ಸೋಮವಾರಪೇಟೆ, ಆ.೨೮: ಗೌರಿ ಗಣಪತಿ ಉತ್ಸವ ಮೂರ್ತಿಗಳನ್ನು ಆದರ್ಶ ರೀತಿಯಲ್ಲಿ ವಿಸರ್ಜನೆ ಮಾಡಲು ತಾಲೂಕು ಆಡಳಿತ ಕ್ರಮ ಕೈಗೊಳ್ಳಬೇಕೆಂದು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ತಾಲೂಕು ತಹಶೀಲ್ದಾರ್ ಗೋವಿಂದರಾಜು ಅವರಿಗೆ ಮನವಿ ಸಲ್ಲಿಸಲಾಯಿತು.
ಉತ್ಸವ ಮೂರ್ತಿಗಳನ್ನು ಹರಿಯುವ ನೀರಿನಲ್ಲಿ ವಿಸರ್ಜಿಸಬೇಕು. ಒಂದು ವೇಳೆ ಕೆರೆಗಳಲ್ಲಿ ವಿಸರ್ಜನೆ ಮಾಡುವುದಿದ್ದರೆ ಸೂಕ್ತ ರೀತಿಯಲ್ಲಿ ವ್ಯವಸ್ಥೆ ಮಾಡಿಕೊಳ್ಳಬೇಕು. ಕೆಲವು ಕಡೆಗಳಲ್ಲಿ ನೀರಿನ ಟ್ಯಾಂಕ್ಗಳಲ್ಲಿ ವಿಸರ್ಜನೆ ಮಾಡಿ ನಂತರ ಎಲ್ಲೆಂದರಲ್ಲಿ ಎಸೆಯುತ್ತಿರುವ ಘಟನೆಗಳು ಕಂಡುಬರುತ್ತಿದ್ದು, ಇದು ಹಿಂದೂ ಧಾರ್ಮಿಕತೆಗೆ ಸರಿಹೊಂದುವುದಿಲ್ಲ. ಈ ಹಿನ್ನೆಲೆ ಗೌರಿ ಗಣೇಶ ಉತ್ಸವ ಮೂರ್ತಿಗಳ ವಿಸರ್ಜನೆಗೆ ಸೂಕ್ತ ವ್ಯವಸ್ಥೆ ಕೈಗೊಳ್ಳುವಂತೆ ಗಮನ ಹರಿಸಬೇಕೆಂದು ಮನವಿ ಮಾಡಲಾಗಿದೆ.ಈ ಸಂದರ್ಭ ಹಿಂದೂ ಜನಜಾಗೃತಿ ಸಮಿತಿಯ ಎಂ.ಬಿ. ಅಭಿಮನ್ಯುಕುಮಾರ್, ಗಣೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.