ಕಾಂಗ್ರೆಸ್ ಶಾಸಕಾಂಗ ಪಕ್ಷದಿಂದಲೇ ಅಧಿಕೃತ ಸೂಚನೆ

ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಾರ್ಯದರ್ಶಿ ಈ. ತುಕಾರಾಮ್ ಅಧಿಕೃತ ಸೂಚನೆ. ಸಿದ್ದರಾಮಯ್ಯ ಸೂಚನೆ ಮೇಲೆ ಮಡಿಕೇರಿ ಚಲೋಗೆ ಪ್ರಕಟಣೆ ಹೊರಡಿಸಿದ ಸಿಎಲ್‌ಪಿ ಕಾರ್ಯದರ್ಶಿ. ಆಗಸ್ಟ್ ೨೬ರ ಬೆಳಿಗ್ಗೆ ೧೦.೩೦ಕ್ಕೆ ಪ್ರತಿಭಟನೆಗೆ ಕರೆ ನೀಡಿದ ಕಾಂಗ್ರೆಸ್.

ಮಡಿಕೇರಿಯ ಭಗವತಿ ನಗರದಲ್ಲಿರುವ ಎಸ್‌ಪಿ ಕಚೇರಿ ಎದುರು ಪ್ರತಿಭಟನೆಗೆ ಕರೆ. ಕಾಂಗ್ರೆಸ್ ಪಕ್ಷದ ವಿಧಾನಸಭಾ ಸದಸ್ಯರು, ಪರಿಷತ್ ಸದಸ್ಯರು, ಲೋಕಸಭಾ ಸದಸ್ಯರು, ರಾಜ್ಯ ಸಭಾ ಸದಸ್ಯರಿಗೆ ಸೂಚನೆ ರವಾನೆ.

ವೀಣಾ ಪ್ರತಿಕ್ರಿಯೆ

ಅಂದು ನಾನೇ ಮನೆಯಿಂದ ನಾಟಿ ಕೋಳಿ ಸಾರು ಮುದ್ದೆ, ಬಿದಿರಿನ ಕಣಲೆ ಸಾರು ಮಾಡಿ ಸುದರ್ಶನ ಅತಿಥಿ ಗೃಹಕ್ಕೆ ತಂದಿದ್ದೆ. ಆದರೆ ಅಂದು ಸಿದ್ದರಾಮಯ್ಯ ನಾಟಿ ಕೋಳಿ ಸೇವಿಸಿಲ್ಲ. ಬರೇ ಕೊಡಗಿನ ಕಣಲೆ ಸಾರು ಇಷ್ಟಪಟ್ಟು ತಿಂದಿದ್ದಾರೆ. ಹಾಗಾಗಿ ದೇವಸ್ಥಾನ ಪ್ರವೇಶದಲ್ಲಿ ಯಾವುದೇ ಅಪಚಾರ ಆಗಿಲ್ಲ.

ಸಂಪತ್ ಗೊತ್ತಿಲ್ಲ - ಜೀವಿಜಯ

ನಾನು ಸಂಪತ್‌ನ್ನು ನೋಡಿಯೇ ಇಲ್ಲ. ಆತ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನೂ ಅಲ್ಲ. ನಾನು ಕಾಂಗ್ರೆಸ್ ಪಕ್ಷ ಸೇರಿದ್ದು ಕೇವಲ ೮ ರಿಂದ ೧೦ ಜನರ ಜೊತೆ. ಆತ ನನ್ನ ಬೆಂಬಲಿಗನಾಗಿದ್ದರೆ ನನ್ನ ಜೊತೆಯ ಒಂದು ಫೋಟೋ ತೋರಿಸಲಿ. ಆತನನ್ನು ಜೆಡಿಎಸ್‌ನಲ್ಲಿ ಇದ್ದಾಗಲೂ ನೋಡಿಲ್ಲ ಕಾಂಗ್ರೆಸ್ ಪಕ್ಷಕ್ಕೆ ಬಂದ ಮೇಲೂ ನೋಡಿಲ್ಲ.

