ಸೋಮವಾರಪೇಟೆ: ನೆಲದ ಸಂಸ್ಕೃತಿಯ ಭಾಗವಾಗಿರುವ ಜಾನಪದವನ್ನು ಉಳಿಸಿ ಬೆಳೆಸುವಲ್ಲಿ ಗ್ರಾಮೀಣ ಜನರ ಪಾತ್ರ ಅಪಾರ ಎಂದು ಹಿರಿಯ ಜಾನಪದ ಕಲಾವಿದ, ಕರಟ ವಾದಕ ಬೆಸೂರು ಶಾಂತೇಶ್ ಅಭಿಪ್ರಾಯಿಸಿದರು.
ಕರ್ನಾಟಕ ಜಾನಪದ ಪರಿಷತ್ನ ಸೋಮವಾರಪೇಟೆ ತಾಲೂಕು ಘಟಕದ ವತಿಯಿಂದ ಇಲ್ಲಿನ ಸಾಂದೀಪನಿ ಶಾಲೆಯ ಸಹಯೋಗದೊಂದಿಗೆ ಶಾಲಾ ಸಭಾಂಗಣದಲ್ಲಿ ಆಯೋಜಿಸಿದ್ದ ಜಾನಪದ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜಾನಪದಕ್ಕೆ ಸಂಬAಧಿಸಿದ ಸಾಹಿತ್ಯ ಇಂದು ಬೆಳವಣಿಗೆ ಕಾಣುತ್ತಿದ್ದರೂ ಜಾನಪದದ ಸಂಸ್ಕೃತಿ, ಆಚಾರ-ವಿಚಾರಗಳು ಕ್ಷೀಣಿಸುತ್ತಿವೆ. ಜಾನಪದ ಪರಿಕರಗಳು ಮೂಲೆಗುಂಪಾಗುತ್ತಿವೆ. ಯುವ ಜನಾಂಗ ಇದರತ್ತ ಆಸಕ್ತಿ ಕಳೆದುಕೊಂಡಿದೆ ಎಂದ ಅವರು, ಜಾನಪದ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಹೆಚ್ಚು ನಡೆಯಬೇಕಿದೆ ಎಂದು ಅಭಿಪ್ರಾಯಿಸಿದರು.
ಮುಖ್ಯ ಅತಿಥಿಯಾಗಿದ್ದ ಚೌಡ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶ್ ತಿಮ್ಮಯ್ಯ ಮಾತನಾಡಿ, ಜಾನಪದ ಉಳಿದರೆ ಮಾತ್ರ ಭಾರತ ದೇಶದ ಸಂಸ್ಕೃತಿ ಉಳಿವು ಸಾಧ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಕೃತಿಯ ಬಗ್ಗೆ ಹೆಚ್ಚು ತಿಳುವಳಿಕೆ ಮೂಡಿಸಬೇಕು ಎಂದರು.
ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ. ಮುರುಳೀಧರ್ ಮಾತನಾಡಿ, ನೆಲದ ಜೀವ ಸತ್ವ ಜಾನಪದವಾಗಿದೆ. ಭಾರತವು ವೈವಿಧ್ಯತೆಯ ರಾಷ್ಟçವಾಗಿದ್ದು, ಪ್ರತಿ ಮನೆಯಲ್ಲೂ ಜಾನಪದ ಹಾಸುಹೊಕ್ಕಾಗಬೇಕು. ಜಾನಪದ ಸಾಹಿತ್ಯ ಇನ್ನಷ್ಟು ಬೆಳವಣಿಗೆ ಕಾಣಬೇಕು ಎಂದು ಅಭಿಪ್ರಾಯಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಕೆ.ಎ. ಪ್ರಕಾಶ್ ವಹಿಸಿದ್ದರು. ಶಾಲಾ ಆಡಳಿತ ಮಂಡಳಿ ಮುಖ್ಯಸ್ಥ ಎಂ.ಟಿ. ದಾಮೋಧರ್ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ಶಿಕ್ಷಕ ರಜಿತ್, ನಿವೃತ್ತ ಮುಖ್ಯ ಶಿಕ್ಷಕ ಗುಂಡೇಗೌಡ ಅವರುಗಳು ಉಪಸ್ಥಿತರಿದ್ದರು.
ಇದೇ ಸಂದರ್ಭ ಜಾನಪದ ಕಲಾವಿದ ಬೆಸೂರು ಶಾಂತೇಶ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಜಾನಪದ ನೃತ್ಯ, ನೃತ್ಯ ರೂಪಕ, ಜಾನಪದ ಗೀತೆಗಳ ಗಾಯನ ನಡೆಯಿತು. ಪರಿಷತ್ನ ಪದಾಧಿಕಾರಿಗಳು, ಶಾಲಾ ಶಿಕ್ಷಕರಿಂದ ಜಾನಪದ ಗೀತೆಗಳು ಮೂಡಿಬಂದವು. ಜಾನಪದಕ್ಕೆ ಸಂಬAಧಿಸಿದ ಪರಿಕರಗಳ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.
