ಇಂದು ಜಾನಪದ ದಿನಾಚರಣೆ
ಕನ್ನಡ ಸಾಹಿತ್ಯದ ಇತಿಹಾಸವನ್ನೊಮ್ಮೆ ಜಾಲಾಡಿದಾಗ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಲು ಜಾನಪದದ ರಚನೆಗಳು ನೀಡಿರುವ ಕೊಡುಗೆಗಳು ಅಪಾರ ಎಂಬುದನ್ನು ನಾವು ಗಮನಿಸಬಹುದು. ಸುಮಾರು ಒಂದು ಸಾವಿರ ವರ್ಷಗಳ ಹಿಂದೆಯೇ ಮಹಿಳಾಮಣಿಗಳು ಸಹ "ನಿಜದಿಂ ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ್" ಆಗಿದ್ದರಂತೆ. ಅವರು ಸೃಷ್ಟಿಸಿದ ಜಾನಪದ ಕಾವ್ಯಗಳು ತಲೆಮಾರಿನಿಂದ ತಲೆಮಾರಿಗೆ ಕೇವಲ ಬಾಯಿಮಾತಿನಲ್ಲಿ ಹರಿದುಬರುತ್ತಿದೆ ಎಂದಮೇಲೆ ಅಂತಹ ರಚನೆಗಳ ಸೌಂದರ್ಯ ಮತ್ತು ಮೌಲ್ಯಗಳನ್ನು ನಮಗೆ ಊಹಿಸಲೂ ಅಸಾಧ್ಯವೆನ್ನಿಸಬಹುದು. ಅದಕ್ಕೆಂದೇ ಬಿ.ಎಂ. ಶ್ರೀಕಂಠಯ್ಯ ಅವರು ಜಾನಪದ ಸಾಹಿತ್ಯವನ್ನು ಜನವಾಣಿಬೇರು, ಕವಿವಾಣಿ ಹೂವು ಎಂದು ಕರೆದಿದ್ದಾರೆ.
ಜಾನಪದ ಸಾಹಿತ್ಯವು ಶ್ರೀಸಾಮನ್ಯನನ್ನು ಸೆಳೆದಿರುವುದಕ್ಕೆ ಕಾರಣ ಅದರಲ್ಲಿ ಅಡಗಿರುವ ಅನುಭವಗಳ ಹೂರಣವಾಗಿದೆ. ಅಲ್ಲಿ ರಚನೆಗೊಂಡ ಎಲ್ಲವೂ ತಮಗಾಗಿ ಹೇಳಿದ್ದು, ತಮ್ಮ ನಿತ್ಯಜೀವನದಲ್ಲಿ ನಡೆಯುವ ಘಟನೆಗಳು ಎಂಬುದಾಗಿ ಕೇಳುವವನು ಮೊದಲ ಕೇಳ್ವಿಕೆಯಲ್ಲಿಯೇ ಭಾವಿಸುತ್ತಾನೆ. ಇಂತಹ ಶ್ರೀಮಂತ ಜಾನಪದ ಸಾಹಿತ್ಯವನ್ನು ನಾವು ಗಾದೆಗಳು, ಒಗಟುಗಳು, ಜನಪದ ಗೀತೆಗಳು.
ಜನಪದ ವೈದ್ಯ, ಲಾವಣಿ, ದೇವರ ಮೇಲಿನ ನಂಬಿಕೆಗಳನ್ನು ಬಲಗೊಳಿಸುವ ಹಾಡುಗಳು, ನೃತ್ಯದ ಹಾಡುಗಳು, ಜೋಗುಳದ ಹಾಡುಗಳು ಮುಂತಾಗಿ ಹಲವು ವೈವಿಧ್ಯಗಳನ್ನು ಗುರುತಿಸಬಹುದು. ಗೀತೆ, ಕಥನಗೀತೆ, ಯಕ್ಷಗಾನ ಸಾಹಿತ್ಯ, ಹಬ್ಬದ ಸಮಯದಲ್ಲಿ ಹಬ್ಬದ ಮಹತ್ವವನ್ನು ಸಾರುವ ರೂಪಕಗಳು ಹೀಗೆ ಗಾತ್ರದಲ್ಲಿ ಗಗನವನ್ನು ಮೀರಿದ ವೈಶಾಲ್ಯ, ಆಳದಲ್ಲಿ ಸಾಗರವನ್ನು ಮೀರಿಸುವ ಉದ್ದ ಹೀಗೆ ಜಾನಪದವು ತನ್ನದೇ ಹಲವಾರು ವೈಶಿಷ್ಟö್ಯಗಳಿಂದ ಜನಮನವನ್ನು ಗೆದ್ದಿದೆ.