ಸಂಪತ್‌ಗೆ ಜೀವಿಜಯ ಸವಾಲು. ಸಂಪತ್ ಶಾಸಕ ಅಪ್ಪಚ್ಚು ರಂಜನ್ ಬೆಂಬಲಿಗ. ಶಾಸಕ ಅಪ್ಪಚ್ಚು ರಂಜನ್ ಗುತ್ತಿಗೆಗಳನ್ನು ನೀಡಿದ್ದಾರೆ. ಘಟನೆ ನಂತರ ನಾನು ಮಾಹಿತಿ ಕಲೆ ಹಾಕಿದ್ದೇನೆ. ಕೊಡ್ಲಿಪೇಟೆಯಲ್ಲಿ ಜೀವಿಜಯ ಹೇಳಿಕೆ.

ಸಿದ್ದುಗೆ ಕೊಡಗಿನ ಬಗ್ಗೆ ದ್ವೇಷ - ಸುಜಾ ಕುಶಾಲಪ್ಪ

ರಾಜ್ಯದ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೊಡಗಿನ ಬಗ್ಗೆ ದ್ವೇಷ ಭಾವನೆಯಿಂದ ವರ್ತಿಸುತ್ತಿದ್ದಾರೆ ಎಂದು ಎಂಎಲ್‌ಸಿ ಸುಜಾ ಕುಶಾಲಪ್ಪ ಆಕ್ಷೇಪಿಸಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಈ ಹಿಂದೆ ಬಲವಂತದ ಟಿಪ್ಪು ಜಯಂತಿ ಆಚರಣೆ ಮೂಲಕ ಜಿಲ್ಲೆಯ ನೆಮ್ಮದಿ ಕೆಡಿಸಿದ್ದಾರೆ. ಕೊಡವರು ದನದ ಮಾಂಸ ತಿನ್ನುತ್ತಾರೆ ಎಂಬ ಆರೋಪ. ಹಿಂದೂಗಳ ಬಗ್ಗೆ ಅವಹೇಳನಕಾರಿ ಮಾತು... ಟಿಪ್ಪು ಜಯಂತಿ ಬೇರೆಡೆ ಆಗದಿದ್ದರೂ, ಕೊಡಗಿನಲ್ಲಿ ನಡೆಯಲೇಬೇಕು ಎಂಬAತೆ ತಮ್ಮ ಪಕ್ಷದವರಿಗೆ ನಿರ್ದೇಶನ... ಇತ್ಯಾದಿ ಕಾರಣಗಳು ಅವರಿಗೆ. ಜಿಲ್ಲೆಯ ಬಗ್ಗೆ ದ್ವೇಷದ ಮನೋಭಾವ ಇರುವುದನ್ನು ಪ್ರತಿಬಿಂಬಿಸುತ್ತದೆ. ಈ ಕಾರಣದಿಂದಲೇ ಹಿಂದೆ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿದ್ದ ಬಿ.ಟಿ. ಪ್ರದೀಪ್ ಅವರು ಕೂಡ ರಾಜೀನಾಮೆ ನೀಡಿದ್ದರು ಎಂದು ಸುಜಾ ಕುಶಾಲಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಕೀಳು ಮಟ್ಟದ ರಾಜಕೀಯ - ಅರುಣ್ ಆರೋಪ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪ್ರಿಯತೆ ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿದ್ದು, ಇದನ್ನು ಸಹಿಸದ ಕೋಮುವಾದಿ ಬಿಜೆಪಿ ಪಕ್ಷದವರು ಸಿದ್ದರಾಮಯ್ಯ ಅವರ ಕಾರಿಗೆ ಮಡಿಕೇರಿ ಮತ್ತು ಗುಡ್ಡೆಹೊಸೂರಿನಲ್ಲಿ ಮೊಟ್ಟೆ ಎಸೆದು ತೀರ ಕೆಳಮಟ್ಟದ ರಾಜಕೀಯ ಮಾಡಿದ್ದಾರೆ. ಸಿದ್ದರಾಮಯ್ಯನವರನ್ನು ತಮ್ಮ ಅಭಿವೃದ್ಧಿ ವಿಷಯಾಧಾರಿತ ರಾಜಕಾರಣದಿಂದ ಎದುರಿಸಲಾಗದ ಬಿಜೆಪಿ ತನ್ನ ಗೂಂಡಾಗಿರಿ ಸಂಸ್ಕೃತಿಯನ್ನು ಮತ್ತೊಮ್ಮೆ ರಾಜ್ಯದ ಜನತೆ ಮುಂದೆ ಅನಾವರಣ ಮಾಡಿದೆ ಎಂದು ಅರುಣ್ ಮಾಚಯ್ಯ ಅಭಿಪ್ರಾಯಿಸಿದ್ದಾರೆ.

