ಸೋಮವಾರಪೇಟೆ, ಆ.೨೭: ಇಲ್ಲಿನ ತಾಲೂಕು ಕಚೇರಿಯಲ್ಲಿ ಸಾರ್ವಜನಿಕ ಕೆಲಸಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಸಿ. ಮತ್ತು ಡಿ. ಜಮೀನಿಗೆ ಕೆಲವರಿಗೆ ಮಾತ್ರ ಪಟ್ಟೆ ನೀಡಿ ಉಳಿದವರನ್ನು ವಂಚಿಸಲಾಗುತ್ತಿದೆ. ಆದರೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದವರು ಮೊಟ್ಟೆ ವಿಷಯದಲ್ಲಿ ಜಗಳವಾಡುತ್ತಿದ್ದು, ಜೆಡಿಎಸ್ ಪಕ್ಷದಿಂದ ಪಟ್ಟೆಗಾಗಿ ೨೯ರಂದು ಪ್ರತಿಭಟನೆ ನಡೆಯಲಿದೆ ಎಂದು ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಬಗ್ಗನ ಅನಿಲ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತಾ. ೨೯ರಂದು ಬೆಳಿಗ್ಗೆ ೧೦.೩೦ಕ್ಕೆ ವಿವೇಕಾನಂದ ವೃತ್ತದಿಂದ ತಾಲೂಕು ಕಚೇರಿವರೆಗೆ ಪ್ರತಿಭಟನೆ ನಡೆಸಿ ಆಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದರು.
ತಾಲೂಕು ಕಚೇರಿಯಲ್ಲಿ ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಫಾರಂ ೫೦-೫೩ ಅಡಿಯಲ್ಲಿ ೧೯೯೨ ರಿಂದ ೧೯೯೯ರವರೆಗೆ ರೈತರು ಅರ್ಜಿ ಸಲ್ಲಿಸಿದ್ದಾರೆ. ಕೆಲವು ಪಕ್ಷದವರು, ಹಣ ನೀಡಿದವರಿಗೆ ಮಾತ್ರ ಭೂಮಿ ಮಂಜೂರಾಗಿದೆ. ಬಡ ರೈತರು ಮತ್ತು ಮಧ್ಯಮ ವರ್ಗದವರಿಗೆ ಪಟ್ಟೆ ಸಿಕ್ಕಿಲ್ಲ ಎಂದು ಆರೋಪಿಸಿದರು. ಪಟ್ಟೆಗಾಗಿ ನೆಮ್ಮದಿ ಕೇಂದ್ರ, ತಾಲೂಕು ಕಚೇರಿಗೆ ಅಲೆದು ಬಡ ರೈತರು ಸುಸ್ತಾಗಿದ್ದಾರೆ. ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎಂಬAತೆ ಆಡಳಿತ ನಡೆಯುತ್ತಿದೆ. ಅರ್ಜಿ ಸಲ್ಲಿಸಿ ಹಕ್ಕುಪತ್ರ ಪಡೆಯದಿರುವ ರೈತರನ್ನು ಒಗ್ಗೂಡಿಸಿ ಹೋರಾಟ ನಡೆಸಲಾಗುವುದು. ಎಲ್ಲರಿಗೂ ಜಾಗ ಮಂಜೂರು ಮಾಡಿಕೊಡಬೇಕು ಎಂದು ಧರಣಿಯ ಮೂಲಕ ಸರ್ಕಾರಕ್ಕೆ ಒತ್ತಡ ಹೇರಲಾಗುವುದು ಎಂದರು.
ಪಕ್ಷದ ಕ್ಷೇತ್ರ ಸಮಿತಿ ಅಧ್ಯಕ್ಷ ಹೆಚ್.ಆರ್. ಸುರೇಶ್ ಮಾತನಾಡಿ, ಒಂದೇ ಪೈಸಾರಿ ಸರ್ವೆ ನಂಬರ್ನ ಸಿ ಮತ್ತು ಡಿ. ಜಮೀನಿಗೆ ಹಲವರಿಗೆ ಪಟ್ಟೆ ಕೊಟ್ಟಿದ್ದು, ರಾಜಕೀಯ ಕಾರಣದಿಂದ ಕೆಲವರಿಗೆ ಕೊಟ್ಟಿಲ್ಲ. ಕಾಂಗ್ರೆಸ್-ಬಿಜೆಪಿಯವರು ಮೊಟ್ಟೆಗಾಗಿ ಹೋರಾಟ ಮಾಡುತ್ತಿದ್ದಾರೆ. ಜೆಡಿಎಸ್ನವರು ‘ಮೊಟ್ಟೆಗಾಗಿ ಅಲ್ಲ ಪಟ್ಟೆಗಾಗಿ ಹೋರಾಟ’ ಮಾಡ್ತೀವಿ ಎಂದು ಹೇಳಿದರು.
ಗೋಷ್ಠಿಯಲ್ಲಿ ತಾಲೂಕು ಅಧ್ಯಕ್ಷ ನಾಗರಾಜ್, ಯುವ ಜೆಡಿಎಸ್ ಅಧ್ಯಕ್ಷ ತ್ರಿಶೂಲ್ ಉಪಸ್ಥಿತರಿದ್ದರು.