.ಮಡಿಕೇರಿ, ಆ. ೨೬: ಪ್ರಸ್ತುತದ ರಾಜಕೀಯ ತಿಕ್ಕಾಟ... ಪಕ್ಷಗಳ ನಡುವಿನ ಕಿತ್ತಾಟ ಪರಸ್ಪರ ಕೆಸರೆರಚಾಟಗಳ ಬಗ್ಗೆ ಜನಸಾಮಾನ್ಯರಿಗೆ ಎಷ್ಟೊಂದು ಕಿರಿಕಿರಿಯುಂಟಾಗಿದೆ, ಬೇಸರ ಮೂಡಿದೆ ಎಂಬದಕ್ಕೆ ಇದೊಂದು ನೈಜ ಉದಾಹರಣೆ ಎಂಬAತಿದೆ.

ಕೆಲದಿನಗಳ ಹಿಂದೆ ಕೊಡಗಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ. ಆ ಭೇಟಿ ಸಂದರ್ಭದಲ್ಲಿ ಆದ ಘಟನೆಗಳು, ಮೊಟ್ಟೆ ಪ್ರಕರಣ ಹಾಗೂ ಆ ನಂತರದಲ್ಲಿ ಉಂಟಾದ ಪರಿಸ್ಥಿತಿ ಎಲ್ಲರಿಗೂ ಅರಿವಿದೆ. ಇಡೀ ರಾಜ್ಯವ್ಯಾಪಿಯಾಗಿ ಈ ಘಟನೆ ಪಸರಿಸಿತ್ತು.

ಈ ತಿಕ್ಕಾಟ ಕಹಿ ಘಟನೆಗಳು ರಾಜಕೀಯವಾಗಿಯೂ ತಿರುವು ಪಡೆದುಕೊಂಡು ಆಗಸ್ಟ್ ೨೬ರ ಶುಕ್ರವಾರ ಮಡಿಕೇರಿಯಲ್ಲಿ ಮತ್ತೊಂದು ಭಾರೀ ಕದನಕ್ಕೆ ವೇದಿಕೆಯಾಗುವದರಲ್ಲಿತ್ತು. ಆದರೆ ಜಿಲ್ಲಾಡಳಿತ ಮುಂಜಾಗ್ರತೆಯಾಗಿ ನಿಷೇಧಾಜ್ಞೆ ಜಾರಿ... ಮದ್ಯ ಮಾರಾಟ ನಿಷೇಧ ದೊಂದಿಗೆ ಅನುಸರಿಸಿದ ಬಿಗಿ ಕ್ರಮದಿಂದಾಗಿ ಸದ್ಯಕ್ಕೆ ಇದು ದೂರಾಯಿತು. ಪೊಲೀಸ್ ಪಡೆಯೇ ಕೊಡಗಿನಲ್ಲಿ ಸದ್ದು ಮಾಡಬೇಕಾಯಿತು.

ಈ ಎಲ್ಲಾ ಪರಿಸ್ಥಿತಿಯನ್ನು ಅವಲೋಕಿಸಿಯೋ ಏನೋ ಯಾವ ಜಂಜಾಟವೂ ಬೇಡ ಎಂಬ ಹೊಸತೊಂದು ಪರಿಕಲ್ಪನೆಯೊಂದಿಗೆ ಕೆಲ ಯುವಕರು ಕೊಡವ ಸೋಷಿಯಲ್ ಮೀಡಿಯಾ ಗ್ರೂಪ್‌ಗಳಲ್ಲಿ ಒಂದು ವಿಶೇಷ ಸಂದೇಶದ ಕರೆಯೊಂದನ್ನು ನೀಡಿದ್ದರು. ಆಗಸ್ಟ್ ೨೬ನ್ನು ‘ಕೊಡವ ವಾಲಗ ಡೇ...’ ಎಂದು ಆಚರಿಸುವ ಕರೆ ಇದಾಗಿತ್ತು.

ಕೊಡವರ ಆಚಾರ - ವಿಚಾರ ಪದ್ಧತಿ - ಪರಂಪರೆ , ಆಗು-ಹೋಗುಗಳಲ್ಲಿ ಬರುವ ವಾಲಗವನ್ನು ಪ್ರಪಂಚಕ್ಕೆ ಪರಿಚಯಿಸುವ ಚಿಂತನೆ ಇವರದ್ದು. ಈ ಕರೆಯೊಂದಿಗೆ ವಿಶೇಷವಾಗಿ ಯಾರೇ ಬಂದು ಏನೇ ಪುಂಗಿ ಊದಲಿ... ಅಲ್ಲ ಮೊಟ್ಟೆ ಎಸೆಯಲಿ ಅದನ್ನು ಅಲ್ಲಿಗೇ ಬಿಡುವದರೊಂದಿಗೆ ಮುಂದಿನಹೆಜ್ಜೆ ಹಾಕುವ... ವಾಲಗಕ್ ಆಟ್ ಆಡನ... ಇದನ್ನು ಸಾಮಾಜಿಕ ಜಾಲತಾಣದ ಮೂಲಕ ಪ್ರಪಂಚಕ್ಕೆ ಸಾರುವ ಎಂಬ ಮನವಿಗೆ ಈ ದಿನ ಉತ್ತಮ ಪ್ರತಿಸ್ಪಂದನ ಕಂಡು ಬಂದಿರುವುದು ವಿಶೇಷವಾಗಿದೆ.

(ಮೊದಲ ಪುಟದಿಂದ) ಈ ವಾಲಗ ನೃತ್ಯದ ವಿವಿಧ ವೀಡಿಯೋ ತುಣುಕುಗಳು ವಿವಿಧ ವ್ಯಾಟ್ಸಾಪ್ ಗ್ರೂಪ್‌ಗಳಲ್ಲಿ... ಸಾಮಾಜಿಕ ಜಾಲತಾಣಗಳಲ್ಲಿ ದಿನವಿಡೀ ಹರಿದಾಡಿವೆ. ನಾಡ್ ನಂದಾಡ್... ಕೊಡವ ಒಂದಾಡ್... ಎಂಬ ಸಂದೇಶ ದೊಂದಿಗೆ ಈ ವಿಶೇಷ ಕೊಡವ ವಾಲಗಡೇ... ಕರೆ ಯಶಸ್ಸು ಕಂಡಿದ್ದು, ಗಮನಾರ್ಹವಾಗಿದೆ. ಮುಂದಿನ ವರ್ಷದಿಂದ ಇದೂ ಒಂದು ವಿಶೇಷ ದಿನವಾಗುವ ಸಾಧ್ಯತೆಯಿದೆ. -ಶಶಿ