ವೈಫಲ್ಯ ಮರೆಗೆ ಮೊಟ್ಟೆ ಎಸೆತ - ಬ್ಲಾಕ್ ಕಾಂಗ್ರೆಸ್

ಕೊಡಗು ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸಿರುವ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಮರೆ ಮಾಚಲು ಮತ್ತು ಜನರ ಗಮನವನ್ನು ಬೇರೆಡೆಗೆ ಸೆಳೆಯುವ ದುರುದ್ದೇಶದಿಂದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಬಿಜೆಪಿ ಮಂದಿ ಮೊಟ್ಟೆ ಎಸೆದು ಪ್ರತಿಭಟನೆ ನಡೆಸಿದ್ದಾರೆ ಎಂದು ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಆರೋಪಿಸಿದೆ.

ಪತ್ರಿಕಾ ಪ್ರಕಟಣೆ ನೀಡಿರುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್. ಅನಂತಕುಮಾರ್, ಬಿಜೆಪಿ ಮತ್ತು ಸಂಘ ಪರಿವಾರದ ಮಂದಿ ಗೂಂಡಾ ಪ್ರವೃತ್ತಿ ತೋರಿದ್ದಾರೆ. ಕೊಡಗಿನ ಅಭಿವೃದ್ಧಿ ವಿಚಾರದಲ್ಲಿ ಸರ್ಕಾರದ ನಿರ್ಲಕ್ಷö್ಯದ ಬಗ್ಗೆ ಜನರಿಗೆ ಅಸಮಾಧಾನವಿದ್ದು, ಹಾದಿ ತಪ್ಪಿಸುವ ಬಿಜೆಪಿ ಪ್ರಯತ್ನ ಫಲ ನೀಡುವುದಿಲ್ಲ ಭ್ರಷ್ಟಾಚಾರ ಹಾಗೂ ಕಳಪೆ ಕಾಮಗಾರಿಯನ್ನು ಮುಚ್ಚಿ ಹಾಕುವ ಉದ್ದೇಶದಿಂದ ಕಾನೂನಿಗೆ ವಿರುದ್ಧವಾಗಿ ಪ್ರತಿಭಟನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಬಿ.ಜೆ.ಪಿ. ಗೂಂಡಾ ವರ್ತನೆ : ಎಸ್‌ಡಿಪಿಐ ಆರೋಪ

ಸಿದ್ದರಾಮಯ್ಯ ಅವರು ಕೊಡಗು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭ ಪೊಲೀಸರ ಎದುರೇ ಬಿಜೆಪಿ ಕಾರ್ಯಕರ್ತರು ಗೂಂಡಾ ವರ್ತನೆ ತೋರಿದ್ದಾರೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಆರೋಪಿಸಿದೆ.

ಪತ್ರಿಕಾ ಪ್ರಕಟಣೆ ನೀಡಿರುವ ಎಸ್‌ಡಿಪಿಐನ ಕೊಡಗು ಜಿಲ್ಲಾಧ್ಯಕ್ಷ ಕಲೀಲ್ ಮಡಿಕೇರಿ ಪೊಲೀಸರ ಸಮ್ಮುಖದಲ್ಲೇ ಇಂತಹ ಘಟನೆ ನಡೆದಿರುವುದು ಖಂಡನೀಯವೆAದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿರೋಧ ಮಾಡಲು ಮತ್ತು ಪ್ರತಿಭಟಿಸಲು ಕಾನೂನಿನಲ್ಲಿ ಹಲವು ರೀತಿಯ ಅವಕಾಶಗಳಿದ್ದರೂ ಪ್ರತಿಭಟನೆಯ ನೆಪದಲ್ಲಿ ಅತಿರೇಕ ವರ್ತನೆ ತೋರಲಾಗಿದೆ ಎಂದು ಆರೋಪಿಸಿರುವ ಅವರು, ತಪ್ಪಿತಸ್ಥರನ್ನು ಪೊಲೀಸರು ತಕ್ಷಣ ಬಂಧಿಸಬೇಕೆAದು ಒತ್ತಾಯಿಸಿದ್ದಾರೆ.

