ಮಡಿಕೇರಿ, ಆ. ೨೪: ಕಾಂಗ್ರೆಸ್ ಜನರ ಕೋಮು ಭಾವನೆಗಳನ್ನು ಕೆರಳಿಸುತ್ತಿದೆ ಎಂದು ಆರೋಪಿಸಿ ಭಾರತೀಯ ಜನತಾ ಪಕ್ಷದ ವತಿಯಿಂದ ತಾ. ೨೬ ರಂದು ಹಮ್ಮಿಕೊಂಡಿದ್ದ ಜನ ಜಾಗೃತಿ ಸಮಾವೇಶವನ್ನು ನಿಷೇಧಾಜ್ಞೆ ಹಿನ್ನೆಲೆ ಮುಂದೂಡಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಬಿಜೆಪಿ ಸರಕಾರ ಜಾರಿಗೊಳಿಸಿರುವ ಗೋಹತ್ಯೆ, ಮತಾಂತರ ನಿಷೇಧ ಕಾಯ್ದೆಗಳನ್ನು ನಿಷೇಧಿಸಲಾಗುತ್ತದೆ, ಕೈಬಿಟ್ಟಿರುವ ಟಿಪ್ಪು ಜಯಂತಿಯನ್ನು ಮರು ಆರಂಭಿಸಲಾಗುವುದು ಹಾಗೂ ಕೊಡವರು ಗೋಮಾಂಸ ಭಕ್ಷಕರೆಂದು ನೀಡಿರುವ ಹೇಳಿಕೆಯ ಬಗ್ಗೆ ಜಿಲ್ಲಾ ಕಾಂಗ್ರೆಸ್ನ ನಿಲುವನ್ನು ಬಹಿರಂಗಗೊಳಿಸಬೇಕೆAದು ಆಗ್ರಹಿಸಿದರಲ್ಲದೆ, ಜಿಲ್ಲಾ ಕಾಂಗ್ರೆಸ್ಗೆ ಕೆಲವೊಂದು ಪ್ರಶ್ನೆಗಳನ್ನು ಕೇಳುವ ಮೂಲಕ ವಾಗ್ದಾಳಿ ನಡೆಸಿದರು.
ಮೊಟ್ಟೆ ಎಸೆತ ಪ್ರಕರಣದಲ್ಲಿ ಕೊಡಗಿನವರು ಶಾಮೀಲಾಗಿಲ್ಲ. ಹೊರಗಿನಿಂದ ಬಂದ ಕಿಡಿಗೇಡಿ ಗಳಿಂದ ಕೃತ್ಯ ನಡೆದಿದೆ ಎಂದು ಕಾಂಗ್ರೆಸ್ ಹೇಳಿದೆ. ಆದರೆ, ಮಡಿಕೇರಿ ನಗರ ಠಾಣೆಯಲ್ಲಿ ಇಲ್ಲಿನ ಬಿಜೆಪಿ ಕಾರ್ಯಕರ್ತರ ಮೇಲೆ ದೂರು ನೀಡಲಾಗಿದೆ. ಇದರ ಉದ್ದೇಶವೇನು? ಎಂದು ಪ್ರಶ್ನಿಸಿದರು.
ಮಾಂಸಾಹಾರ ಸೇವಿಸಿ ದೇವಾಲಯಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ ಅವರ ಪರ ನಿಂತಿರುವ ಚಂದ್ರಮೌಳಿ ಹಾಗೂ ವೀಣಾ ಅಚ್ಚಯ್ಯ ಅವರು ಕೂಡ ತಮ್ಮ ನಿಲುವು ವ್ಯಕ್ತಪಡಿಸಬೇಕು. ಹಿಂದೂಗಳ ಭಾವನೆಗೆ ಧಕ್ಕೆ ತರುವ ಮಾತುಗಳು ಸರಿಯೇ? ಎಂದು ಕೇಳಿದ ರಾಬಿನ್ ದೇವಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲಚೀರ ಎ. ಅಯ್ಯಪ್ಪ ಅವರನ್ನು ಜಿಲ್ಲೆಗೆ ನೇಮಿಸಲು ಶಾಸಕ ಕೆ.ಜಿ.ಬೋಪಯ್ಯ ಅವರೇ ತಮ್ಮ ‘ಲೆಟರ್ಹೆಡ್’ನಲ್ಲಿ ಮುಖ್ಯಮಂತ್ರಿಗೆ ಪತ್ರ ಬರೆದು ಶಿಫಾರಸ್ಸು ಮಾಡಿದ್ದರು. ಆದರೆ, ಕಾಂಗ್ರೆಸ್ ಮುಖಂಡ ಎ.ಎಸ್. ಪೊನ್ನಣ್ಣ ಅವರು, ಕೊಡವ ಎಸ್.ಪಿ. ನೇಮಕಕ್ಕೆ ಬೋಪಯ್ಯ ಅವರ ವಿರೋಧವಿತ್ತು ಎಂಬ ಹೇಳಿಕೆ ನೀಡಿರುವುದು ಹಾಸ್ಯಸ್ಪದ. ಈ ಹಿಂದೆ ಡಿ.ವೈ.ಎಸ್.ಪಿ. ಗಣಪತಿ ಆತ್ಮಹತ್ಯೆ ಪ್ರಕರಣ ನಡೆದಾಗ ಸುಮ್ಮನಿದ್ದ ಪೊನ್ನಣ್ಣ ಅವರು, ಸಿದ್ದರಾಮಯ್ಯ ಅವರನ್ನು ಮೆಚ್ಚಿಸುವ ಯತ್ನ ಮಾಡುತ್ತಿದ್ದಾರೆ ಎಂದು ಕುಟುಕಿದರು.
