ನಾಪೋಕ್ಲು, ಆ. ೨೪: ಸ್ಥಳೀಯ ಕೆಪಿಎಸ್ ಪ್ರಾಥಮಿಕ ಶಾಲಾ ಆಟದ ಮೈದಾನದಲ್ಲಿ ಗುಂಡಿ ತೆಗೆದು ಮಣ್ಣು ಸ್ಥಳಾಂತರ ಮಾಡಿರುವುದನ್ನು ಶಿವಾಜಿ ಕ್ಲಬ್ ಖಂಡಿಸುತ್ತದೆ ಎಂದು ಕ್ಲಬ್ ಅಧ್ಯಕ್ಷ ಕೆಲೇಟಿರ ದೀಪು ದೇವಯ್ಯ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಿಟಿಷರ (೧೮೭೧) ಕಾಲದಲ್ಲಿ ಸ್ಥಾಪನೆಯಾದ ಈ ಶಾಲೆಗೆ ಕೆಲೇಟಿರ ಕುಟುಂಬಸ್ಥರು ಉದಾರವಾಗಿ ನೀಡಿದ ಜಾಗ ಇದಾಗಿದ್ದು ಸಹಸ್ರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆದಿದ್ದಾರೆ. ಈ ಆಟದ ಮೈದಾನದಲ್ಲಿ ಶಾಲಾ ವಿದ್ಯಾರ್ಥಿಗಳು ಮಾತ್ರವಲ್ಲವೇ ಸ್ಥಳೀಯ ಸಾರ್ವಜನಿಕರು ಕ್ರೀಡಾಕೂಟಗಳಿಗೆ ಮೈದಾನವನ್ನು ಬಳಕೆ ಮಾಡಿಕೊಂಡಿರುತ್ತಾರೆ. ಕಳೆದ ತಾ. ೨೦ ರಂದು ಕೆಪಿಎಸ್ ಶಾಲಾ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಗುಂಡಿ ಮಾಡಿ ಮಣ್ಣನ್ನು ತೆಗೆದು ಮಾರ್ಕಸ್ ಶಾಲೆಗೆ ಸ್ಥಳಾಂತರಗೊಳಿಸಿದ್ದು, ಪ್ರತಿಭಟಿಸಿದ ಬಳಿಕ ಕೆಲಸ ಸ್ಥಗಿತಗೊಳಿಸಿರುತ್ತಾರೆ. ಇದರಿಂದಾಗಿ ಸಾರ್ವಜನಿಕರ ನೆಮ್ಮದಿಗೆ ಭಂಗ ತರುತ್ತಿರುವುದು ಕಂಡುಬAದಿದೆ ಎಂದು ಹೇಳಿದರು.
ಕೆಪಿಎಸ್ ಶಾಲಾ ಆಡಳಿತ ಮಂಡಳಿ ಉಪಾಧ್ಯಕ್ಷ ಕೆ.ಎ. ಹ್ಯಾರಿಸ್ ಉಸ್ತುವಾರಿಯಲ್ಲಿ ಈ ಘಟನೆ ನಡೆದಿದೆ ಎಂದು ಆರೋಪಿಸಿರುವ ಅವರು, ತಿಂಗಳ ಹಿಂದೆ ಶಾಲೆಯ ಶಿಕ್ಷಕರು ವಿದ್ಯಾರ್ಥಿಗೆ ಸಣ್ಣ ಶಿಕ್ಷೆ ನೀಡಿದ ವಿಷಯವನ್ನು ದೊಡ್ಡದು ಮಾಡಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಜೊತೆಗೆ ಶಿಕ್ಷಕರಿಂದ ಹಣ ವಸೂಲಿ ಮಾಡಿದ್ದು ಇದೊಂದು ಶಿಕ್ಷಕ ವೃತ್ತಿಗೆ ಅಪಮಾನಿಸುವಂತಹ ವರ್ತನೆಯಾಗಿ ಸಾರ್ವಜನಿಕರ ಗಮನಕ್ಕೆ ಬಂದಿದೆ ಎಂದರು. ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿರುವ ಶಾಸಕ ಕೆ.ಜಿ. ಬೋಪಯ್ಯ ಮಧ್ಯಪ್ರವೇಶಿಸಿ ವಿಚಾರಣೆ ಮಾಡಿ ಹ್ಯಾರಿಸ್ ಅವರನ್ನು ಕೂಡಲೇ ಉಪಾಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸಿ ವಿದ್ಯಾಭಿಮಾನಿಗಳಿಗೆ, ಸ್ಥಳದಾನಿಗಳಿಗೆ ಗೌರವ ನೀಡುವ ಮತ್ತು ರೌಡಿಶೀಟರ್ ಅಲ್ಲದ ಯೋಗ್ಯ ವ್ಯಕ್ತಿತ್ವದ ಉಪಾಧ್ಯಕ್ಷರನ್ನಾಗಿ ನೇಮಿಸುವುದು ಅವಶ್ಯಕವಾಗಿದೆ. ತಪ್ಪಿದಲ್ಲಿ ಪ್ರಾಂಶುಪಾಲರ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಹಾಗೂ ಸಂಸ್ಥೆಯ ಜಾಗ ಮತ್ತು ಕಟ್ಟಡವನ್ನು ಉಳಿಸಿಕೊಳ್ಳುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕ್ಲಬ್ ಸದಸ್ಯರಾಗಿರುವ ಕೆಲೇಟಿರ ಸುಬ್ರಮಣಿ, ಪೊನ್ನಚಂಡ ಭರತ್, ಪೊನ್ನಚಂಡ ಕಾಳಪ್ಪ ಉಪಸ್ಥಿತರಿದ್ದರು.