ಬೇಡಿಕೆ-ನಿರೀಕ್ಷೆಗಳು ಹುಸಿ

ಮಡಿಕೇರಿ, ಆ. ೨೬: ಕೊಡಗು ಜಿಲ್ಲೆಯ ಚುನಾಯಿತ ಶಾಸಕರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಬೇಕೆಂಬ ಕೂಗು ಕೊನೆಗೂ ಅರಣ್ಯ ರೋಧನವಾಗಿಯೇ ಉಳಿದಿದೆ. ಪ್ರಸ್ತುತ ಅಧಿಕಾರದಲ್ಲಿರುವ ಬಿಜೆಪಿ ಸರಕಾರದ ಅವಧಿ ಮುಕ್ತಾಯಗೊಳ್ಳುವತ್ತ ಸಾಗಿದೆ. ಅವಧಿ ಪೂರ್ಣಗೊಳ್ಳಲು ಇನ್ನೇನು ಕೆಲವು ತಿಂಗಳುಗಳಷ್ಟೇ ಬಾಕಿ ಉಳಿದಿದೆ. ಈ ಅಲ್ಪಾವಧಿಯಲ್ಲಿ ಜಿಲ್ಲೆಯ ಶಾಸಕರು ಸಚಿವರಾಗುವುದು ಕನಸ್ಸಿನ ವಿಚಾರವಾಗಲಿದೆ.

ಕಳೆದ ಹಲವು ವರ್ಷಗಳಿಂದ ಬಿಜೆಪಿಯ ಭದ್ರಕೋಟೆ ಕೊಡಗು. ಕಳೆದ ಮೂರು ಅವಧಿಗಳಿಂದ ಜಿಲ್ಲೆಯ ಎರಡು ಕ್ಷೇತ್ರಗಳಿಂದ ಬಿಜೆಪಿಯ ಶಾಸಕರೇ ಆರಿಸಿ ಬಂದಿದ್ದಾರೆ. ಇಬ್ಬರೂ ಹಿರಿಯ ಶಾಸಕರು ಮಾತ್ರವಲ್ಲದೆ ಹಲವು ಬಾರಿ ಶಾಸಕರುಗಳಾಗಿ ಚುನಾಯಿತರಾದವರಾಗಿದ್ದಾರೆ. ಆದರೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೂ ಅತಂತ್ರತೆಗಳ ಭೀತಿಯಿಂದಾಗಿ ಜಿಲ್ಲೆಯವರು ಸಚಿವರಾಗುವ ಭಾಗ್ಯದಿಂದ ವಂಚಿತರಾಗುತ್ತಲೇ ಬಂದಿದ್ದಾರೆ. ಕಳೆದ ಹಲವು ತಿಂಗಳ ಹಿಂದೆ ಸಚಿವ ಸಂಪುಟ ಪುನರ್ ರಚನೆ, ಮುಖ್ಯಮಂತ್ರಿ ಸ್ಥಾನ ಬದಲಾವಣೆಯಾದಾಗ ಆ ಸಂದರ್ಭದಲ್ಲಿ ಕೊಡಗಿನ ಇಬ್ಬರು ಶಾಸಕರುಗಳಾದ ಅಪ್ಪಚ್ಚು ರಂಜನ್ ಅಥವಾ ಕೆ.ಜಿ. ಬೋಪಯ್ಯ ಇವರಲ್ಲಿ ಯಾರಾದರೊಬ್ಬರು ಸಚಿವರಾಗಬಹುದೆಂಬ ಭಾರೀ ನಿರೀಕ್ಷೆ ಉಂಟಾಗಿತ್ತು.

ಆದರೆ ಇಬ್ಬರೂ ಸ್ಥಾನ ಪಡೆಯಲಿಲ್ಲ. ಇದರಿಂದಾಗಿ ಸಹಜವಾಗಿಯೇ ಇಬ್ಬರು ಶಾಸಕರ ಬೆಂಬಲಿಗರ ಪಾಳಯದಲ್ಲಿ ಆಕ್ರೋಶಭರಿತವಾದ ಒತ್ತಾಯ ಕೇಳಿಬಂತಲ್ಲದೆ ಇಬ್ಬರ ಪರವಾಗಿಯೂ ಬೆಂಗಳೂರು ಮಟ್ಟದಲ್ಲಿ ಲಾಬಿ ನಡೆಯಿತು. ಬೆಂಗಳೂರು ಚಲೋದಂತಹ ಪ್ರತಿಭಟನಾತ್ಮಕ ಒತ್ತಡಗಳು ಎದುರಾದವು. ಆದರೆ ಈ ಬೇಡಿಕೆ-ಒತ್ತಡಗಳು ಕೇವಲ ಆ ಸಂದರ್ಭಕ್ಕೆ ಮಾತ್ರ ಸೀಮಿತಗೊಂಡವು.

