ಶ್ರೀಮಂಗಲ, ಆ. ೨೭: ಒಬ್ಬ ವ್ಯಕ್ತಿಯ ಸಾಧನೆಯ ಹಿಂದೆ ಶಿಕ್ಷಕರ ಮಾರ್ಗದರ್ಶನ ಮಹತ್ವದ್ದು, ಎಂಬುದಕ್ಕೆ ನಾನೇ ಸಾಕ್ಷಿ ಎಂದು ಒಲಂಪಿಯನ್ ಬಾಳೆಯಡ ಕೆ. ಸುಬ್ರಮಣಿ ಪ್ರತಿಪಾದಿಸಿದರು.

ಟಿ. ಶೆಟ್ಟಿಗೇರಿ ರೂಟ್ಸ್ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ವಲಯಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ನಾನು ವಿದ್ಯಾರ್ಥಿಯಾಗಿದ್ದಾಗ ಶಿಕ್ಷಕರು ನನ್ನನ್ನು ಏನಾದರೂ ಸಾಧನೆ ಮಾಡುವಂತೆ ಒತ್ತಾಯಿಸುವು ದರೊಂದಿಗೆ ಉತ್ತಮ ಪ್ರೋತ್ಸಾಹ ಹಾಗೂ ತರಬೇತಿ ನೀಡಿದ್ದರಿಂದಲೇ ನಾನು ಆರ್ಮಿ ಅಧಿಕಾರಿ ಹಾಗೂ ಒಲಂಪಿಯನ್ ಆದೆ. ನಮ್ಮ ಭಾರತ ದೇಶ, ನಮ್ಮ ತಂದೆ ತಾಯಿ, ಗುರುಗಳು, ಉತ್ತಮ ಸ್ನೇಹಿತರು ಹಾಗೂ ಎಲ್ಲದಕ್ಕಿಂತ ಮುಖ್ಯವಾಗಿ ಉತ್ತಮ ವಿದ್ಯಾಭ್ಯಾಸ ಈ ಐದು ಸಂಪತ್ತನ್ನು ಸರಿಯಾಗಿ ಉಳಿಸಿ ಕೊಂಡು ಮುಂದಿನ ಪೀಳಿಗೆಗೆ ಬಿಟ್ಟು ಕೊಡಬೇಕು ಎಂಬ ಸಂಸ್ಕಾರವನ್ನು ಶಾಲೆಯಲ್ಲಿ ಮಾತ್ರ ಕಲಿಯಲು ಸಾಧ್ಯ. ಆದ್ದರಿಂದ ಶಾಲೆಯಲ್ಲಿ ಸಿಕ್ಕಿದಷ್ಟು ಜ್ಞಾನವನ್ನು ಸಂಪಾದನೆ ಮಾಡಿಕೊಂಡು ೨೫ ವರ್ಷದೊಳಗೆ ಸ್ವಾವಲಂಬಿಗಳಾಗಿ ಬದುಕಿ ಉತ್ತಮ ಸಾಧನೆ ಮಾಡಿ. ಈಗ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲೂ ಬೇಕಾದಷ್ಟು ಅವಕಾಶಗಳಿವೆ. ಎಷ್ಟು ಚೆನ್ನಾಗಿ ಓದುತ್ತೀರೋ ಅಷ್ಟು ಉತ್ತಮ ಸಾಧನೆ ಮಾಡಬಹುದು. ಬದುಕಿನಲ್ಲಿ ಕಳೆದುಹೋದ ಸಮಯ ಮತ್ತೆ ಸಿಗುವುದಿಲ್ಲ. ಒಂದೊAದು ನಿಮಿಷವನ್ನೂ ವ್ಯರ್ಥ ಮಾಡದೆ, ಮೊಬೈಲ್ ಫೋನ್'ನಿಂದ ದೂರ ಉಳಿದು ಶಿಕ್ಷಣ ಹಾಗೂ ಕ್ರೀಡೆ ಎರಡು ಕ್ಷೇತ್ರದಲ್ಲೂ ಸಾಧನೆ ಮಾಡಿ ಪೋಷಕರು ಹಾಗೂ ಓದಿದ ಶಾಲೆಗೆ ಕೀರ್ತಿ ತನ್ನಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ರೂಟ್ಸ್ ವಿದ್ಯಾಸಂಸ್ಥೆಯ ನಿರ್ದೇಶಕ ಮಲ್ಲಂಗಡ ನಿರನ್ ಉತ್ತಪ್ಪ ಮಾತನಾಡಿ ಈ ವಲಯ ಮಟ್ಟದ ಕ್ರೀಡಾಂಗಣದಲ್ಲಿ ೨೦ಕ್ಕೂ ಹೆಚ್ಚು ಶಾಲೆಗಳು ಭಾಗವಹಿಸುತ್ತಿವೆ. ಎಲ್ಲಾ ತಂಡಗಳು ಗೆಲ್ಲಲು ಸಾಧ್ಯವಿಲ್ಲ. ಆದರೆ ಭಾಗವಹಿಸುವಿಕೆ ಬಹಳ ಮುಖ್ಯ ಎಂದರು. ಈ ಸಂದರ್ಭ ರೂಟ್ಸ್ ವಿದ್ಯಾಸಂಸ್ಥೆಯ ನಿರ್ದೇಶಕ ಮಲ್ಲಂಗಡ ನಿರನ್ ಉತ್ತಪ್ಪ, ಒಲಂಪಿಯನ್ ಕರ್ನಲ್ ಬಾಳೆಯಡ ಕೆ. ಸುಬ್ರಮಣಿ, ಶ್ರೀಮತಿ ಅನುಜ ಸುಬ್ರಮಣಿ, ಕೊಡಗು ಪತ್ರಕರ್ತರ ಸಂಘದ ನಿರ್ದೇಶಕ ಚೆಟ್ಟಂಗಡ ರವಿ ಸುಬ್ಬಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೀಳಗಿ, ಬಿ.ಆರ್.ಸಿ. ವನಜಾಕ್ಷಿ, ಟಿ.ಪಿ.ಒ. ಗಾಯತ್ರಿ, ಸಿ.ಆರ್.ಪಿ. ಅನಿತ ಜೀವನ್, ರೂಟ್ಸ್ ಪ್ರೌಢಶಾಲಾ ಮುಖ್ಯಶಿಕ್ಷಕಿ ಮಾಚಂಗಡ ಕೋಕಿಲ ಬಿದ್ದಪ್ಪ, ರೂಟ್ಸ್ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಕೇಚೆಟ್ಟಿರ ಮಮತ, ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಪ್ರವೀಣ್, ತಾಲೂಕು ಸಂಘದ ಅಧ್ಯಕ್ಷ ಸುಬ್ಬಯ್ಯ, ಉಪಾಧ್ಯಕ್ಷ ತಮ್ಮಯ್ಯ, ಕಾರ್ಯದರ್ಶಿ ಪ್ರಭು ಮತ್ತಿತರರು ಹಾಜರಿದ್ದರು.