ಮಡಿಕೇರಿ, ಆ.೨೩: ಜಿಲ್ಲಾಧಿಕಾರಿ ಅವರ ದಿನಚರಿ ಹೇಗಿರುತ್ತದೆ? ನಿತ್ಯ ಏನೆಲ್ಲ ಕೆಲಸ ಕಾರ್ಯಗಳಲ್ಲಿ ಅವರು ತೊಡಗಿಸಿಕೊಂಡಿರುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಬಹುತೇಕ ಎಲ್ಲರಲ್ಲೂ ಇರುತ್ತದೆ. ಆದರೆ ಎಲ್ಲರಿಗೂ ಅದನ್ನು ಹತ್ತಿರದಿಂದ ನೋಡುವ, ತಿಳಿಯುವ ಅವಕಾಶ ಸಿಗುವುದಿಲ್ಲ. ಆ ನಿಟ್ಟಿನಲ್ಲಿ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿನಿ ಮೋನಿಷಾ ಡಿ.ಆರ್. ಅವರಿಗೆ ಈ ಅವಕಾಶ ದೊರೆಕಿತು.
ಕೊಡಗು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರೊಂದಿಗೆ ಮೋನಿಷಾ ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ವಿವಿಧ ಸಭೆಗಳಲ್ಲಿ ಪಾಲ್ಗೊಂಡು ಜಿಲ್ಲಾಧಿಕಾರಿಯ ಕಾರ್ಯಚಟುವಟಿಕೆ ಬಗ್ಗೆ ತಿಳಿದುಕೊಂಡರು. ಜಿಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ವಿದ್ಯಾರ್ಥಿನಿಗೆ ಕೌಶಲ್ಯ ಕರ್ನಾಟಕ ಪುಸ್ತಕ ನೀಡಿ, ವಿದ್ಯಾರ್ಥಿಗಳು ಯಾವುದೇ ಸಾಧನೆ ಮಾಡಲು ಛಲ ಇರಬೇಕು ಎಂದು ಹೇಳಿದರು.
ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ, ಜೀವನೋಪಾಯ ಇಲಾಖೆಯಿಂದ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಬಂದಿರುವ ವಿದ್ಯಾರ್ಥಿಗಳಿಗೆ ಈ ಅವಕಾಶವನ್ನು, ಸರ್ಕಾರ ಹಾಗೂ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ ಒದಗಿಸಿಕೊಟ್ಟಿದೆ. ಅದರಂತೆ ಜಿಲ್ಲಾಧಿಕಾರಿ ಅವರ ಜೊತೆ ಸಭೆ, ಸಮಾರಂಭ ಹಾಗೂ ಕಡತ ವಿಲೇವಾರಿ ಬಗ್ಗೆ ದಿನಚರಿಯನ್ನು ಹತ್ತಿರದಿಂದ ಪರಿವೀಕ್ಷಣೆ ಮಾಡುವ ಸದಾವಕಾಶ ಮೋನಿಷಾಗೆ ದೊರಕಿತ್ತು. ವಿದ್ಯಾರ್ಥಿನಿ ಮೋನಿಷಾ ಡಿ.ಆರ್. ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಅಂತಿಮ ವರ್ಷದ ಬಿಎಸ್ಸಿ ಅರಣ್ಯ ಪದವಿ ವ್ಯಾಸಂಗ ಮಾಡುತ್ತಿದ್ದಾಳೆ. ವಿದ್ಯಾರ್ಥಿನಿ ಮೋನಿಷಾ ಜಿಲ್ಲಾಧಿಕಾರಿಗಳೊಂದಿಗೆ ಒಂದು ದಿನ ಕಳೆದದ್ದು, ಒಂದು ಸುವರ್ಣ ಅವಕಾಶವಾಗಿದೆ ಎಂದು ಹೇಳಿದಳು. ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಉಮಾ, ಕೌಶಲ್ಯ ಅಭಿವೃದ್ಧಿ ಸಹಾಯಕ ನಿರ್ದೇಶಕರಾದ ರೇಖಾ ಗಣಪತಿ ಇದ್ದರು.