ಮಡಿಕೇರಿ, ಆ. ೨೩: ಆಗಸ್ಟ್ ೨೬ ರಂದು ಮಡಿಕೇರಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ಎಸ್ಪಿ ಕಚೇರಿಗೆ ಮುತ್ತಿಗೆ ಹಾಗೂ ಬಿಜೆಪಿಯಿಂದ ಜನಜಾಗೃತಿ ಸಮಾವೇಶದ ಕಾರಣದಿಂದಾಗಿ ಕೊಡಗಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಆದರೂ ಈ ರಾಜಕೀಯ ಸಮರ ಯಾವ ತಿರುವು ಪಡೆಯಲಿದೆ ಎಂಬುದು ಇನ್ನೂ ನಿಗೂಢವಾಗಿದೆಯಲ್ಲದೆ ಗೊಂದಲ ಮುಂದುವರಿದಿದೆ.
ಈ ಬಗ್ಗೆ ಬಿಜೆಪಿ ಪಕ್ಷದಿಂದ ಇಬ್ಬರು ಶಾಸಕರು ಸೇರಿದಂತೆ ಪದಾಧಿಕಾರಿಗಳು ಅಲ್ಲಲ್ಲಿ ಪೂರ್ವ ಭಾವಿ ಸಭೆಯನ್ನು ನಡೆಸುತ್ತಿದ್ದಾರೆ. ಸೋಮವಾರಪೇಟೆ ವಿಭಾಗದಲ್ಲಿ ಅಪ್ಪಚ್ಚು ರಂಜನ್, ವೀರಾಜಪೇಟೆ, ಪೊನ್ನಂಪೇಟೆ ವ್ಯಾಪ್ತಿಯಲ್ಲಿ ಕೆ.ಜಿ. ಬೋಪಯ್ಯ ಹಾಗೂ ಮಡಿಕೇರಿ ಕಡೆಯಲ್ಲಿ ಇತರ ಪದಾಧಿಕಾರಿಗಳು ಪೂರ್ವಭಾವಿ ಸಭೆ ನಡೆಸುತ್ತಿದ್ದಾರೆ.
ನಿಷೇಧಾಜ್ಞೆ ಜಾರಿ ಕುರಿತಾಗಿ ಪ್ರತಿಕ್ರಿಯಿಸಿರುವ ಶಾಸಕ ಅಪ್ಪಚ್ಚು ರಂಜನ್ ಅವರು ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಅನುಮತಿ ಕೋರಿ ಪತ್ರ ಬರೆಯಲಾಗಿದೆ.
(ಮೊದಲ ಪುಟದಿಂದ) ಅನುಮತಿ ಕೊಟ್ಟಲ್ಲಿ ಸಮಾವೇಶ ಮಾಡುತ್ತೇವೆ. ಅವರಿಗೂ ನೀಡಲಿ ನಮಗೂ ನೀಡಲಿ ಎಂದಿದ್ದಾರೆ. ಅಲ್ಲದೆ ಈ ಬಗ್ಗೆ ನಾಳೆ ಸಂಜೆ ಪ್ರಮುಖರು ಸೇರಿ ತೀರ್ಮಾನಿ ಸಲಿರುವುದಾಗಿ ಹೇಳಿದ್ದಾರೆ.
ಶಾಸಕ ಕೆ.ಜಿ. ಬೋಪಯ್ಯ ಅವರು ಪ್ರತಿಕ್ರಿಯಿಸಿ ಉದ್ದೇಶಿತ ಸಮಾವೇಶಕ್ಕೆ ಇನ್ನೂ ೩ ದಿನಗಳಿವೆ. ಇದೀಗ ಅಲ್ಲಲ್ಲಿ ಪೂರ್ವಭಾವಿ ಸಭೆ ನಡೆಸಲಾಗುತ್ತಿದೆ. ಪದಾಧಿಕಾರಿಗಳು ಸೇರಿ ತೀರ್ಮಾನಿ ಸುತ್ತೇವೆ. ಕಾರ್ಯಕ್ರಮ ನಾವು ಮಾಡುತ್ತೇವೆ ಎಂಬ ಸಂದೇಶ ನೀಡಿದ್ದಾರೆ.
ಜನ ಜಾಗೃತಿ ಸಮಾವೇಶಕ್ಕೆ ಪೂರ್ವಭಾವಿಯಾಗಿ ಪೊನ್ನಂಪೇಟೆ ತಾಲೂಕಿನ ಪಂಚಾಯಿತಿ ಮಟ್ಟದ ಶಕ್ತಿ ಕೇಂದ್ರಗಳಾದ ಪೊನ್ನಂಪೇಟೆ, ಹುದಿಕೇರಿ, ಬಿರುನಾಣಿ, ಟಿ.ಶೆಟ್ಟಿಗೇರಿ, ಶ್ರೀಮಂಗಲ, ಕುಟ್ಟ, ಕೆ.ಬಾಡಗ, ನಾಲ್ಕೇರಿ, ಕಾನೂರು, ಬಲ್ಯಮುಂಡೂರುವಿನಲ್ಲಿ ಸಭೆ ನಡೆಸಿ, ಸಮಾವೇಶಕ್ಕೆ ಬೃಹತ್ ಸಂಖ್ಯೆಯಲ್ಲಿ ಆಗಮಿಸಿ ಸಮಾವೇಶವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಲಾಯಿತು. ಶಾಸಕ ಕೆ.ಜಿ. ಬೋಪಯ್ಯ ಸೇರಿದಂತೆ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡಿದ್ದರು.