ಕುಶಾಲನಗರ, ಆ.೨೮: ಪ್ರತಿಯೊಂದು ಕಲೆಗಳಿಗೂ ಜಾನಪದ ಪ್ರ‍್ರಕಾರಗಳೇ ಮೂಲವಾಗಿದೆ ಎಂದು ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಾಚರಣಿಯಂಡ ಪಿ. ಅಪ್ಪಣ್ಣ ಅಭಿಪ್ರಾಯಪಟ್ಟರು. ಕರ್ನಾಟಕ ಜಾನಪದ ಪರಿಷತ್ತು ಕುಶಾಲನಗರ ತಾಲೂಕು ಘಟಕದ ವತಿಯಿಂದ ಇಲ್ಲಿನ ಸರಕಾರಿ ಇಂಜಿನಿಯರಿAಗ್ ಕಾಲೇಜಿನಲ್ಲಿ ಏರ್ಪಡಿಸಿದ್ದ ವಿಶ್ವಜಾನಪದ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜನಪದ ಅಂದರೆ ಗುಂಪು. ಜಾನಪದ ಅಂದರೆ ಅದರಿಂದ ಉತ್ಪತ್ತಿಯಾದ ವಿವಿಧ ಕಲಾ ಪ್ರಕಾರಗಳು ಎನ್ನುವುದನ್ನು ತಜ್ಞರು ವಿಶ್ಲೇಷಿಸಿದ್ದಾರೆ. ಜಾನಪದ ಗ್ರಾಮೀಣ ಪ್ರದೇಶಗಳಿಂದ ಉದ್ಭವಿಸಿದೆ. ಪ್ರತಿ ಭಾಷೆ, ಪ್ರತಿಯೊಂದು ಊರಿನಲ್ಲೂ ಜಾನಪದ ಇದೆ. ಕೊಡಗಿನಲ್ಲಿ ಜಾನಪದ ಸಂಸ್ಕೃತಿ ಶ್ರೀಮಂತವಾಗಿದೆ. ನಡಿಕೇರಿಯಂಡ ಚಿಣ್ಣಪ್ಪ ಅವರು ೧೯೦೦ರ ಸುಮಾರಿಗೆ ಜಾನಪದದ ಬಗ್ಗೆ ದಕ್ಷಿಣ ಭಾರತದಲ್ಲೇ ದೊಡ್ಡದಾದ ಪುಸ್ತಕವನ್ನು ಕೊಡವ ಭಾಷೆಯಲ್ಲಿ ಹೊರತಂದಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಇಂಜಿನಿಯರಿAಗ್ ಕಾಲೇಜು ಪ್ರಾಂಶುಪಾಲ ಡಾ.ಸೀನಪ್ಪ, ಸಮಾಜವನ್ನು ಕಣ್ತೆರೆಸುವ ಹಾಡುಗಳು ಕಣ್ಮರೆ ಆಗುತ್ತಿರುವ ಸಂದರ್ಭದಲ್ಲಿ ಜಾನಪದ ಹಾಡುಗಳು ಸ್ಫೂರ್ತಿ ತುಂಬುತ್ತವೆ ಎಂದರು. ಕರ್ನಾಟಕ ಜಾನಪದ ಪರಿಷತ್ತು ಕುಶಾಲನಗರ ತಾಲೂಕು ಘಟಕದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ಮಾತನಾಡಿ ದಿನದ ಮಹತ್ವವನ್ನು ವಿವರಿಸಿದರು.

ಖ್ಯಾತ ನಾಟಿ ವೈದ್ಯೆ ಮಾದಾಪಟ್ಟಣದ ಐನಮಂಡ ಲೀಲಾವತಿ ಗಣಪತಿ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ವಿದ್ವಾನ್ ಬಿ.ಸಿ. ಶಂಕರಯ್ಯ, ಕುಶಾಲನಗರÀ ಗೌಡ ಸಮಾಜದ ಹೇಮಮಾಲಿನಿ ಟಿ.ವಿ., ಲತಾ ಹಾಗೂ ಗಾಯಕ ಬಿ.ಎಸ್ ಪರಮೇಶ್ ಜಾನಪದ ಗಾಯನದ ಮೂಲಕ ರಂಜಿಸಿದರು.

ಜಾನಪದ ಪರಿಷತ್‌ನ ವನಿತಾ ಚಂದ್ರಮೋಹನ್, ವಹೀದ್‌ಜಾನ್, ಡಿ. ಆರ್.ಸೋಮಶೇಖರ್, ಅಕ್ಷಯ್ ಪನ್ಯಾಡಿ, ಕೊಡಗನ ಹರ್ಷ, ಕಾಲೇಜು ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಇದ್ದರು. ಕಾಲೇಜು ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಪರಿಷತ್ತು ಸದಸ್ಯ ಸುನಿಲ್ ಪೊನ್ನೇಟಿ ನಿರೂಪಿಸಿದರು. ಅಕ್ಷಯ್ ಸ್ವಾಗತಿಸಿ ಟಿ.ಆರ್. ಪ್ರಭುದೇವ್ ವಂದಿಸಿದರು.