ಮೊಟ್ಟೆ ಎಸೆತ ಪ್ರಕರಣದ ಆರೋಪಿಯಾಗಿರುವ ಸಂಪತ್ ಬಿಜೆಪಿ ಕಾರ್ಯಕರ್ತನಲ್ಲ. ಆತ ಈ ಹಿಂದಿನ ಸೋಮವಾರಪೇಟೆ ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ೧೧ನೇ ವಾರ್ಡ್ನ ಕಾಂಗ್ರೆಸ್ ಅಭ್ಯರ್ಥಿಗೆ ‘ಪೋಲಿಂಗ್ ಏಜೆಂಟ್’ ಹಾಗೂ ಸೂಚಕನಾಗಿ ಸಹಿ ಮಾಡಿದ್ದ. ಜೀವಿಜಯ ಅವರ ಆಪ್ತನಾಗಿದ್ದ ನಂತರ ಕಾಂಗ್ರೆಸ್ಗೆ ಬಂದೆ ಎಂದು ಸಂಪತ್ ಹೇಳಿದರೂ ಕೂಡ ಬಿಜೆಪಿ ಮೇಲೆ ಗೂಬೆ ಕೂರಿಸುವ ಯತ್ನ ಕಾಂಗ್ರೆಸ್ ಮಾಡುತ್ತಿದೆ. ಯಾವುದೇ ಪಕ್ಷದಲ್ಲಿದ್ದರೂ ಆರ್.ಎಸ್.ಎಸ್. ಕಾರ್ಯಕರ್ತನಾಗಬಹುದು ಎಂದು ವಿವರಿಸಿದ ಅವರು, ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬರಲು ಕಾಂಗ್ರೆಸಿಗರೇ ಯಾಕೆ ಮೊಟ್ಟೆ ಎಸೆದಿರಬಾರದು ಎಂದು ಪ್ರಶ್ನಿಸಿದರು.
ಸಮಾವೇಶ ಮಾಡುತ್ತೇವೆ
ನಿಷೇಧಾಜ್ಞೆ ಹಿನ್ನೆಲೆ ಮುಂದೂಡಿರುವ ಜನಜಾಗೃತಿ ಸಮಾವೇಶವನ್ನು ಮುಂದಿನ ದಿನಗಳಲ್ಲಿ ನಡೆಸುತ್ತೇವೆ. ಇದು ಹಿಂದೂಗಳ ಸ್ವಾಭಿಮಾನದ ಪ್ರಶ್ನೆಯಾಗಿದೆ. ಬೇರೆ ಜಿಲ್ಲೆಯಿಂದ ಕಾಂಗ್ರೆಸ್ ಜನರನ್ನು ಕರೆಸುತ್ತಾರೆ. ಬಿಜೆಪಿ ಇಲ್ಲಿನ ಲಕ್ಷಾಂತರ ಕಾರ್ಯಕರ್ತರನ್ನು ಸೇರಿಸುತ್ತದೆ. ಇದು ಬಿಜೆಪಿ ಹಾಗೂ ಕಾಂಗ್ರೆಸ್ಗೆ ಇರುವ ವ್ಯತ್ಯಾಸ ಎಂದು ಟೀಕಿಸಿದರು. ಜಿಲ್ಲಾ ವಕ್ತಾರ ಮಹೇಶ್ ಜೈನಿ ಮಾತನಾಡಿ, ಸಿದ್ದರಾಮಯ್ಯ ಅವರ ಮಳೆಹಾನಿ ಪ್ರದೇಶ ವೀಕ್ಷಣೆಗೆ ನಾವು ವಿರೋಧ ಮಾಡಿಲ್ಲ. ರಸ್ತೆಯಲ್ಲಿ ಸಾಗುವ ವೇಳೆ ಘೋಷಣೆ ಕೂಗಿದ್ದೇವೆ. ಕಪ್ಪು ಬಾವುಟ ಪ್ರದರ್ಶಿಸಿದ್ದೇವೆ. ಇದರಲ್ಲಿ ತಪ್ಪಿಲ್ಲ ಎಂದರು.
ಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬಿ.ಕೆ. ಅರುಣ್ ಕುಮಾರ್, ಕಾರ್ಯದರ್ಶಿ ಎಸ್.ಸಿ. ಸತೀಶ್, ನಗರಾಧ್ಯಕ್ಷ ಮನು ಮಂಜುನಾಥ್, ನಗರಸಭಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಹಾಜರಿದ್ದರು.