ಅಮ್ಮತ್ತಿ, ಆ. ೨೮: ಅಮ್ಮತ್ತಿ ಕಾರ್ಮಾಡುವಿನಲ್ಲಿ ಶ್ರೀ ಚೌಡೇಶ್ವರಿ ಗಣಪತಿ ಸೇವಾ ಸಮಿತಿ ವತಿಯಿಂದ ೩೨ ನೇ ವರ್ಷದ ಗಣೇಶೋತ್ಸವ ಅದ್ಧೂರಿಯಾಗಿ ನಡೆಯಲಿದೆ.
ತಾ. ೩೧ ರಂದು ಕಾರ್ಮಾಡುವಿನಲ್ಲಿ ಗಣೇಶನ ಪ್ರತಿಷ್ಠಾಪನೆಯ ನಂತರ ೧೦ ದಿನಗಳ ಕಾಲ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿದೆ. ಸ್ಥಳೀಯ ಶಾಲಾ-ಕಾಲೇಜು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ರಾಜೇಶ್ ಅವರಿಂದ ಮ್ಯಾಜಿಕ್ ಶೋ ನಡೆಯಲಿದೆ. ಸೆಪ್ಟೆಂಬರ್ ೧೦ ರಂದು ರಾತ್ರಿ ಭವ್ಯ ವಿದ್ಯುತ್ ಅಲಂಕೃತ ಮಂಟಪದಲ್ಲಿ ಶ್ರೀ ಗೌರಿ-ಗಣೇಶ ಮೂರ್ತಿಯನ್ನು ಮೈಸೂರಿನ ಪ್ರತಿಷ್ಠಿತ ವಾದ್ಯಗೋಷ್ಠಿ, ಚಾಮುಂಡೇಶ್ವರಿಯ ಕಲಾಕೃತ ಮಂಟಪ, ಮಂಗಳೂರಿನ ಕೀಲುಕುದುರೆಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಬೆಳಿಗ್ಗೆ ಮದ್ರಿರ ಗಣೇಶ್ ಅವರ ಕೆರೆಯಲ್ಲಿ ಉತ್ಸವ ಮೂರ್ತಿಯ ವಿಸರ್ಜನೆ ಮಾಡಲಾಗುತ್ತದೆ ಎಂದು ಸಮಿತಿ ಅಧ್ಯಕ್ಷ ವಿ.ಆರ್. ಸತೀಶ್ ತಿಳಿಸಿದ್ದಾರೆ.
ಗಣಪತಿ ಸೇವಾ ಸಮಿತಿ ಸಭೆ: ಪದಾಧಿಕಾರಿಗಳ ಆಯ್ಕೆ
ಮಡಿಕೇರಿ: ವೀರಾಜಪೇಟೆ ಗಾಂಧಿನಗರದ ಶ್ರೀ ಗಣಪತಿ ಸೇವಾ ಸಮಿತಿಯ ೩೦ನೇ ವರ್ಷದ ಗೌರಿ ಗಣೇಶೋತ್ಸವ ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲು ವೀರಾಜಪೇಟೆ ಪ್ರವಾಸಿ ಮಂದಿರದಲ್ಲಿ ಮಾಜಿ ಅಧ್ಯಕ್ಷ ಪಿ.ಎ. ಮಂಜುನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಅಧ್ಯಕ್ಷರಾಗಿ ಪಿ. ನಿತಿನ್ ಅವಿರೋಧವಾಗಿ ಆಯ್ಕೆಯಾಗಿ ಮಾತನಾಡಿ, ಮಂಗಳವಾರ ಗಣೇಶ ಚತುರ್ಥಿಯ ದಿನದಂದು ಬೆಳಿಗ್ಗೆ ೬ ಗಂಟೆಗೆ ಗಣಪತಿ ಹೋಮ, ೧೨ ಗಂಟೆಗೆ ಗಣಪತಿಮೂರ್ತಿಯ ಪ್ರತಿಷ್ಠಾಪನೆ ಮತ್ತು ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿದೆ. ಹತ್ತು ದಿನ ವಿಶೇಷಪೂಜಾ ಕಾರ್ಯಕ್ರಮಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು. ಸೆಪ್ಟೆಂಬರ್ ೯ ರಂದು ರಾತ್ರಿ ನಗರದ ಮುಖ್ಯಬೀದಿಗಳಲ್ಲಿ ಅದ್ಧೂರಿಯ ವಾದ್ಯಮೇಳ, ಮೆರವಣಿಗೆಯೊಂದಿಗೆ ಸೆಪ್ಟೆಂಬರ್ ೧೦ರಂದು ಬೆಳಗಿನ ಜಾವ ಗೌರಿ ಕೆರೆಯಲ್ಲಿ ಗಣಪತಿ ಮೂರ್ತಿಯನ್ನು ವಿಸರ್ಜಿಸಲಾಗುವುದು ಎಂದು ತಿಳಿಸಿದರು.
