ಕುಶಾಲನಗರ, ಆ. ೨೮: ಪರಭಾಷೆಗಳ ವ್ಯಾಮೋಹದಿಂದಾಗಿ ಕನ್ನಡ ಭಾಷೆಯ ಕಡೆಗಣನೆ ಯಾಗುತ್ತಿದೆ ಎಂದು ಪೋಲೀಸ್ ಉಪ ಅಧೀಕ್ಷಕ ಆರ್.ವಿ. ಗಂಗಾಧರಪ್ಪ ವಿಷಾದಿಸಿದರು.

ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕುಶಾಲನಗರದ ಕನ್ನಡ ಭಾರತಿ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕನ್ನಡ ಭಾಷೆ ನೆಲದಲ್ಲಿ ಬದುಕುತ್ತಿರುವ ಜನರ ಮೊದಲ ಅಸ್ಮಿತೆಯಾಗಬೇಕು. ಇತರೆ ಭಾಷೆಗಳ ಬಳಕೆ ಅಗತ್ಯಕ್ಕೆ ಮಾತ್ರ ಇರಬೇಕು. ಪ್ರತಿಯೊಬ್ಬರು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗುವ ಮೂಲಕ ಕನ್ನಡ ಭಾಷೆ, ನೆಲ - ಜಲದ ಬಗ್ಗೆ ಅಭಿಮಾನ ಹೊಂದಬೇಕು ಎಂದು ಗಂಗಾಧರಪ್ಪ ಹೇಳಿದರು. ಶಾಲಾ ಕಾಲೇಜುಗಳ ವಿದ್ಯಾರ್ಥಿ ಗಳಲ್ಲಿ ಸಾಹಿತ್ಯ ಪ್ರಜ್ಞೆ ಬೆಳೆ ಯಲು ವಿದ್ಯಾರ್ಥಿಗಳು ಬರೆಯುವ ಆಸಕ್ತಿ ಮೂಡಿಸಿಕೊಳ್ಳಬೇಕು ಎಂದರು. ಮುಖ್ಯ ಅತಿಥಿಯಾಗಿದ್ದ ಕುಶಾಲನಗರದ ಸಾಹಿತಿ ಬಿ.ಆರ್. ನಾರಾಯಣ ಮಾತನಾಡಿ, ಕನ್ನಡ ಭಾಷೆ ಬಗೆಗಿನ ಪ್ರೀತಿ ಹಾಗೂ ಕಾಳಜಿ ಎಷ್ಟೇ ಇದ್ದರೂ ಅದರ ಬಗೆಗಿನ ಬದ್ಧತೆ ಮತ್ತು ಬಾಧ್ಯತೆಗಳು ಪ್ರಕಟವಾಗಲು ಸದಸ್ಯತ್ವ ಅಗತ್ಯ ಎಂದು ವಿದ್ಯಾರ್ಥಿಗಳಿಗೆ ಕರೆ ಕೊಟ್ಟರಲ್ಲದೇ, ಕನ್ನಡದ ಸೌಂದರ್ಯ ಇತರ ಭಾಷೆಗಳೊಂದಿಗೆ ಹೋಲಿಸಿ ದರೆ ಹಿರಿದು. ಇದನ್ನರಿತು ಉಳಿಸಿ ಬೆಳೆಸುವ ಕಾರ್ಯ ವಿದ್ಯಾರ್ಥಿಗ ಳಿಂದಾಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಕೆ.ಎಸ್. ಮೂರ್ತಿ ಮಾತನಾಡಿ, ಸಾಹಿತ್ಯ ಪರಿಷತ್ತಿನ ವತಿಯಿಂದ ಹೊರತಂದಿರುವ ‘ಆ್ಯಪ್’ ಮೂಲಕ ೧೫೦ ರೂಗೆ ಸ್ಮಾರ್ಟ್ ಕಾರ್ಡ್ ಹಾಗೂ ೨೫೦ ರೂ.ಗಳ ಸದಸ್ಯತ್ವವನ್ನು ಪ್ರತಿಯೊಬ್ಬರು ಪಡೆದುಕೊಳ್ಳ ಬಹುದಾಗಿದೆ. ಮಾಜಿ ಯೋಧರು ಹಾಗು ವಿಕಲಚೇತನರಿಗೆ ಉಚಿತ ಸದಸ್ಯತ್ವ ನೀಡಲಾಗುತ್ತಿದೆ. ಕುಶಾಲನಗರ ತಾಲೂಕಿನಲ್ಲಿ ಕನಿಷ್ಟ ೧೦ ಸಾವಿರ ಸದಸ್ಯತ್ವದ ಗುರಿ ಹೊಂದಲಾಗಿದೆ ಎಂದು ಅವರು ತಿಳಿಸಿದರು. ಕನ್ನಡ ಭಾರತಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ರುದ್ರಾಚಾರಿ, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪುರುಷೋತ್ತಮ, ಕನ್ನಡ ಪ್ರಾಧ್ಯಾಪಕ ಡಾ. ನಾಗೇಂದ್ರ ಸ್ವಾಮಿ, ಕಾಲೇಜಿನ ಎನ್‌ಎಸ್ ಸ್ ಘಟಕದ ಕಾರ್ಯಕ್ರಮ ಅಧಿಕಾರಿ ಮಂಜುನಾಥ, ಸಾಹಿತ್ಯ ಪರಿಷತ್ತಿನ ತಾಲೂಕು ಕಾರ್ಯದರ್ಶಿ ಎಸ್. ನಾಗರಾಜು, ಕೋಶಾಧಿಕಾರಿ ಕೆ.ವಿ. ಉಮೇಶ್, ತಾಲೂಕು ಮಾಜಿ ಅಧ್ಯಕ್ಷ ಟಿ.ಜಿ. ಪ್ರೇಮಕುಮಾರ್, ಹೆಬ್ಬಾಲೆ ಹೋಬಳಿ ಘಟಕದ ಅಧ್ಯಕ್ಷ ಎಂ.ಎನ್. ಮೂರ್ತಿ ಇದ್ದರು.