ಕೊಡಗಿನ ಗೌರವಕ್ಕೆ ಧÀಕ್ಕೆ - ಜೆ.ಎಲ್. ಜನಾರ್ಧನ

ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆಯುವ ಮೂಲಕ ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ವೀರಸೇನಾನಿಗಳ ಶಿಸ್ತಿನ ನಾಡು ಕೊಡಗಿನ ಗೌರವಕ್ಕೆ ಧÀಕ್ಕೆ ತಂದಿದ್ದಾರೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಜೆ.ಎಲ್. ಜನಾರ್ಧನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಕ್ಷಣೆ ಇಲ್ಲದಾಗಿದೆ : ಮನ್ಸೂರ್

ಸಿದ್ದರಾಮಯ್ಯ ಅವರ ವಿರುದ್ಧ ಕಾನೂನು ಉಲ್ಲಂಘಿಸಿ ಬಿಜೆಪಿ ನಡೆಸಿರುವ ಪ್ರತಿಭಟನೆ ಖಂಡನೀಯವೆAದು ತಿಳಿಸಿರುವ ಜಾತ್ಯತೀತ ಜನತಾದಳದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಎ.ಮನ್ಸೂರ್ ಆಲಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ವಿರೋಧ ಪಕ್ಷದ ನಾಯಕರಿಗೇ ರಕ್ಷಣೆ ಇಲ್ಲದಾಗಿದೆ ಎಂದು ಆರೋಪಿಸಿದ್ದಾರೆ.

ಸಿದ್ದರಾಮಯ್ಯ ಅವರು ಬರುವ ಸಂದರ್ಭ ಪ್ರತಿಭಟನೆ ನಡೆಯುತ್ತದೆ ಎಂದು ಪೊಲೀಸರಿಗೆ ಮಾಹಿತಿ ಇದ್ದರೂ ಬಿಗಿ ಬಂದೋಬಸ್ತ್ ಕಲ್ಪಿಸದೆ ನಿರ್ಲಕ್ಷಿಸಿದ ಪರಿಣಾಮ ಇಂದು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಕೊಡಗಿನಲ್ಲಿ ಅಗೌರವವಾಗಿದೆ. ಬಿಜೆಪಿ ಸರ್ಕಾರ ಪೊಲೀಸರನ್ನು ಅಸಹಾಯಕರನ್ನಾಗಿ ಮಾಡಿದೆ ಎಂದು ಆರೋಪಿಸಿದ್ದಾರೆ.

ಜೆಡಿಎಸ್ ಖಂಡನೆ

ಸಿದ್ದರಾಮಯ್ಯ ಅವರು ಕೊಡಗು ಜಿಲ್ಲೆಗೆ ಅಗಮಿಸಿದ್ದ ಸಂದರ್ಭ ಮೊಟ್ಟೆ ಹೊಡೆದು ಅವಮಾನಿಸಿರುವುದು ಖಂಡನೀಯ ಎಂದು ಜೆಡಿಎಸ್ ಅಸಮಾಧಾನ ವ್ಯಕ್ತಪಡಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಕ್ಷೇತ್ರ ಸಮಿತಿ ಅಧ್ಯಕ್ಷ ಹೆಚ್.ಆರ್. ಸುರೇಶ್, ಬಿಜೆಪಿ ಆಡಳಿತದ ಸರ್ಕಾರದಲ್ಲಿ ವಿರೋಧ ಪಕ್ಷದ ನಾಯಕರಿಗೆ ರಕ್ಷಣೆ ಇಲ್ಲ ಎಂಬAತಾಗಿದೆ. ಇನ್ನು ಸಾಮಾನ್ಯ ಜನರ ಪಾಡೇನು ಎಂದು ಪ್ರಶ್ನಿಸಿದ ಅವರು, ಬಿಜೆಪಿ ಸರ್ಕಾರದ ಕುಮ್ಮಕ್ಕಿನಿಂದಲೇ ವಿರೋಧ ಪಕ್ಷದ ನಾಯಕರನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿದರು.

