ಮಡಿಕೇರಿ,ಆ.೨೬; ಪ್ರತಿ ಶುಕ್ರವಾರದಂತೆ ಮಡಿಕೇರಿಯಲ್ಲಿಂದು ಜನ ಜಂಗುಳಿ ಇರಲಿಲ್ಲ.., ವಾಹನ ದಟ್ಟಣೆಯೂ ಕಂಡುಬರಲಿಲ್ಲ.., ಆದರೆ., ಅಲ್ಲಲ್ಲಿ ಬ್ಯಾಗ್ ಹಿಡಿದು ಜನರು ಒಡಾಡುತ್ತಿದ್ದುದು ಸಾಮಾನ್ಯವಾಗಿತ್ತು.., ರಸ್ತೆ ಬದಿಗಳಲ್ಲಿ ಅಂಗಡಿಗಳು ಕಂಡು ಬಾರಲಿಲ್ಲವಾದರೂ ಕೆಲವು ತೆರೆದಿದ್ದ ತರಕಾರಿ ಮಳಿಗೆ, ಮೀನು ಮಾಂಸ ಮಾರುಕಟ್ಟೆಗಳಲ್ಲಿ ವ್ಯಾಪಾರ ಬಲು ಜೋರಾಗಿತ್ತು..!

ಕೊಡಗು ಜಿಲ್ಲೆಯಾದ್ಯಂತ ೧೪೪ ಸೆಕ್ಷನ್‌ನಡಿ ನಿಷೇಧಾಜ್ಞೆ ಜಾರಿಯಲ್ಲಿರುವದರಿಂದ ಇಂದು ನಡೆಯಬೇಕಿದ್ದ ಮಡಿಕೇರಿ ಸಂತೆಯನ್ನು ರದ್ದುಗೊಳಿಸಲಾಗಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟಣೆ ಹೊರಡಿಸಲಾಗಿತ್ತು. ಸಾಮಾಜಿಕ ಜಾಲ ತಗಾಣಗಳಲ್ಲಿಯೂ ಮಾಹಿತಿ ಹರಿದಾಡಿತ್ತು. ಆದರೂ ಮಾಹಿತಿ ಅರಿಯದ ಬಹುತೇಕ ಮಂದಿ ಇಂದಿನ ಸಂತೆಗೆ ಆಗಮಿಸಿದ್ದರು. ಸಾಮಾನ್ಯವಾಗಿ ಹೊರಜಿಲ್ಲೆಗಳಿಂದ ಬರುವ ವ್ಯಾಪಾರಿಗಳು, ವಾಹನಗಳಲ್ಲಿ ನಿನ್ನೆ ಸಂಜೆಯೇ ಆಗಮಿಸಿ ವಾಪಸ್ ಮರಳಿದ್ದವು. ಇಂದು ಬೆಳಿಗ್ಗೆ ಕೂಡ ಕೆಲವೊಂದು ವಾಹನಗಳು ತರಕಾರಿ ಸೇರಿದಂತೆ ಸಾಮಗ್ರಿಗಳನ್ನು ಹೊತ್ತು ತಂದಿದ್ದು ಸಂತೆಗೆ ಅವಕಾಶವಿಲ್ಲವೆಂದು ತಿಳಿದು ಹಿಂತಿರುಗಿದವು.

ಕಾರ್ಮಿಕರೇ ಅಧಿಕ

ಸಂತೆ ಇಲ್ಲದಿದ್ದರೂ ವಾರಕ್ಕೊಮ್ಮೆ ಅಗತ್ಯ ದಿನಸಿ, ತರಕಾರಿ ಖರೀದಿ ಮಾಡುವ, ತೀರಾ ಅವಶ್ಯಕತೆಯಿರುವ ಕಾರ್ಮಿಕರು ಮಾರುಕಟ್ಟೆಗೆ ಆಗಮಿಸಿದ್ದರು. ಈ ಪೈಕಿ ಅಸ್ಸಾಮಿ ಕಾರ್ಮಿಕರೇ ಹೆಚ್ಚಾಗಿದ್ದರು. ಭಾಷೆ ತಿಳಿಯದ, ಸಂತೆ ನಿಷೇಧದ ಬಗ್ಗೆ ಮಾಹಿತಿ ತಿಳಿಯದೇ ಸಂತೆಗೆ ಬಂದಿದ್ದರು. ಕೆಲವು ಕುಗ್ರಾಮಗಳಿಂದಲೂ ಜನರು ಬಂದಿದ್ದರು. ಸಂತೆ ನಡೆಯುತ್ತಿದೆ ಎಂದು ಒಬ್ಬರಿಂದೊಬ್ಬರಿಗೆ ಮಾಹಿತಿ ಹಬ್ಬುತ್ತಿದ್ದಂತೆ ಏನಾದರು ಸಿಗಬಹುದಾ ಎಂದು ನಗರದ ನಿವಾಸಿಗಳೂ ಕೂಡ ಬ್ಯಾಗ್ ಹಿಡಿದು ಬಂದಿದ್ದರು.

