ಮಡಿಕೇರಿ, ಆ. ೨೩: ಕೊಡಗು ಜಿಲ್ಲೆಯಲ್ಲಿ ಆ. ೨೬ ರಿಂದ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಮೂಲಕ ಉದ್ದೇಶಿಸಲಾಗಿರುವ ಎರಡು ಪ್ರತ್ಯೇಕÀ ಪ್ರತಿಭಟನಾ ಸಮಾವೇಶದ ಕಾರಣದಿಂದಾಗಿ ಉಂಟಾಗಿರುವ ಪರಿಸ್ಥಿತಿಯ ಕುರಿತು ಅವಲೋಕಿಸಿ ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ದಕ್ಷಿಣ ವಲಯ ಪೊಲೀಸ್ ಮಹಾನಿರ್ದೇಶಕರಾದ ಪ್ರವೀಣ್ ಮಧುಕರ್ ಪವಾರ್ ಅವರು ಇಂದು ಮಡಿಕೇರಿಗೆ ಭೇಟಿ ನೀಡಿ ಸಮಾಲೋಚನೆ ನಡೆಸಿದ್ದಾರೆ.

ಈಗಾಗಲೇ ಈ ಎರಡೂ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಜಿಲ್ಲಾ ದಂಡಾಧಿಕಾರಿಗಳು ಜಿಲ್ಲೆಯಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಆದೇಶಿಸಿದ್ದಾರೆ. ಇದರೊಂದಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಐಜಿ ಅವರು ಭೇಟಿ ನೀಡಿ ಎಸ್‌ಪಿ ಎಂ.ಎ. ಅಯ್ಯಪ್ಪ ಸೇರಿದಂತೆ ಇಲಾಖಾಧಿಕಾರಿ ಗಳೊಂದಿಗೆ ಚರ್ಚೆ ನಡೆಸಿದ್ದಾರೆ.

ಈ ಸಂದರ್ಭ ಮಾಧ್ಯಮದವ ರೊಂದಿಗೆ ಪ್ರತಿಕ್ರಿಯಿಸಿದ ಪ್ರವೀಣ್ ಮಧುಕರ್ ಪವಾರ್ ಅವರು, ಕೊಡಗು ಜಿಲ್ಲೆಯ ಬಂದೋಬಸ್ತ್ ಕುರಿತಾಗಿ ಇಲಾಖೆಯೊಂದಿಗೆ ಚರ್ಚಿಸಲಾಗಿದೆ. ಮಡಿಕೇರಿಯಲ್ಲಿ ತಾ. ೨೬ ರಂದು ಕಾರ್ಯಕ್ರಮ ನಡೆಸಲು ಯಾರಿಗೂ ಅವಕಾಶ ನೀಡಲಾಗುವುದಿಲ್ಲ. ಜಿಲ್ಲೆಯ ಎಲ್ಲಾ ಚೆಕ್‌ಪೋಸ್ಟ್ಗಳಲ್ಲಿ ಈಗಾಗಲೇ ಕಟ್ಟೆಚ್ಚರ ವಹಿಸಲಾಗಿದ್ದು, ಬಂದೋಬಸ್ತ್ ನಡೆಸಲಾಗುತ್ತಿದೆ. ಬೇರೆ ಬೇರೆ ಜಿಲ್ಲೆಗಳಿಂದ ಜನರು ಬರುವ ಸಾಧ್ಯತೆ ಇರುವುದರಿಂದ ಸೂಕ್ತ ಕ್ರಮವಹಿಸಲಾಗಿದೆ ಎಂದು ತಿಳಿಸಿದರು.

ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆತ ಪ್ರಕರಣದ ಬಗ್ಗೆ ಈಗಾಗಲೇ ಅಡಿಷನಲ್ ಎಸ್‌ಪಿ ಮಟ್ಟದ ಅಧಿಕಾರಿಯಿಂದ ಸೂಕ್ತ ತನಿಖೆ ನಡೆಸಲಾಗುತ್ತಿದೆ. ಈ ಬಗ್ಗೆ ವರದಿ ಬಂದ ಬಳಿಕ ಮುಂದಿನ ಕ್ರಮಕೈಗೊಳ್ಳಲಾಗುವುದು. ಕೊಡಗಿನ ಮೂರು ಚೆಕ್‌ಪೋಸ್ಟ್ಗಳಲ್ಲಿ ನಿಗಾವಹಿಸಲಾಗಿದ್ದು, ತಪಾಸಣೆ ನಡೆಸಲಾಗುತ್ತಿದೆ. ಹೊರಜಿಲ್ಲೆ ಗಳಿಂದಲೂ ಸೂಕ್ತ ಬಂದೋಬಸ್ತ್ಗಾಗಿ ಪೊಲೀಸ್ ತಂಡವನ್ನು ಜಿಲ್ಲೆಗೆ ಕರೆಸಿಕೊಳ್ಳಲಾಗುವುದು. ಹಾಸನ, ಮಂಡ್ಯ, ಚಾಮರಾಜನಗರದಿಂದ ಹೆಚ್ಚಿನ ಪೊಲೀಸ್ ತಂಡ ಜಿಲ್ಲೆಗೆ ಆಗಮಿಸಲಿದೆ. ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಎಲ್ಲಾ ರೀತಿಯ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಅವರು ವಿವರಿಸಿದರು. ಈ ಸಂದರ್ಭ ಎಸ್‌ಪಿ ಎಂ.ಎ. ಅಯ್ಯಪ್ಪ ಅವರು ಜತೆಗಿದ್ದರು.