ಇದರಲ್ಲಿ ಗಾದೆಗಳು ನಡೆಯುವ ಘಟನೆಗಳಿಗೆ ಸೂಕ್ತ ಉದಾಹರಣೆಯಂತೆ ನಮಗೆ ತೋರುತ್ತವೆ. ಅಲ್ಪರ ಸಂಗ ಅಭಿಮಾನ ಭಂಗ ಎನ್ನುವ ಗಾದೆಯಲ್ಲಿ ನಾವು ಯಾರೊಂದಿಗೆ ಬೆರೆಯಬಾರದು ಎಂಬುದನ್ನು ಉಪದೇಶಿಸಿದರೆ ಹಾಡ್ತ ಹಾಡ್ತ ರಾಗ, ನರಳ್ತಾ ನರಳ್ತಾ ರೋಗ ಎಂಬ ಗಾದೆಯಲ್ಲಿ ಅತುಳ ಶ್ರಮದಿಂದಷ್ಟೇ ನಾವು ಒಂದು ಕಲೆಯನ್ನು ನಮ್ಮದಾಗಿಸಿಕೊಳ್ಳಬಹುದು ಎಂಬುದನ್ನು ತೋರಿಸಿಕೊಡುತ್ತದೆ. ಬಡವನ ಕೋಪ ದವಡೆಗೆ ಮೂಲ ಎನ್ನುವ ಇನ್ನೊಂದು ಅತಿ ಸರಳವಾದ ಗಾದೆಯೂ ನಾವು ಸಮಾಜದಲ್ಲಿ ಹೇಗಿರಬೇಕು ಎನ್ನುವುದನ್ನು ತಿಳಿಯ ಹೇಳುತ್ತದೆ. ಶ್ರೀಮಂತರ ಬಗ್ಗೆ ನಾವು ಕೋಪಿಸಿಕೊಂಡರೆ ಅದು ನಮಗೆ ಮುಳುವು ಆಗಬಹುದು ಎಂಬುದು ಈ ಗಾದೆಯ ಅರ್ಥವಾಗಿದೆ.
ಇನ್ನು ಮನೋರಂಜನೆಯ ವಿಷಯದದಲ್ಲಿಯೂ ಜಾನಪದ ಸಾಹಿತ್ಯವು ಮೆರೆದಿದೆ. ಕೆಲವು ವಿಷಯಗಳನ್ನು ನೇರವಾಗಿ ಹೇಳದೆ, ಸುತ್ತಿ ಬಳಸಿ, ಅದನ್ನು ಒಡೆದಾಗ ಅದರೊಳಗಿನ ಅರ್ಥವನ್ನು ತಿಳಿದಾಗ ಮನಸ್ಸು ಹಗುರವಾಗುತ್ತದೆ, ಖುಷಿಗೊಳ್ಳುತ್ತದೆ. ಅಮ್ಮನ ಸೀರೆ ಮುಡಿಸಲು ಆಗದು, ಅಪ್ಪನ ದುಡ್ಡು ಎಣಿಸಲು ಆಗದು ಎಂಬ ಗಾದೆಯಲ್ಲಿ ಆಕಾಶವನ್ನು ಅಮ್ಮನ ಸೀರೆಗೆ ಹೋಲಿಸಿದರೆ ನಕ್ಷತ್ರಗಳನ್ನು ಅಪ್ಪನ ದುಡ್ಡಿಗೆ ಹೋಲಿಸಲಾಗಿದೆ.
ಜಾನಪದ ಸಾಹಿತ್ಯದಲ್ಲಿ ಕೆಲವು ನಂಬಿಕೆಗಳನ್ನು ಸಹ ನಾವು ಗುರುತಿಸಬಹುದು. ಇವು ಮೂಢನಂಬಿಕೆಗಳಾಗದೆ ಜನರ ಅನುಭವದ ಚೌಕಟ್ಟಿನಲ್ಲಿ ಮೆರೆದಿದೆ. ಮಾಂಗಲ್ಯಕ್ಕೆ ಬೆಲೆಯನ್ನು ಕೊಡುವವಳು ಗಂಡನಿಗೂ ಮರ್ಯಾದೆಯನ್ನು ಕೊಡುತ್ತಾಳೆ ಎಂಬ ನಂಬಿಕೆಯು ತಾಳಿಯ ಮೌಲ್ಯವನ್ನು ಎತ್ತಿತೋರಿಸುತ್ತದೆ. ಹಾಗೆಯೇ, ಮದುವೆಗೆ ಮುಂಚೆ ಹೆಣ್ಣುಮಕ್ಕಳು ಕರಿಬಳೆಯನ್ನು ಧರಿಸಬಾರದು, ಕರಿಸರ ತೊಡಬಾರದು ಎಂಬಲ್ಲಿ ಕಪ್ಪು ಬಣ್ಣವು ಆಶುಭದ ಸೂಚನೆ ಎಂಬುದನ್ನು ಎತ್ತಿಹಿಡಿಯುತ್ತದೆ.