ಅAಗಡಿಗಳಲ್ಲಿ ವ್ಯಾಪಾರ

ಸಂತೆ ರದ್ದಾಗಿದ್ದ ಕಾರಣ ಮಾರುಕಟ್ಟೆ ಪ್ರಾಂಗಣವನ್ನು ಮುಚ್ಚಲಾಗಿತ್ತು. ಹೊರ ಆವರಣದಲ್ಲೂ ಯಾವದೇ ಮಳಿಗೆಗಳಿರಲಿಲ್ಲ. ಆದರೆ, ಮಾರುಕಟ್ಟೆ ಪ್ರದೇಶದಲ್ಲಿ ಇರುವ ತರಕಾರಿ ಮಳಿಗೆಗಳಲ್ಲಿ ವ್ಯಾಪಾರ ಜೋರಾಗಿತ್ತು. ತರಕಾರಿಗಳ ಬೆಲೆಯೂ ತುಸು ಹೆಚ್ಚಾಗಿತ್ತು. ಇತರ ಸಾಮಗ್ರಿಗಳನ್ನು ಮಾರಾಟ ಮಾಡುತ್ತಿದ್ದ ಕೆಲವು ಅಂಗಡಿಗಳು ತರಕಾರಿ ಅಂಗಡಿಗಳಾಗಿ ಮಾರ್ಪಾಟ್ಟಾಗಿದ್ದವು. ಸೊಪ್ಪು, ತೆಂಗಿನಕಾಯಿ, ಎಲೆ-ಅಡಕೆ, ಹೊಗೆಸೊಪ್ಪುಗಳ ಮಾರಾಟ ಎಂದಿನAತೆ ಇತ್ತು.

ಮೀನು-ಮಾಂಸ ಭರ್ಜರಿ.!

ಮಾರುಕಟ್ಟೆ ಪ್ರದೇಶದಲ್ಲಿರುವ ಮೀನು ಹಾಗೂ ಮಾಂಸ ಮಾರಾಟ ಮಳಿಗೆಗಳು ಎಂದಿನAತೆ ವ್ಯಾಪಾರ ವಹಿವಾಟು ನಡೆಸಿದವು. ತರಕಾರಿಗಳ ಬೆಲೆ ಏರಿದ್ದುದರಿಂದ ಬಹುತೇಕರು ಮೀನು, ಮಾಂಸ ಖರೀದಿಸುತ್ತಿದ್ದುದು ಕಂಡುಬAದಿತು.

(ಮೊದಲ ಪುಟದಿಂದ)

ಅಸಮಾಧಾನ..!

ಯಾರದೋ ರಾಜಕೀಯ ದೊಂಬರಾಟಕ್ಕೆ ನಿಷೇಧಾಜ್ಞೆ ಹೇರಿಕೆ ಮಾಡಿ ಬಡವರ್ಗದ ಜನರಿಗೆ ತೊಂದರೆ ನೀಡುತ್ತಿರುವ ಬಗ್ಗೆ ಮಾರುಕಟ್ಟೆಗೆ ಬಂದಿದ್ದ ಹಲವರು ಅಸಮಾಧಾನ ವ್ಯಕ್ತಪಡಿಸಿದರು. ಇದರಿಂದಾಗಿ ದಿನನಿತ್ಯ ಉಪಯೋಗಕ್ಕೆ ಬೇಕಾದ ತರಕಾರಿಗಳ ಬೆಲೆ ಹೆಚ್ಚಾಗಿರುವದರಿಂದ ಸ್ವಲ್ಪ ಮಾತ್ರ ಕೊಂಡೊಯ್ಯುತ್ತಿರುವದಾಗಿ ಹೇಳಿಕೊಂಡರು. ನಿಷೇಧಾಜ್ಞೆ ತೆರವಾದ ಕೂಡಲೇ ಮತ್ತೆ ಸಂತೆ ನಡೆಸಿದರೆ ಅನುಕೂಲವಾಗಲಿದೆ ಎಂಬ ಮಾತುಗಳು ಕೇಳಿಬಂದವು. ಒಟ್ಟಿನಲ್ಲಿ ಇಂತಹ ದೊಂಬರಾಟಗಳಿAದಾಗಿ ಜನ ಸಾಮಾನ್ಯರ ಬದುಕಿಗೆ ತೊಂದರೆ ಉಂಟಾಗುತ್ತಿರುವದನ್ನು ರಾಜಕೀಯ ಪಕ್ಷಗಳು ಮನಗಾಣಬೇಕಿದೆ. ಜಿಲ್ಲಾಡಳಿತ ಕೂಡ ನಿಷೇಧಾಜ್ಞೆ ಹೇರುವ ಮುನ್ನ ಜನಸಾಮಾನ್ಯರಿಗಾಗುವ ತೊಂದರೆಗಳ ಬಗ್ಗೆ ಗಮನ ಹರಿಸಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವದೊಳಿತೆಂಬದು ಸಾರ್ವಜನಿಕರ ಅಭಿಪ್ರಾಯವಾಗಿದೆ.

? ಸಂತೋಷ್