(ವಿಶೇಷ ವರದಿ: ಹೆಚ್.ಕೆ. ಜಗದೀಶ್)

ಗೋಣಿಕೊಪ್ಪಲು, ಆ. ೨೭: ಕೊಡಗಿನ ರೈತರ, ಕಾಫಿ ಬೆಳೆಗಾರರ ತೋಟದಲ್ಲಿ ನಿರಂತರ ಕಾಡಾನೆಗಳ ಉಪಟಳದಿಂದಾಗಿ ಕಾಫಿ ಸೇರಿದಂತೆ ಇನ್ನಿತರ ಬೆಳೆಗಳು ನಾಶವಾಗುತ್ತಿವೆ. ಅರಣ್ಯ ಇಲಾಖೆಯ ಅಂದಾಜಿನ ಪ್ರಕಾರ ನೂರಾರು ಸಂಖ್ಯೆಯಲ್ಲಿ ಕಾಡಾನೆಗಳು ಜಿಲ್ಲೆಯ ವಿವಿಧ ಭಾಗದಲ್ಲಿ ರೈತರ ತೋಟದಲ್ಲಿ ಬೀಡುಬಿಟ್ಟಿವೆ. ಕಾಡಾನೆಗಳು ತೋಟದಲ್ಲಿಯೆ ನೆಲೆಸಿರುವುದರಿಂದ ತೋಟದ ಕೆಲಸಕ್ಕೆ ತೀವ್ರ ಅಡ್ಡಿಯಾಗುತ್ತಿವೆ. ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಲಗ್ಗೆ ಇಡುತ್ತಿರುವ ಕಾಡಾನೆಗಳು ಅರಣ್ಯ ಪ್ರದೇಶಕ್ಕೆ ತೆರಳಲು ಹಿಂದೇಟು ಹಾಕುತ್ತಿವೆ.

ಕಾಫಿ ತೋಟದಲ್ಲಿ ಸಿಗುವ ರುಚಿಕರವಾದ ಹಲಸಿನ ಕಾಯಿ, ಬಾಳೆ, ಅಡಿಕೆ ಹಾಗೂ ಇತರ ಬೆಳೆಗಳನ್ನು ತಿನ್ನುತ್ತಿರುವ ಕಾಡಾನೆಗಳು ಕಾಫಿ ಹಣ್ಣು ಬಿಡುವ ಸಂದರ್ಭದಲ್ಲಿ ಕಾಫಿ ಹಣ್ಣನ್ನು ಕೂಡ ತಿನ್ನಲಾರಂಭಿಸಿದೆ. ಇದರಿಂದ ರೈತನಿಗೆ ಕಷ್ಟದ ಮೇಲೆ ಕಷ್ಟ ಎದುರಾಗುತ್ತಿದೆ. ಹಲವು ಅನುಕೂಲಸ್ಥ ಕಾಫಿ ಬೆಳೆಗಾರರು ತಮ್ಮ ತೋಟ ಹಾಗೂ ಗದ್ದೆಗಳಿಗೆ ಸೋಲಾರ್ ಬೇಲಿಯನ್ನು ಅಳವಡಿಸಿ ಕಾಡಾನೆಯನ್ನು ನಿಯಂತ್ರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೂ ಕಾಡಾನೆಗಳು ಒಮ್ಮೆ ತೋಟ ಪ್ರವೇಶಿಸಿದರೆ ಮತ್ತೆ ಮತ್ತೆ ಇದೇ ತೋಟ ಗುರಿಯಾಗಿಸಿಕೊಂಡು ಹಿಂಡು ಹಿಂಡಾಗಿ ಧಾಳಿ ನಡೆಸಿ ತೋಟದ ಬೆಳೆಗಳನ್ನು ನಷ್ಟ ಪಡಿಸುತ್ತಿವೆ.

ತೋಟದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಹಿಂಡು ರಾತ್ರಿಯ ವೇಳೆಯಲ್ಲಿ ರೈತರ ಭತ್ತದ ಗದ್ದೆಗಳಿಗೆ ಧಾಂಗುಡಿ ಇಟ್ಟು ಅಲ್ಲಿರುವ ನಾಟಿ, ಪೈರು ಸೇರಿದಂತೆ ಭತ್ತದ ಗದ್ದೆಯಲ್ಲೆಲ್ಲ ಓಡಾಡಿ ತುಳಿದು ನಾಶ

(ಮೊದಲ ಪುಟದಿಂದ) ಮಾಡುತ್ತಿವೆ. ಕಾಡಾನೆಗಳು ಕಾಫಿ ತೋಟದಲ್ಲಿ ಮನಬಂದAತೆ ಓಡಾಡುತ್ತಿರುವುದರಿಂದ ಕಾಫಿ, ಗಿಡಗಳ ರೆಂಬೆ ಕೊಂಬೆಗಳು. ರೈತರು ಬೆಳೆದಿದ್ದ ಬಾಳೆ, ಅಡಿಕೆ ಗಿಡಗಳನ್ನು ನಾಶ ಮಾಡುತ್ತಿವೆ.

ಹಲವು ವರ್ಷಗಳಿಂದ ಪೋಷಿಸಿ ಬೆಳೆದಿದ್ದ ಕಾಫಿ ಗಿಡಗಳನ್ನು ಕಳೆದುಕೊಂಡು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆ ಅಷ್ಟಾಗಿ ಸ್ಪಂದಿಸುತ್ತಿಲ್ಲ. ತೋಟದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಪ್ರಯತ್ನವನ್ನು ಅರಣ್ಯ ಇಲಾಖೆ ಅಲ್ಲಲ್ಲಿ ಕೈಗೊಂಡಿದ್ದರೂ ಅರಣ್ಯಕ್ಕೆ ತೆರಳುವ ಕಾಡಾನೆಗಳು ದಿನ ಕಳೆಯುವುದರೊಳಗೆ ಮತ್ತೆ ರೈತರ ಕಾಫಿ ತೋಟವನ್ನು ಸೇರಿಕೊಳ್ಳುತ್ತಿರುವುದರಿಂದ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೂ ದಿಕ್ಕೇ ತೋಚದಂತಾಗಿದೆ.

ತೋಟದಲ್ಲಿರುವ ಅಪಾರ ಪ್ರಮಾಣದ ಬೆಳೆ ನಾಶ ಪಡಿಸುವ ಕಾಡಾನೆಗಳ ಹಿಂಡು ದಾಂಧಲೆ ನಡೆಸುವುದಲ್ಲದೆ, ಕಾಫಿ ತೋಟದಲ್ಲಿ ರೈತರು ನೀರಾವರಿಗಾಗಿ ಅಳವಡಿಸಿರುವ ಪೈಪ್‌ಗಳನ್ನು ತುಳಿದು ಹಾಕುತ್ತಿವೆ. ಸಮೀಪದ ಕೆರೆಗಳಿಗೆ ಇಳಿದು ಕೆರೆಯಲ್ಲಿ ಅಳವಡಿಸಿರುವ ನೀರಿನ ಮೋಟರ್‌ಗಳನ್ನು ಹಾಳು ಮಾಡುತ್ತಿವೆ. ಇದರಿಂದ ರೈತ ನಷ್ಟದ ಮೇಲೆ ನಷ್ಟ ಅನುಭವಿಸುತ್ತಿದ್ದಾನೆ.