ನಾಪೋಕ್ಲು, ಆ. ೨೮: ಸರ್ಕಾರಿ ಕಾಲೇಜುಗಳನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು. ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನಾಪೋಕ್ಲುವಿನಲ್ಲಿ ೨೦೨೧-೨೨ನೇ ಶೈಕ್ಷಣಿಕ ಸಾಲಿನ ಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರಿ ಶಾಲೆಯ ಪ್ರಥಮ ದರ್ಜೆ ಕಾಲೇಜುಗಳು ಉತ್ತಮ ಸೌಲಭ್ಯಗಳನ್ನು ಹೊಂದಿದ್ದು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಹಾಗೆಯೇ ಈ ವರ್ಷದ ಪ್ರಥಮ ವರ್ಷದ ಪದವಿಯ ಪ್ರವೇಶಾತಿಯು ರಾಜ್ಯಾದ್ಯಂತ ಕಡಿಮೆ ಕಂಡು ಬಂದಿರುವುದು ವಿಪರ್ಯಾಸವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಸಮಾರೋಪ ಸಮಾರಂಭದ ಭಾಷಣಕಾರರಾಗಿ ಇದೇ ಕಾಲೇಜಿನ ಮಾಜಿ ಪ್ರಾಂಶುಪಾಲರಾದ ಹಾಗೂ ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಕಾವೇರಿ ಮಾತನಾಡಿ, ಮಕ್ಕಳು ವಿದ್ಯಾಭ್ಯಾಸದ ಕಡೆ ಗಮನ ಕೊಡಬೇಕು ಹಾಗೆಯೇ ನಾನು ಎಂಬ ಅಹಂ ಬಿಡಬೇಕು ಎಂದರು. ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ರಂಗಸ್ವಾಮಿ ಎಲ್ಸಿ ವಹಿಸಿದ್ದರು. ಸಾಂಸ್ಕೃತಿಕ ಚಟುವಟಿಕೆಗಳ ಸಂಯೋಜಕರಾದ ಮನೋಜ್ ಕುಮಾರ್, ಕ್ರೀಡಾ ಚಟುವಟಿಕೆಗಳ ಸಂಯೋಜಕರಾದ ವಿನೋದ್ ಬಿ.ಎಸ್. ಸಮಾಜಶಾಸ್ತç ಸಹಾಯಕ ಪ್ರಾಧ್ಯಾಪಕರಾದ ನಂದೀಶ್ ಎಚ್.ಎಸ್. ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾದ ಶಾಮಲಾ ಜಿ.ವಿ. ಇದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸರ್ಕಾರಿ ಆಸ್ಪತ್ರೆ, ನಾಪೋಕ್ಲುವಿನ ವೈದ್ಯರಾದ ಪೂವಯ್ಯ ಕೆ.ಸಿ. ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ರಮೇಶ್ ಚÀಂಗಪ್ಪ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಮನು ಮಹೇಶ್, ಬಿ.ಪಿ ದೇವಯ್ಯ, ಎಂ.ಎಸ್. ಸುಬ್ರಮಣಿ ಮುಂತಾದವರು ಹಾಜರಿದ್ದರು. ಮುದ್ದಪ್ಪ ಕೆ.ಎಂ. ಅಧೀಕ್ಷಕರಾದ ಪ್ರಕಾಶ್ ವಿ.ಜೆ ಹಾಗೂ ಇತರ ಬೋಧಕ-ಬೋಧಕೇತರರು ಹಾಜರಿದ್ದರು.ಕಾರ್ಯಕ್ರಮದ ನಿರೂಪಣೆಯನ್ನು ದ್ವಿತೀಯ ಬಿಕಾಂ ವಿದ್ಯಾರ್ಥಿನಿ ನಿವೇದಿತ ಸುವರ್ಣ ಮತ್ತು ಫೈಜಿಯಾಬಿ ತೃತೀಯ ಬಿಕಾಂ ವಿದ್ಯಾರ್ಥಿನಿ ನಿರ್ವಹಿಸಿ, ದ್ವಿತೀಯ ಬಿಕಾಂ ವಿದ್ಯಾರ್ಥಿನಿ ವಿದ್ಯಾ ಎಂ.ಪಿ ಸ್ವಾಗತಿಸಿದರು. ದ್ವಿತೀಯ ಬಿಕಾಂ ವಿದ್ಯಾರ್ಥಿನಿ ಜಯಶ್ರೀ ವಂದನಾರ್ಪಣೆಯನ್ನು ಮಾಡಿದರು.