ಜಾನಪದ ಗೀತೆಗಳಲ್ಲಿ ಹೆಚ್ಚಿನವು ತ್ರಿಪದಿಗಳ ರೀತಿಯಲ್ಲಿ ರಚನೆಗೊಂಡಿವೆ. "ಅಚ್ಚ ಕೆಂಪಿನ ಬಳೆ, ಪಚ್ಚೆ ಹಸುರಿನ ಬಳೆ, ಎನ್ನ ಹಡೆದವ್ವಗೆ ಬಲು ಆಸೆ, ಭಾಗ್ಯದ ಬಳೆಗಾರ ಹೋಗಿಬಾ ನನ್ ತವರೀಗೆ" ಎನ್ನುವ ರಚನೆಯಲ್ಲೂ "ತೌರೂರ ಹಾದೀಲಿ ಕಲ್ಲಿಲ್ಲ ಮುಳ್ಳಿಲ್ಲ, ಸಾಸಿವೆಯಷ್ಟು ಮರಳಿಲ್ಲೆನ್ನುವ ತ್ರಿಪದಿಯಲ್ಲೂ ಹೆಣ್ಣುಮಕ್ಕಳಿಗೆ ತಾಯಿಯ ಮೇಲಿನ, ತೌರಿನ ಮೇಲಿನ ಮೋಹವು ಎಷ್ಟೊಂದು ಇದೆ ಎಂಬುದನ್ನು ತೋರಿಸುತ್ತದೆ.
ಜಾನಪದ ಸಾಹಿತ್ಯವು ಕರ್ನಾಟಕದ ಎಲ್ಲ ಭಾಗಗಳಲ್ಲೂ ಹಾಸುಹೊಕ್ಕಾಗಿ ಹರಡಿದೆ. ಮಂಡ್ಯ ಜಿಲ್ಲೆಯ ಗೀಗೀ ಪದಗಳು, ಕೊಡಗು ಜಿಲ್ಲೆಯ ಬೊಳಕಾಟ್, ಉಮ್ಮತ್ತಾಟ್, ಹುತ್ತರಿಯ ಕೋಲು, ಪಟ್ಟೋಳ ಪಳಮೆಯಲ್ಲಿ ಇರುವ ಸಾಹಿತ್ಯ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಯಕ್ಷಗಾನ, ಭಾಗವತರ ಆಟ, ಉತ್ತರ ಕರ್ನಾಟಕದ ಗೀಜಗನ ಹಾಡು, ಡೊಳ್ಳು ಕುಣಿತ, ಶಿವಮೊಗ್ಗ ಜಿಲ್ಲೆಯ ಕೋಲಾಟ ಇವೆಲ್ಲ ಜಾನಪದ ಸಾಹಿತ್ಯದ ಅವಿಭಾಜ್ಯ ಅಂಗಗಳಾಗಿದ್ದು, ಈಗಲೂ ತಮ್ಮ ಸ್ವಂತಿಕೆಯನ್ನು ಉಳಿಸಿಕೊಂಡಿವೆ.
ಆಧುನಿಕ ಜಗತ್ತಿನಲ್ಲಿ ಆಂಗ್ಲ ವ್ಯಾಮೋಹಕ್ಕೆ ಸಿಲುಕಿ ನಮ್ಮ ಸಾಂಪ್ರದಾಯಿಕ ಸಂಭ್ರಮವು ಮರೆಯಾಗಬಾರದು. ನಮ್ಮ ಕೆಲವು ಹಿರಿಯರು ಈ ದಿಕ್ಕಿನಲ್ಲಿ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಈಗಿನ ಪೀಳಿಗೆಗೆ ಜಾನಪದ ನೃತ್ಯಗಳನ್ನು, ಹಾಡುಗಳನ್ನು ಕಲಿಸಿಕೊಡಲು ಯತ್ನಿಸುತ್ತಿದ್ದಾರೆ. ವರ್ಷಕ್ಕೊಮ್ಮೆ ಬರುವ ಜಾನಪದದ ದಿನದಂದು ಅದರ ಆಚರಣೆಯನ್ನು ಮಾಡಿ, ಅದರ ವೈಭವನ್ನು ಸ್ಮರಿಸಿ ಅನಂತರ ಮರೆತುಬಿಡುವುದರ ಬದಲು ಮನೆಮನೆಗಳಲ್ಲೂ ಇವನ್ನು ಪೋಷಿಸಿದರೆ ಬರಲಿರುವ ಪೀಳಿಗೆಗೆ ನಾವು ಅಮೂಲ್ಯ ಕೊಡುಗೆಯನ್ನು ಕೊಟ್ಟಂತೆ ಆಗಬಹುದು.
- ಕಿಗ್ಗಾಲು ಎಸ್. ಗಿರೀಶ್, ಮೂರ್ನಾಡು (೯೧೪೧೩ ೯೫೪೨೬)