ಪರಿಷತ್ನ ಪದಾಧಿಕಾರಿಗಳಾದ ದೀಪಿಕಾ ಸುದರ್ಶನ್, ವಾಸಂತಿ ರವೀಂದ್ರ, ಕಾರ್ಯದರ್ಶಿ ಎಂ.ಎ. ರುಬೀನಾ, ಕೆ.ಪಿ. ಸುದರ್ಶನ್, ನ.ಲ. ವಿಜಯ, ಶರ್ಮಿಳಾ ರಮೇಶ್ ಅವರುಗಳು ಕಾರ್ಯಕ್ರಮ ನಿರ್ವಹಿಸಿದರು.ಪೊನ್ನಂಪೇಟೆ: ಪೊನ್ನಂಪೇಟೆ ಹಳ್ಳಿಗಟ್ಟು ಕೂರ್ಗ್ ಇನ್ಸಿ÷್ಟಟ್ಯೂಟ್ ಆಫ್ ಪಿ.ಯು. ಕಾಲೇಜಿನಲ್ಲಿ ವಿಶ್ವ ಜಾನಪದ ದಿನಾಚರಣೆಯ ಅಂಗವಾಗಿ ಜಾನಪದ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಹಿರಿಯ ತಲೆಮಾರಿನವರ ಬದುಕಿನ ವಿಧಾನವನ್ನು ತಿಳಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಾಂಶುಪಾಲೆ ಡಾ. ರೋಹಿಣಿ ತಿಮ್ಮಯ್ಯ ನೆರವೇರಿಸಿದರು.
ಈ ಸಂದರ್ಭ ಪ್ರಥಮ ಪಿ.ಯು. ವಿದ್ಯಾರ್ಥಿನಿ ಕಂಚನ್ ಕಮಲಾಕ್ಷಿ ಜಾನಪದ ಸಾಹಿತ್ಯ ಮತ್ತು ಆಚರಣೆಯ ಮುಖ್ಯ ಉದ್ದೇಶ ಕುರಿತು ವಿಚಾರ ಮಂಡಿಸಿದರು. ದ್ವಿತೀಯ ಪಿ.ಯು.ವಿದ್ಯಾರ್ಥಿ ಎಸ್.ಪಿ. ವರುಣ್ ಆಧುನಿಕ ಜಗತ್ತಿನಲ್ಲಿ ಜಾನಪದ ಪರಂಪರೆ, ಸಂಸ್ಕೃತಿಯ ಅಗತ್ಯತೆ ಕುರಿತು ವಿಚಾರ ಮಂಡಿಸಿದರು. ಪ್ರಥಮ ಪಿ.ಯು. ನೇಹಾ ಜಾನಪದ ಗೀತೆ ಮತ್ತು ಸಾಹಿತ್ಯದ ಕುರಿತು ವಿಚಾರ ಪ್ರಸ್ತುತಪಡಿಸಿದರು.
ಜಾನಪದರು ಬಳಸುತ್ತಿದ್ದ ದೈನಂದಿನ ವಸ್ತು, ಆಭರಣ, ಕೃಷಿ ಪರಿಕರಗಳು, ಹಬ್ಬ - ಹರಿದಿನ ಸಂದರ್ಭದಲ್ಲಿ ಬಳಸುತ್ತಿದ್ದ ವಸ್ತುಗಳು, ಹಳೆಯ ನಾಣ್ಯಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಇಂದಿನ ಪೀಳಿಗೆಗೆ ಹಿಂದಿನ ಪೀಳಿಗೆಯ ಬದುಕಿನ ರೀತಿ ನೀತಿಯ ವಿಚಾರವನ್ನು ತಿಳಿಸಿ, ಪರಿಸರ ಸ್ನೇಹಿಯಾಗಿ ಬದುಕನ್ನು ಕಟ್ಟಿಕೊಳ್ಳುವ ಮೂಲಕ ಜಾನಪದ ಸಂಸ್ಕೃತಿ ಮತ್ತು ಪರಂಪರೆಯ ಶ್ರೀಮಂತಿಕೆಯನ್ನು ಉಳಿಸಿ ಬೆಳೆಸುವ ಕುರಿತ ಅರಿವನ್ನು ಈ ಕಾರ್ಯಕ್ರಮದ ಮೂಲಕ ಮೂಡಿಸಲಾಯಿತು. ಉಪನ್ಯಾಸಕ ವೃಂದ, ಬೋಧಕೇತರ ವೃಂದ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.