ಮಡಿಕೇರಿ, ಆ.೨೪: ಕೈಲ್ ಮುಹೂರ್ತ ಅಂಗವಾಗಿ ಚೆಟ್ಟಳ್ಳಿಯ ಅವರ್ಸ್ ಕ್ಲಬ್ ವತಿಯಿಂದ ಮಹಿಳೆಯರಿಗಾಗಿ ನಾಕ್ ಔಟ್ ಕ್ರಿಕೆಟ್ ಪಂದ್ಯಾವಳಿ ಏರ್ಪಡಿಸಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿಂದು ಕ್ಲಬ್‌ನ ಉಪಾಧ್ಯಕ್ಷೆ ಮುಳ್ಳಂಡ ಶೋಭಾ ಚಂಗಪ್ಪ ಈ ಬಗ್ಗೆ ಮಾಹಿತಿ ನೀಡಿದರು. ಸೆಪ್ಟೆಂಬರ್ ೨೪ರಂದು ಚೆಟ್ಟಳ್ಳಿಯ ಪ್ರೌಢಶಾಲಾ ಮೈದಾನದಲ್ಲಿ ವಿಶೇಷವಾಗಿ ಮಹಿಳೆಯರಿಗಾಗಿ ಪಂದ್ಯಾವಳಿ ಆಯೋಜನೆ ಮಾಡಲಾಗಿದೆ. ಪ್ರತಿ ತಂಡದಲ್ಲೂ ೨೫ ವರ್ಷಕ್ಕೂ ಮೇಲ್ಪಟ್ಟ ೧೦+೧ ಆಟಗಾರರಿಗೆ ಆಡಲು ಅವಕಾಶವಿರುತ್ತದೆ. ನಾಲ್ಕು ಓವರ್ ಗಳ ಸೀಮಿತ ಪಂದ್ಯಾವಳಿಯಾಗಿದ್ದು, ವಿಜೇತ ತಂಡಕ್ಕೆ ರೂ.೧೧೦೦೦, ದ್ವಿತೀಯ ಸ್ಥಾನಿಗೆ ರೂ.೬೦೦೦ ಬಹುಮಾನ ನೀಡಲಾಗುವದು. ಅಲ್ಲದೆ, ಅತ್ಯುತ್ತಮ ಮಹಿಳಾ ತಂಡಕ್ಕೆ ಬಹುಮಾನ, ಹಾಗೂ ಕ್ರೀಡೆಯಲ್ಲಿ ಭಾಗವಹಿಸುವ ಪ್ರೇಕ್ಷಕರಿಗೂ ವಿವಿಧ ಕ್ರೀಡೆಗಳನ್ನು ಏರ್ಪಡಿಸಿದ್ದು, ಬಹುಮಾನ ನೀಡಲಾಗುತ್ತದೆ. ಅತ್ಯುತ್ತಮ ಚಿಯರ್ ಲೀಡಿಂಗ್ ಒಂದು ತಂಡಕ್ಕೆ ಬಹುಮಾನ ನೀಡಲಾಗುವದೆಂದು ತಿಳಿಸಿದರು.

ಕ್ರೀಡಾಕೂಟಕ್ಕೆ ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಚಿರ ಅಯ್ಯಪ್ಪ ಭಾಗವಹಿಸಲಿದ್ದಾರೆ. ಹೆಸರು ನೋಂದಾಯಿಸಿಕೊಳ್ಳಲು ಆಗಸ್ಟ್ ೨೭ ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗೆ ಮೊ.೮೧೯೭೪೭೨೩೦೧, ೯೪೮೦೭೨೧೯೭೩ ಸಂಪರ್ಕಿಸಬಹುದು ಎಂದು ತಿಳಿಸಿದರು.

೨೦೧೦ರಲ್ಲಿ ಸ್ಥಾಪನೆಯಾದ ಕ್ಲಬ್‌ನಲ್ಲಿ ೬೪ ಮಂದಿ ಸದಸ್ಯರುಗಳಿದ್ದು, ಪ್ರತಿವರ್ಷ ಕ್ರೀಡಾಕೂಟ ಏರ್ಪಡಿಸುವುದಲ್ಲದೆ, ವೃದ್ಧಾಶ್ರಮ, ಬಾಲಭವನದ ಮಕ್ಕಳಿಗೆ ನೆರವು ನೀಡುತ್ತಾ ಬರುತ್ತಿದ್ದೇವೆ. ರಕ್ತದಾನದಂತಹ ಸಮಾಜಸೇವೆಯಲ್ಲಿಯೂ ತೊಡಗಿಸಿಕೊಂಡಿರುವದಾಗಿ ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಕ್ಲಬ್‌ನ ಅಧ್ಯಕ್ಷೆ ಐಚೆಟ್ಟಿರ ಸುನಿತಾ ಮಾಚಯ್ಯ, ಕಾರ್ಯದರ್ಶಿ ಮನೆಯಪಂಡ ಅಂಜಲಿ ಸೋಮಯ್ಯ, ಖಜಾಂಚಿ ಮುಳ್ಳಂಡ ಸುಶೀಲ ತಮ್ಮಯ್ಯ, ಸಂಸ್ಥಾಪಕ ಅಧ್ಯಕ್ಷೆ ಕೊಂಗೇಟಿರ ಕುಸುಮ ಪೊನ್ನಪ್ಪ ಹಾಜರಿದ್ದರು.