ಪೆರಾಜೆ, ಆ. ೨೬: ಗ್ರಾಮೀಣ ಜನರ ವಿದ್ಯುತ್ ಸಮಸ್ಯೆಗಳಿಗೆ ಸ್ಪಂದಿಸಿ ತಕ್ಷಣ ಪರಿಹಾರ ಕಲ್ಪಿಸುವುದಕ್ಕಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ವಿದ್ಯುತ್ ಅದಾಲತ್ ಕಾರ್ಯಕ್ರಮವು ಪೆರಾಜೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರ ವಿನಯ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಪೆರಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವು ಕಡೆಗಳಲ್ಲಿ ಹೊಸ ಟ್ರಾನ್ಸಫಾರ್ಮರ್‌ಗಳನ್ನು ಮತ್ತು ಪದೇ ಪದೇ ಕೆಡುತ್ತಿರುವ ಹಳೆಯ ಟಿ.ಸಿ.ಗೆ ಬದಲಿ ಹೊಸ ಟಿ.ಸಿ. ಅಳವಡಿಸಲು ಬೇಡಿಕೆ ಇಟ್ಟರು. ಅರಣ್ಯದೊಳಗೆ ಹಾದು ಹೋಗುವ ವಿದ್ಯುತ್ ತಂತಿಗಳನ್ನು ಬದಲಾಯಿಸಿಕೊಡುವಂತೆ ಗ್ರಾಮಸ್ಥರು ಅಹವಾಲು ಸಲ್ಲಿಸಿದರು. ಗ್ರಾಮಸ್ಥರೊಂದಿಗೆ ಸಂವಾದ ನಡೆಸಿ ಗ್ರಾಮದ ಹಲವಾರು ಸಮಸ್ಯೆ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭ ಮಡಿಕೇರಿ ಚೆಸ್ಕಾಂನ ಸಹಾಯಕ ಲೆಕ್ಕಾಧಿಕಾರಿ ಸಂತೋಷ್, ಕಿರಿಯ ಇಂಜಿನಿಯರ್ ಅನಿಲ್, ಪಂಚಾಯಿತಿ ಸದಸ್ಯರುಗಳಾದ ಶುಭಾಶ್ ಚಂದ್ರ ಬಂಗಾರಕೋಡಿ, ಉದಯಚಂದ್ರ ಕುಂಬಳಚೇರಿ, ಸುರೇಶ್ ಪೆರುಮುಂಡ, ಚಂದ್ರಾವತಿ, ಭೂದೇವಿ ನಾಯಕ್ ಹಾಗೂ ಚೆಸ್ಕಾಂನ ಸಿಬ್ಬಂದಿಗಳಾದ ಬಸವರಾಜ್, ಮಿಥುನ್ ಇದ್ದರು. ಸತೀಶ್ ಕಾರ್ಯಕ್ರಮ ನಿರೂಪಿಸಿದರು.