್ತು ಸದಸ್ಯರುಗಳಿಗೆ ಪ್ರಮಾಣ ವಚನವನ್ನು ಕಸಾಪದ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಬೋಧಿಸಲಿದ್ದಾರೆ. ಅತಿಥಿಗಳಾಗಿ ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್, ಐಗೂರು ಗ್ರಾಮ ಪಂಚಾಯಿತಿ ಅದ್ಯಕ್ಷೆ ಪಾರ್ವತಿ ರಾಜಪ್ಪ ಮತ್ತಿತರರು ಭಾಗವಹಿಸಲಿದ್ದಾರೆ.
ದತ್ತಿ ಉಪನ್ಯಾಸವನ್ನು ಕಾಜೂರಿನ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕರಾದ ಅಜೀತ್ ಕುಮಾರ್ ನೀಡಲಿದ್ದಾರೆ. ಕಸಾಪ ಸದಸ್ಯತ್ವ ಅಭಿಯಾನಕ್ಕೆ ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಮುರುಳೀಧರ್ ಚಾಲನೆ ನೀಡಲಿದ್ದಾರೆ. ಸಮಿತಿಯ ನಿಯೋಜಿತ ಅಧ್ಯಕ್ಷರಾಗಿ ನಂಗಾರು ಕೀರ್ತಿ ಪ್ರಸಾದ್, ಗೌರವ ಕಾರ್ಯದರ್ಶಿಯಾಗಿ ಡಿ.ವಿ.ವಿಶ್ವನಾಥ್ ಅರಸ್ ಮತ್ತು ಎಂ.ಟಿ. ಸರಳಕುಮಾರಿ, ಗೌರವ ಕೋಶಾಧಿಕಾರಿಯಾಗಿ ಎಸ್.ಎಂ.ಬೆಳ್ಳಿಯಪ್ಪ ಕಾರ್ಯನಿರ್ವಹಿಸಲಿದ್ದಾರೆ.