ನAತರದಲ್ಲಿ ಬೇಡಿಕೆಗಳೂ ತಣ್ಣಗಾದವು. ಸಚಿವ ಸಂಪುಟದಲ್ಲಿ ಒಂದೆರಡು ಸ್ಥಾನಗಳು ಇನ್ನೂ ಖಾಲಿ ಇದೆಯಾದರೂ ಈ ಸ್ಥಾನವನ್ನು ತುಂಬುವ ಪ್ರಯತ್ನಕ್ಕೆ ಬಿಜೆಪಿ ಧುರೀಣರು ಮುಂದಾಗಲಿಲ್ಲ. ಒಬ್ಬರಿಗೆ ನೀಡಿದರೆ ಮತ್ತೊಬ್ಬರಿಂದ ಸಮಸ್ಯೆ ಎದುರಿಸಬೇಕಾಗಬಹುದು ಎಂಬ ದುಗುಡದೊಂದಿಗೆ ಅವಧಿ ಪೂರ್ಣಗೊಳ್ಳುವತ್ತ ಸಾಗುತ್ತಿದೆ.

ಈ ನಡುವೆ ನಿಗಮ-ಮಂಡಳಿಗಳ ಪಟ್ಟಕ್ಕೆ ಒಂದಷ್ಟು ಮಣೆ ಹಾಕಲಾಯಿತು. ಈ ಅವಕಾಶದಲ್ಲಿ ರವಿಕುಶಾಲಪ್ಪ ಅವರು ಪಶ್ಚಿಮಘಟ್ಟ ಕಾರ್ಯಪಡೆಯ ಅಧ್ಯಕ್ಷರಾಗಿ ಆಯ್ಕೆಗೊಂಡು ಕೆಲವು ತಿಂಗಳು ಅಧಿಕಾರದಲ್ಲಿದ್ದರು. ಇದೀಗ ಮತ್ತೆ ನಿಗಮ ಮಂಡಳಿಗಳ ಪುನರ್ ರಚನೆಯ ಕಸರತ್ತು ನಡೆದಿದೆ. ಚುನಾವಣೆ ಸಮೀಪವಾಗುತ್ತಿರುವ ಹಿನ್ನೆಲೆಯಲ್ಲಿ ಅತೃಪ್ತರ ಓಲೈಕೆಗೆ ಪ್ರಯತ್ನ ನಡೆದಿದೆ. ಸರಕಾರದ ಸೂಚನೆಯಂತೆ ಹಲವು ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನ ರದ್ದುಗೊಳಿಸಿ ಹೊಸಬರನ್ನು ಈ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.

ಕೊನೆಯ ಹಂತದ ಈ ಕಸರತ್ತಿನಲ್ಲಿ ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷರಾಗಿ ನಾಪಂಡ ರವಿ ಕಾಳಪ್ಪ ಅವರಿಗೆ ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ಅವಕಾಶ ಲಭ್ಯವಾಗಿದೆ.

ಇನ್ನು ಸ್ಥಾನಮಾನಗಳು ಕೊಡಗಿಗೆ ಬಹುತೇಕ ಸಿಗುವುದು ಸಾಧ್ಯವಿಲ್ಲ. ಅದರಲ್ಲೂ ಸಚಿವ ಸ್ಥಾನವಂತು ಇನ್ನು ಖಂಡಿತವಾಗಿಯೂ ಉಳಿದಿರುವ ಅಲ್ಪಾವಧಿಯಲ್ಲಿ ಸಿಗುವುದೇ ಇಲ್ಲ ಎಂಬುದು ಪಕ್ಷದವರಲ್ಲೇ ಅನುಭವಕ್ಕೆ ಬಂದAತಾಗಿದೆ. ಇನ್ನೇನಿದ್ದರೂ ‘ಬೆಟರ್ ಲಕ್ ನೆಕ್ಸ್÷್ಟ ಟೈಮ್’ ಎಂದಷ್ಟೇ ಹೇಳಬೇಕು.

- ಶಶಿ ಸೋಮಯ್ಯ