ಸುಂಟಿಕೊಪ್ಪ, ಆ. ೨೬: ಸ್ವಾತಂತ್ರö್ಯ ಅಮೃತ ಮಹೋತ್ಸವದ ಅಂಗವಾಗಿ ಸರಕಾರ ಆಯೋಜಿಸಿದ ಓದುವ ಬೆಳಕು ಕಾರ್ಯಕ್ರಮದ ಅಂಗವಾಗಿ ಚದುರಂಗ ಆಟ ಆಡೋಣ ಅಭಿಯಾನವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಮಹೇಶ್ ಉದ್ಘಾಟಿಸಿದರು.
ಇಲಿನ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದ್ದ ಕೊಡಗು ಜಿಲ್ಲಾ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ವತಿಯಿಂದ ಪಂಚಾಯಿತಿ ಮಟ್ಟದ ೧ ರಿಂದ ೭ನೇ ತರಗತಿ ಹಾಗೂ ೮ ರಿಂದ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮುಕ್ತ ಚದುರಂಗ ಸ್ಪರ್ಧೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಪಿಡಿಓ ವೇಣುಗೋಪಾಲ್, ಸರಕಾರದ ಆದೇಶದಂತೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿಜೇತರಾದ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದವರು ತಾಲೂಕು ಮಟ್ಟದಲ್ಲಿ ಅಲ್ಲಿಂದ ಜಿಲ್ಲಾ ಮಟ್ಟದಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ಭಾಗವಹಿಸುವ ಅವಕಾಶವಿದೆ. ಶಿಸ್ತಿನ ಆಟ ಚದುರಂಗದಲ್ಲಿ ನಮ್ಮ ಗ್ರಾಮ ಪಂಚಾಯಿತಿ ಮಟ್ಟದ ವಿದ್ಯಾರ್ಥಿಗಳು ವಿಜೇತರಾಗಿ ಪಂಚಾಯಿತಿಗೆ ಕೀರ್ತಿ ತರಲಿ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಸುಂಟಿಕೊಪ್ಪ ಪ್ರಾಥಮಿಕ ಶಾಲಾ ಶಿಕ್ಷಕಿ ಸೌಭಾಗ್ಯ, ಸರಕಾರಿ ಪದವಿಪೂರ್ವ ಪ್ರೌಢಶಾಲಾ ಶಿಕ್ಷಕರಾದ ಮಂಜುನಾಥ್ ಕೊಡಗು ಪತ್ರಕರ್ತರ ಸಂಘದ ನಿರ್ದೇಶಕ ಜಿ.ಕೆ. ಬಾಲಕೃಷ್ಣ, ಪಂಚಾಯಿತಿ ಸಿಬ್ಬಂದಿಗಳಾದ ಎಸ್.ಕೆ. ಚಂದ್ರಕಲಾ, ಎಸ್.ಎ. ಶ್ರೀನಿವಾಸ್, ಡಿ.ಎಂ. ಮಂಜುನಾಥ್, ಗ್ರಂಥಾಲಯದ ಮೇಲ್ವಿಚಾರಕಿ ಸೌಜತ್ ಮತ್ತಿತರರು ಇದ್ದರು.