ಕೊಡಗಿಗೆ ಅವಮಾನ - ಲಾರೆನ್ಸ್

ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದ ಕೃತ್ಯವು ಇಡೀ ಕೊಡಗಿಗೆ ಮಾಡಿದ ಅವಮಾನ. ಇದು ಬಿಜೆಪಿ ಕಾರ್ಯಕರ್ತರ ಪೂರ್ವ ನಿಯೋಜಿತ ಕೃತ್ಯ ಎಂದು ಜಿಲ್ಲಾ ಕಾಂಗ್ರೆಸ್ ಸದಸ್ಯ ವಿ.ಎ.ಲಾರೆನ್ಸ್ ಆರೋಪಿಸಿದರು.

ಸಿದ್ದರಾಮಯ್ಯ ಕುಳಿತ್ತಿದ್ದ ಕಾರಿನ ಮುಂದೆ ಹೋಗುತ್ತಿದ್ದ ಬೆಂಗಾವಲು ಪಡೆಯ ವಾಹನ ತಿತಿಮತಿಯಲ್ಲಿ ಬಿಜೆಪಿ ಕಾರ್ಯಕರ್ತರಿದ್ದ ಕಡೆ ಇದ್ದಕ್ಕಿದ್ದಂತೆ ನಿಂತಿದೆ. ಕಾಂಗ್ರೆಸ್ ಕಾರ್ಯಕರ್ತರಿರಬಹುದು ಎಂದು ಸಿದ್ದರಾಮಯ್ಯನವರು ಕಾರಿನ ಗಾಜು ಇಳಿಸಿದಾಗ ಬಿಜೆಪಿ ಕಾರ್ಯಕರ್ತರು ಗಾಜಿನ ಒಳಗೆ ಕೈಹಾಕಿ, ಫೋಟೊವನ್ನು ಹಾಕಿದ್ದಾರೆ. ಬೇರೆ ಮಾದರಿಯ ಅಪಾಯಕಾರಿ ವಸ್ತುವನ್ನು ಎಸೆದಿದ್ದರೆ ದೊಡ್ಡ ಅನಾಹುತ ಸಂಭವಿಸುತ್ತಿತ್ತು. ಇದರಿಂದ ಪೊಲೀಸರ ನಿರ್ಲಕ್ಷö್ಯದ ಬಗ್ಗೆ ಸಂಶಯ ಮೂಡಿದೆ. ಈ ಬಗ್ಗೆ ಉನ್ನತಮಟ್ಟದ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಮೊಟ್ಟೆ ಎಸೆತ : ಬಿಜೆಪಿ ಸಮರ್ಥನೆ

ಕೊಡವರನ್ನು ಗೋ ಮಾಂಸ ಭಕ್ಷಕರೆಂದು ಹೇಳಿರುವುದು ಕೊಡವರಿಗೆ ಮಾತ್ರವಲ್ಲದೆ ಕೊಡಗಿನವರೆಲ್ಲರಿಗೂ ತೀವ್ರ ಬೇಸರ ತರಿಸಿದೆ. ಇದರೊಂದಿಗೆ ಸ್ವಾತಂತ್ರ÷್ಯ ವೀರ ಸಾವರ್ಕರನ್ನು ಅಪಮಾನಿಸಿರುವುದು ದೇಶಭಕ್ತರ ಮನಸ್ಸಿಗೆ ಅತೀವ ನೋವುಂಟು ಮಾಡಿದೆ. ಇದರಿಂದ ಜನಾಕ್ರೋಶಗಳು ಸ್ಫೋಟಗೊಂಡು ಕೊಡಗಿನಲ್ಲಿನ ಪ್ರಜ್ಞಾವಂತ ನಾಗರಿಕರು ಸಿದ್ದರಾಮಯ್ಯರಿಗೆ ತಮ್ಮದೇ ರೀತಿಯಲ್ಲಿ ಉತ್ತರ ನೀಡಿದ್ದಾರೆ. ಸಿದ್ದರಾಮಯ್ಯ ಪಶ್ಚಾತ್ತಾಪ ಪಡುವ ಮೂಲಕ ಮುಂದೆ ಪಾಠ ಕಲಿಯಬೇಕು. ಅನ್ನುವುದು ಜನರ ಉದ್ದೇಶವಾಗಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡುವ ಹಕ್ಕು ಸಂವಿಧಾನದಲ್ಲಿದ್ದರೂ ಬಿಜೆಪಿ ಮಾಡಿದ ಪ್ರತಿಭಟನೆಗೆ ಪೊಲೀಸರ ಮೇಲೆ ಒತ್ತಡ ತಂದು ಸಕ್ರಿಯ ಕಾರ್ಯಕರ್ತರ ಮೇಲೆ ಪೊಲೀಸ್ ಪ್ರಕರಣ ದಾಖಲು ಮಾಡುವುದನ್ನು ನಾವು ಪ್ರಬಲವಾಗಿ ಖಂಡಿಸುತ್ತೇವೆAದು ಬಿಜೆಪಿ ವೀರಾಜಪೇಟೆ ಮಂಡಲ ಅಧ್ಯಕ್ಷ ನೆಲ್ಲೀರ ಚಲನ್ ಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬಿಜೆಪಿಗೆ ಸಂಬAಧವಿಲ್ಲ - ಯುವ ಮೋರ್ಚಾ

ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದ ಪ್ರಕರಣಕ್ಕೂ ಬಿಜೆಪಿಗೂ ಯಾವುದೇ ಸಂಬAಧವಿಲ್ಲವೆAದು ಬಿಜೆಪಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಎಂ.ಜೆ.ದರ್ಶನ್ ಜೋಯಪ್ಪ ಸ್ಪಷ್ಟಪಡಿಸಿದ್ದಾರೆ.

ಸಂಕಷ್ಟದಲ್ಲಿರುವವರ ಸಮಸ್ಯೆಗೆ ಸ್ಪಂದಿಸುವ ಬದಲು ಸಡಗರದಿಂದ ಸಿದ್ದರಾಮೋತ್ಸವ ಆಚರಿಸಿಕೊಂಡ ಸಿದ್ದರಾಮಯ್ಯ ಇದೀಗ ಜಿಲ್ಲೆಗೆ ಬಂದು ಏನು ಪ್ರಯೋಜನ. ಅವರ ಹೇಳಿಕೆಗಳು ಜನರ ಭಾವನೆಗಳನ್ನು ಕೆರಳಿಸುವಂತದ್ದಾಗಿದ್ದು, ಪ್ರಜ್ಞಾವಂತರು ಪ್ರತಿಭಟಿಸುವ ಮೂಲಕ ಉತ್ತರಿಸಿದ್ದಾರೆ ಎಂದು ಹೇಳಿದ್ದಾರೆ.

ಏಕಪಕ್ಷೀಯ ವರ್ತನೆ : ಆರೋಪ

ಸಿದ್ದರಾಮಯ್ಯ ಅವರು ಮಡಿಕೇರಿಗೆ ಭೇಟಿ ನೀಡಿದ ಸಂದರ್ಭ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ನಡೆಸಿದ ಪ್ರತಿಭಟನೆಗೆ ಪ್ರತಿಯಾಗಿ ಕಾಂಗ್ರೆಸ್ಸಿಗರು ಘೋಷಣೆಗಳನ್ನು ಕೂಗಿದಾಗ ಕೆಲವು ಪೊಲೀಸ್ ಅಧಿಕಾರಿಗಳು ಏಕಪಕ್ಷೀಯವಾಗಿ ನಡೆದುಕೊಂಡು ನಮ್ಮ ವಿರುದ್ಧ ಹರಿಹಾಯ್ದಿದ್ದಾರೆ ಎಂದು ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಖಲೀಲ್ ಬಾಷಾ ಆರೋಪಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸಿದ್ದರಾಮಯ್ಯ ಅವರು ಮಳೆಹಾನಿ ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸಿ ಹೆಚ್ಚಿನ ಪರಿಹಾರಕ್ಕಾಗಿ ಸರ್ಕಾರದ ಮೇಲೆ ಒತ್ತಡ ಹೇರಲು ಬಂದಿದ್ದರೇ ಹೊರತು ರಾಜಕೀಯ ಮಾಡಲು ಅಲ್ಲ. ವಿರೋಧ ಪಕ್ಷದ ನಾಯಕರೊಬ್ಬರು ಜಿಲ್ಲೆಗೆ ಭೇಟಿ ನೀಡಿದಾಗ ಬಿಜೆಪಿ ಮಂದಿ ಅಗೌರವದಿಂದ ನಡೆದುಕೊಂಡಿದ್ದಲ್ಲದೆ ಕಾನೂನಿಗೆ ವಿರುದ್ಧವಾಗಿ ಪ್ರತಿಭಟನೆ ನಡೆಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವರ್ಗಾವಣೆ ಸಲ್ಲದು : ಬಾಳೆಲೆ ಕೊಡವ ಸಮಾಜ