ಗೌರವ ಅಧ್ಯಕ್ಷರುಗಳಾಗಿ ರಾಕೇಶ್ ಬಿದಪ್ಪ ಮತ್ತು ಪಿ.ಎ. ಮಂಜುನಾಥ್, ಅಧ್ಯಕ್ಷರಾಗಿ ಪಿ. ನಿತಿನ್, ಉಪಾಧ್ಯಕ್ಷರಾಗಿ ಐಚಂಡ ಸದಾ, ಕಾರ್ಯದರ್ಶಿಯಾಗಿ ರಂಜನ್ ನಾಯ್ಡು, ಜಂಟಿ ಕಾರ್ಯದರ್ಶಿಯಾಗಿ ಚಿಲ್ಲವಂಡ ಗಣಪತಿ, ಖಜಾಂಜಿಯಾಗಿ ರಂಜನ್ ನಾಯ್ಡು, ಪ್ರಿತೇಶ್ ರೈ, ಸದಸ್ಯರಾಗಿ ಕೌಶಿಕ್, ಸುಬ್ರಮಣಿ, ಚೇಂದ್ರಿಮಾಡ ಪೊನ್ನಣ್ಣ, ಮುಂಡಿಯೊಳAಡ ಕುಟ್ಟಪ್ಪ, ನಂಬುಡುಮಾಡ ದೀಕ್ಷಿತ್, ಬೊಪ್ಪಂಡ ಚಂಗಪ್ಪ, ಅಲ್ಲಾರಂಡ ಚಿನ್ನಪ್ಪ ಹಾಗೂ ವೇದಾಂತ್ ಆಯ್ಕೆಯಾದರು.
ಹೊದ್ದೂರಿನಲ್ಲಿ ಗಣೇಶೋತ್ಸವ
ಮಡಿಕೇರಿ: ಹೊದ್ದೂರು ಶ್ರೀ ಪ್ರಸನ್ನ ಗಣಪತಿ ಸಂಘದ ಆಶ್ರಯದಲ್ಲಿ ೧೬ನೇ ವರ್ಷದ ಶ್ರೀ ಗೌರಿ-ಗಣೇಶೋತ್ಸವ ಶ್ರದ್ಧಾ ಭಕ್ತಿಯಿಂದ ಜರುಗಲಿದೆ.
ತಾ. ೩೧ ರಂದು ಗ್ರಾಮದ ಶ್ರೀ ಶಾಸ್ತ-ಈಶ್ವರ ದೇವಾಲಯದ ಆವರಣದಲ್ಲಿ ಮೂರ್ತಿಯ ಪ್ರತಿಷ್ಠಾಪನೆ, ವಿವಿಧ ಪೂಜಾ ಕೈಂಕರ್ಯಗಳು ಜರುಗಲಿವೆ. ಮಧ್ಯಾಹ್ನ ಅನ್ನ ಸಂತರ್ಪಣೆ ಬಳಿಕ ೨ ಗಂಟೆಯ ನಂತರ ಪುಷ್ಪಾಲಂಕೃತ ವಾಹನದಲ್ಲಿ ಪ್ರತಿಷ್ಠಾಪಿಸಿ, ಗ್ರಾಮದ ಮುಖ್ಯ ರಸ್ತೆಯಲ್ಲಿ ಮೆರವಣಿಗೆಯೊಂದಿಗೆ ಬಲಮುರಿ ಕಾವೇರಿ ಹೊಳೆಯಲ್ಲಿ ಬಾಗಿನ ಅರ್ಪಿಸಿ, ವಿಸರ್ಜಿಸಲಾಗುವುದು.