ಶನಿವಾರಸಂತೆ, ಆ. ೨೬: ಆಧುನಿಕತೆ ಮತ್ತು ವೈಜ್ಞಾನಿಕ ಭರಾಟೆಯಿಂದ ಜಾನಪದ ಸಂಸ್ಕೃತಿಯ ಸೊಗಡು ಮರೆಯಾಗುತ್ತಿದ್ದು, ಯಾವುದೇ ಭಾಷೆಯ ಮೂಲ ಜಾನಪದವಾಗಿರುತ್ತದೆ ಎಂದು ಜಾನಪದ ಪರಿಷತ್ ಹೋಬಳಿ ಘಟಕದ ಉಪಾಧ್ಯಕ್ಷ ಹರೀಶ್ ಅಭಿಪ್ರಾಯಪಟ್ಟರು.

ಸುಪ್ರಜ ಗುರುಕುಲ ವಿದ್ಯಾಸಂಸ್ಥೆಯಲ್ಲಿ ವಿಶ್ವ ಜಾನಪದ ದಿನದ ಅಂಗವಾಗಿ ಕರ್ನಾಟಕ ಜಾನಪದ ಪರಿಷತ್ ಹೋಬಳಿ ಘಟಕದ ವತಿಯಿಂದ ವಿದ್ಯಾರ್ಥಿಗಳಿಗೆ ನಡೆದ ಜಾನಪದ ಗಾಯನ ಸ್ಪರ್ಧಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯುವ ಸಮೂಹ ಜಾನಪದ ಸಂಸ್ಕೃತಿಯನ್ನು ನಶಿಸಿ ಹೋಗಲು ಬಿಡಬಾರದು. ಬಾಯಿಂದ ಬಾಯಿಗೆ ಹರಿದು ಬಂದ ಜ್ಞಾನ ಸಂಪತ್ತು ಜಾನಪದ ವಿವಿಧ ಪ್ರಕಾರಗಳಾಗಿ ಬೆಳೆದು ಬಂದಿದೆ ಎಂದರು.

ಯುವ ಜಾನಪದ ಕಲಾವಿದ ಸುರೇಶ್ ಮೊಗೆರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮೊಗೆರ ಜಾನಪದ ಗೀತೆಗಳನ್ನು ಹಾಡಿ ರಂಜಿಸಿದರು.

ಗಾಯನ ಸ್ಪರ್ಧೆಯಲ್ಲಿ ೨೩ ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ೧-೩ನೇ ತರಗತಿ ವಿಭಾಗದಲ್ಲಿ ಶಿವಾನಿ ಪ್ರಥಮ, ಆಕಾಂಕ್ಷ ದ್ವಿತೀಯ, ೪ನೇ ತರಗತಿ ವಿದ್ಯಾರ್ಥಿನಿ ಸಾನಿಕಾ ತೃತೀಯ ಬಹುಮಾನ ಗಳಿಸಿದರು. ೫ ರಿಂದ ೧೦ನೇ ತರಗತಿವರೆಗಿನ ಗೀತಗಾಯನ ಸ್ಪರ್ಧೆಯಲ್ಲಿ ಚಂದ್ರಶೇಖರ್ ಪ್ರಥಮ, ಸಾರ್ಥಕ್ ದ್ವಿತೀಯ ಹಾಗೂ ಹಂಸಿಕೆ ತೃತೀಯ ಬಹುಮಾನ ಗಳಿಸಿದರು.

ಘಟಕದ ಕಾರ್ಯದರ್ಶಿ ಚೆರಿಯಮನೆ ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷೆ ಡಿ. ಸುಜಲಾದೇವಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪದಾಧಿಕಾರಿಗಳಾದ ದಿನೇಶ್ ಮಾಲಂಬಿ, ಭಾಸ್ಕರ್, ವಿ.ಸಿ. ಸುರೇಶ್, ಶಿಕ್ಷಕರು ಇತರರು ಹಾಜರಿದ್ದರು.