ರಾಜಕೀಯ ಕಾರಣಗಳಿಗಾಗಿ ಕೊಡಗಿನ ಪೊಲೀಸ್ ಇಲಾಖೆಯನ್ನು ದೂಷಿಸುವುದು ಮತ್ತು ಜಿಲ್ಲಾ ಎಸ್ಪಿ ಮಲಚಿರ ಎ. ಅಯ್ಯಪ್ಪ ಅವರನ್ನು ವರ್ಗಾವಣೆ ಮಾಡದಂತೆ ಬಾಳೆಲೆ ಕೊಡವ ಸಮಾಜ ಆಗ್ರಹಿಸಿದೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಕೊಡವ ಸಮಾಜದ ಅಧ್ಯಕ್ಷ ಮಲಚೀರ ಸಿ. ಬೋಸ್ ಮತ್ತು ಆಡಳಿತ ಮಂಡಳಿ ಸದಸ್ಯರು ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಿಲ್ಲೆಯ ಜನರ ಹಿತಾಸಕ್ತಿಗೆ ವಿರುದ್ಧವಾಗಿ ಟಿಪ್ಪು ಜಯಂತಿಯನ್ನು ಆಚರಣೆ ಮಾಡಿ ಕುಟ್ಟಪ್ಪನವರನ್ನು ಕಿಡಿಗೇಡಿಗಳು ಕೊಲ್ಲುವಾಗ ಪೊಲೀಸ್ ಇಲಾಖೆ ಕುಟ್ಟಪ್ಪನವರನ್ನು ಏಕೆ ರಕ್ಷಣೆ ಮಾಡಲಿಲ್ಲವೆಂದು ಪ್ರಶ್ನಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಯ್ಯಪ್ಪ ಅವರು ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಯಾವುದೇ ಕಾರಣಕ್ಕೂ ಜಿಲ್ಲೆಯಿಂದ ಅವರನ್ನು ವರ್ಗಾವಣೆ ಮಾಡದಂತೆ ಸರಕಾರವನ್ನು ಆಗ್ರಹಿಸಿದರು.

ಜಿಲ್ಲೆಯ ಪ್ರತಿಷ್ಠೆಗೆ ಕಳಂಕ - ಆರೋಪ

ಬಿಜೆಪಿಯ ದುರುದ್ದೇಶದ ಮತ್ತು ದ್ವೇಷದ ರಾಜಕಾರಣದಿಂದಾಗಿ ಶೂರರ ನಾಡಾದ ಕೊಡಗಿನ ಪ್ರತಿಷ್ಠೆಗೆ ಕಳಂಕ ಉಂಟಾಗಿದೆ. ಕೊಡಗಿನ ರಾಜಕೀಯ ಸಂಸ್ಕೃತಿ ರಾಜ್ಯಾದ್ಯಂತ ಟೀಕೆಗೊಳಗಾಗುತ್ತಿದೆ. ಈ ಕಾರಣದಿಂದ ಬಿಜೆಪಿ ಜಿಲ್ಲೆಯ ಜನತೆಯ ಕ್ಷಮೆಯಾಚಿಸಬೇಕು ಎಂದು ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಚ್.ಎ. ಹಂಸ ಹೇಳಿದ್ದಾರೆ.

ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದ ಕಾರಣಕ್ಕೆ ಅವರ ಜನಪ್ರಿಯತೆಗಾಗಲಿ, ಘನತೆಗಾಗಲಿ ದಕ್ಕೆ ಉಂಟಾಗಿಲ್ಲ. ಆದರೆ ಇದರಿಂದ ಜಿಲ್ಲೆಯ ಪ್ರತಿಷ್ಠೆಗೆ ಕಪ್ಪು ಚುಕ್ಕೆ ಉಂಟಾಗಿದೆ ಎಂದು ವಿಷಾದಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ನಡೆಸಲು ಎಲ್ಲರಿಗೂ ಹಕ್ಕಿದೆ. ಯಾವುದೇ ಪ್ರತಿಭಟನೆಗಳು ಕಾನೂನಿನ ಚೌಕಟ್ಟಿನೊಳಗಿರಬೇಕು. ಕಾನೂನನ್ನು ಕೈಗೆತ್ತಿಕೊಳ್ಳುವ ಪ್ರತಿಭಟನೆಗಳು ಪ್ರಜಾಪ್ರಭುತ್ವ ವಿರೋಧಿ ಧೋರಣೆಯಾಗಿದೆ ಎಂದರು.

ಜಿಲ್ಲೆಗೆ ಮಾಡಿದ ಅವಮಾನ

ಕೊಡಗಿನಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳುವ ಉದ್ದೇಶದಿಂದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೊಡಗಿಗೆ ಭೇಟಿ ನೀಡಿದ ಸಂದರ್ಭ ಅವರ ಕಾರಿಗೆ ಮೊಟ್ಟೆ ಎಸೆಯಲಾಗಿದೆ. ಇದು ಜಿಲ್ಲೆಗೆ ಮಾಡಿದ ಅವಮಾನ ಎಂದು ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ವರ್ಷ ಸುರಿದ ಧಾರಾಕಾರ ಮಳೆಯಿಂದ ಕೊಡಗಿನಲ್ಲಿ ಭಾರೀ ಪ್ರಮಾಣದ ಹಾನಿಯಾಗಿದೆ. ಕಾಫಿ, ಕಾಳುಮೆಣಸು, ಏಲಕ್ಕಿ ಸೇರಿದಂತೆ ತೋಟಗಾರಿಕಾ ಬೆಳೆಗಳು ನಷ್ಟಗೊಂಡಿವೆ. ಬಡವರ ಮನೆಗಳು ಕುಸಿದು ಬಿದ್ದಿವೆ. ಸಂತ್ರಸ್ಥರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಸಿಗುತ್ತಿಲ್ಲ. ಸರ್ಕಾರದ ಗಮನ ಸೆಳೆಯಲು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೊಡಗಿನ ಪರಿಸ್ಥಿತಿಯನ್ನು ಅವಲೋಕಿಸಲು ಬಂದ ಸಂದರ್ಭ ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆದು ಅವಮಾನಿಸಿರುವುದು ಅಕ್ಷö್ಮಮ್ಯ ಎಂದಿದ್ದಾರೆ.

ಅಭಿವೃದ್ಧಿ ಹಿನ್ನಡೆ ಮರೆಮಾಚುವ ಯತ್ನ

ಅಭಿವೃದ್ಧಿ ವಿಚಾರದಲ್ಲಿ ವೈಫಲ್ಯ ಅನುಭವಿಸಿರುವ ಬಿಜೆಪಿ ಅದನ್ನು ಮರೆಮಾಚಲು ಸಂಘರ್ಷ ಸೃಷ್ಟಿಸಲು ಮುಂದಾಗಿದೆ ಎಂದು ಜಿಲ್ಲಾ ಯುವಕಾಂಗ್ರೆಸ್ ಅಧ್ಯಕ್ಷ ಮಿಥುನ್ ಗೌಡ ಆರೋಪಿಸಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆ ಎಸೆದಾತ ಹಿಂದೂಪರ ಸಂಘಟನೆಗಳ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಹಾಗೂ ಶಾಸಕರ ಜೊತೆ ಇರುವ ಫೋಟೋಗಳು ವೈರಲ್ ಆಗಿವೆ ಎಂದರು.

ತಾ. ೨೬ರ ಮಡಿಕೇರಿ ಚಲೋಗೆ ನಿರೀಕ್ಷೆಗೆ ಮೀರಿ ಜನ ಬರುತ್ತಾರೆ. ಸೂಕ್ತ ಸೆಕ್ಷನ್‌ನಡಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸುವAತೆ ಆಗ್ರಹಿಸಿದರು.