ಮಡಿಕೇರಿ, ಆ. ೨೮: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಡಿಕೇರಿಯ ಕಾಲೇಜು ವಾರ್ಷಿಕೋತ್ಸವ ಸಮಾರಂಭವು ಕಾರ್ಯಪ್ಪ ಒಳಾಂಗಣ ಕ್ರೀಡಾಂಗಣದ ವೇದಿಕೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರು ಆಗಮಿಸಿದ್ದರು. ಕಾಲೇಜು ಪ್ರಾಂಶುಪಾಲರಾದ ಡಾ. ನಿರ್ಮಲ ಕೆ.ಡಿ. ಅವರ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ವಿದ್ಯಾರ್ಥಿಗಳು ದೇಶದ ಭವಿಷ್ಯತ್ತು. ಸರ್ಕಾರಿ ಕಾಲೇಜಿನಲ್ಲಿ ಅತ್ಯುತ್ತಮ ಭೋಧಕರು ಇರುತ್ತಾರೆ. ವಿದ್ಯಾರ್ಥಿಗಳು ಹಲವಾರು ತಪ್ಪುಗಳನ್ನು ಮಾಡಬಹುದು. ಆದರೆ ಅವರ ತಪ್ಪುಗಳನ್ನು ತಿದ್ದುವುದು ಶಿಕ್ಷಕರ ಕರ್ತವ್ಯ. ಜೀವನದಲ್ಲಿ ಸಾರ್ವಜನಿಕ ಸೇವೆ ಮಾಡುವುದು ಬಹು ಮುಖ್ಯವಾದದ್ದು ಎಂದರು. ಯುವ ಜನತೆ ಪದವಿ ಹಂತದಲ್ಲಿ ಒಂದು ಉತ್ತಮ ಸಾಧನೆ ಮಾಡುವಂತೆ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಪೂರಕವಾದ ಹಲವಾರು ಸಂಘಟನೆಗಳು ಅಸ್ತಿತ್ವದಲ್ಲಿದೆ. ಅದರ ಸದುಪಯೋಗ ಪಡೆದುಕೊಳ್ಳಬೇಕು. ಮುಂದಿನ ಪೀಳಿಗೆಗಾಗಿ ಹೆಣ್ಣು ಮಕ್ಕಳು ವಿದ್ಯಾಭ್ಯಾಸ ಪಡೆಯುವುದು ಅಗತ್ಯ. ಆಗ ಶೈಕ್ಷಣಿಕ ಕ್ಷೇತ್ರ ಮಹಿಳೆಯರಿಗೂ ಸಮಾನತೆ ಕಲ್ಪಿಸಿದಂತೆ ಆಗುತ್ತದೆ ಎಂದು ಅಭಿಪ್ರಾಯಪಟ್ಟರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ನಿರ್ಮಲ ಕೆ.ಡಿ. ಮಾತನಾಡಿ, ಕಾಲೇಜು ಉತ್ತಮ ಶಿಕ್ಷಣಕ್ಕೆ ಆದ್ಯತೆ ಕೊಡುತ್ತಾ ಬಂದಿದೆ. ಕೊರೊನಾ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರ ಹಲವು ಗೊಂದಲಕ್ಕೆ ಒಳಗಾಗಿತ್ತು. ಇಲ್ಲಿರುವ ಪ್ರತೀ ವಿದ್ಯಾರ್ಥಿಗಳು ಒಂದಲ್ಲ ಒಂದು ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಗಳ ಕುರಿತು ಮಾತನಾಡಿ ವ್ಯಕ್ತಿತ್ವದ ನಡುವೆ ಆತನ ಆಸಕ್ತಿ ಸಂಬAಧ ಹೊಂದಿರುತ್ತದೆ. ಶಿಕ್ಷಣದ ಬೇರು ಕಹಿಯಾಗಿರುತ್ತದೆ, ಆದರೆ ಸಾಧನೆ ಮಾಡಿದ ನಂತರದಲ್ಲಿ ಶಿಕ್ಷಣ ರುಚಿಸುತ್ತದೆ ಎಂದರು. ಕಾರ್ಯಕ್ರಮದಲ್ಲಿ ಸದರಿ ವರ್ಷದಲ್ಲಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಮಧ್ಯಾಹ್ನದ ಊಟದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕಾಲೇಜಿನ ವಾರ್ಷಿಕ ವರದಿಯನ್ನು ರಾಜ್ಯಶಾಸ್ತç ವಿಭಾಗದ ಮುಖ್ಯಸ್ಥರಾದ ಪ್ರೊ. ಕುಸುಮ ಕೆ.ಪಿ. ಅವರು ಮಂಡಿಸಿದರು. ಅತಿಥಿಗಳನ್ನು ವಾಣಿಜ್ಯ ವಿಭಾಗದ ಸುಪ್ರಿಯಾ ಅವರು ಪರಿಚಯಿಸಿದರು, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಕಾವೇರಿ ಅವರು ಸ್ವಾಗತಿಸಿದರು.
ಕ್ರೀಡಾ ಸಮಿತಿಯ ನಿರ್ದೇಶಕರಾದ ಪ್ರೊ. ಎವರೆಸ್ಟ್ ರೋಡ್ರಿಗಸ್ ಅವರು ವಂದಿಸಿದರು. ವಿದ್ಯಾರ್ಥಿನಿಯರಾದ ಸುನೇಹ ಮತ್ತು ದೀಪಿಕಾ ಕಾರ್ಯಕ್ರಮ ನಿರೂಪಿಸಿದರು.