ಮಡಿಕೇರಿ, ಆ. ೧೮: ರಾಜ್ಯ ವಿರೋಧ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಳೆ ಹಾನಿ ಪ್ರದೇಶಗಳ ಪರಿಶೀಲನೆಗಾಗಿ ಕೊಡಗಿಗೆ ಆಗಮಿಸಿದ್ದ ವೇಳೆ ಅಲ್ಲಲ್ಲಿ ಬಿಜೆಪಿ, ಬಿಜೆಪಿ ಯುವ ಮೋರ್ಚಾ ಹಾಗೂ ಹಿಂದೂಪರ ಸಂಘಟನೆಗಳಿAದ ಪ್ರತಿಭಟನೆ ಹಾಗೂ ಆಕ್ರೋಶ ವ್ಯಕ್ತವಾಯಿತು.

ತಿತಿಮತಿ, ಜಿಲ್ಲಾ ಕೇಂದ್ರ ಮಡಿಕೇರಿ, ಗುಡ್ಡೆಹೊಸೂರಿನಲ್ಲಿ ಹಾಗೂ ಸೋಮವಾರಪೇಟೆಯಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರಮುಖರು, ಸಿದ್ದರಾಮಯ್ಯ ಹಿಂದೂ ವಿರೋಧಿ ಎಂದು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದರು. ಕಪ್ಪುಪಟ್ಟಿ ಪ್ರದರ್ಶನದೊಂದಿಗೆ ಧಿಕ್ಕಾರದ ಘೋಷಣೆ ಸಹಿತ ಸಿದ್ದರಾಮಯ್ಯ ಕಾರಿನತ್ತ ಮೊಟ್ಟೆ ಎಸೆದ ಘಟನೆಯೂ ನಡೆಯಿತು. ಗುಡ್ಡೆಹೊಸೂರಿನಲ್ಲಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದರು.

ಮುಖ್ಯವಾಗಿ ಕೊಡಗು ಜಿಲ್ಲೆಗೆ ಸಂಬAಧಿಸಿದAತೆ ಕೊಡವರನ್ನು ಹತ್ಯೆ ಮಾಡಿರುವ ಆರೋಪವಿದ್ದ ಟಿಪ್ಪುವಿನ ಜಯಂತಿಯನ್ನು ಜಿಲ್ಲೆಯಲ್ಲಿ ಬಲಾತ್ಕಾರ ಪೂರ್ವಕವಾಗಿ ಆಚರಣೆ ಮಾಡಲು ಸಿದ್ದರಾಮಯ್ಯ ಅವರೆ ಕಾರಣಕರ್ತರು. ಜೊತೆಗೆ ಕೊಡವ ಜನಾಂಗದವರು ಕೂಡ ಗೋಮಾಂಸ ಭಕ್ಷಣೆ ಮಾಡುತ್ತಾರೆ ಎನ್ನುವ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು ಎನ್ನುವ ಆಕ್ರೋಶವು ಪ್ರತಿಭಟನಾಕಾರರಿಂದ ವ್ಯಕ್ತಗೊಂಡಿತ್ತು. ಅಲ್ಲದೇ ಇತ್ತೀಚೆಗೆ ಸ್ವಾತಂತ್ರö್ಯ ಹೋರಾಟಗಾರರೆಂದು ಹಿಂದೂಪರ ಸಂಘಟನೆಯವರು ಪ್ರತಿಬಿಂಬಿಸಿದ್ದ ವೀರ ಸಾವರ್ಕರ್ ಅವರನ್ನು ಸಿದ್ದರಾಮಯ್ಯ ಅವರು ತುಚ್ಚವಾಗಿ ನಿಂದಿಸಿದ್ದರು. ಜೊತೆಗೆ ಹಿಂದೂ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದರು ಎಂಬುದಾಗಿಯೂ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿ ‘ಸಿದ್ದರಾಮಯ್ಯ ಗೋ ಬ್ಯಾಕ್’ ಎಂದು ಘೋಷಣೆ ಕೂಗಿದರು.

ತಿತಿಮತಿಯಲ್ಲಿ ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗರು ಪ್ರವೇಶಿಸುತ್ತಿದ್ದಂತೆಯೇ ಜಿಲ್ಲೆಯಲ್ಲಿ ಅವರ ವಿರುದ್ಧ ಪ್ರತಿಭಟನೆ ಪ್ರಾರಂಭಗೊAಡಿತು. ಆನೆಚೌಕೂರಿನಲ್ಲಿ ಕಾಂಗ್ರೆಸ್ ಪ್ರಮುಖರು ಹಾಗೂ ಕಾರ್ಯಕರ್ತರಿಂದ ಸ್ವಾಗತಿಸಲ್ಪಟ್ಟಿದ್ದ ಮಾಜಿ ಮುಖ್ಯಮಂತ್ರಿಯವರಿಗೆ ತಿತಿಮತಿಯಲ್ಲಿ ಪರಿಸ್ಥಿತಿ ವ್ಯತಿರಿಕ್ತಗೊಂಡು ತೀವ್ರ ವಿರೋಧದ ಸನ್ನಿವೇಶ ತಲೆದೋರಿತು. ಬಳಿಕ ಇದೇ ಸ್ಥಿತಿ ಮಡಿಕೇರಿಯಲ್ಲಿಯೂ ಮುಂದುವರಿದು ಜನರಲ್ ತಿಮ್ಮಯ್ಯ ವೃತ್ತದಲ್ಲಿ ಬಿಜೆಪಿ ಮತ್ತಿತರ ಸಂಘಟನೆಗಳ ಗುಂಪಿನೊAದಿಗೆ ಸಿದ್ದರಾಮಯ್ಯ ಅವರೊಂದಿಗಿದ್ದ ಕಾಂಗ್ರೆಸ್ ಪಡೆ ಸಂಘರ್ಷಕ್ಕಿಳಿದು ರಣರಂಗದ ಹೋರಾಟದ ಕೋಲಾಹಲ ಕಂಡುಬAದಿತು. ಬಳಿಕ ಪೊಲೀಸ್ ವರಿಷ್ಠಾಧಿಕಾರಿಯವರ ಮಧ್ಯ ಪ್ರವೇಶದಿಂದ ಪರಿಸ್ಥಿತಿ ತಾತ್ಕಾಲಿಕವಾಗಿ ತಿಳಿಗೊಂಡಿತು.

ಸಿದ್ದರಾಮಯ್ಯ ಅವರು ಕೊಡಗಿನಿಂದ ಹಿಂತಿರುಗುತ್ತಿದ್ದ ಸಂದರ್ಭ ಘರ್ಷಣೆಯ ಕಾವು ಇಮ್ಮಡಿಗೊಂಡಿತು. ಗುಡ್ಡೆಹೊಸೂರುವಿನಲ್ಲಿ ಅವರ ಕಾರನ್ನು ತಡೆದ ಸಂಘಟನೆಗಳ ಮತ್ತು ಬಿಜೆಪಿಯ ಪ್ರತಿಭಟನಾ ಪಡೆ ತೀವ್ರ ಘರ್ಷಣೆಗೆ ಇಳಿದಾಗ ಅನಿವಾರ್ಯವಾಗಿ ಎಸ್ಪಿ ಅವರು ಲಾಠಿ ಚಾರ್ಜ್ ಮೂಲಕ ಉದ್ವಿಗ್ನ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಈ ನಡುವೆ ಸೋಮವಾರಪೇಟೆಯಲ್ಲಿಯೂ ಸ್ಥಳೀಯ ಪ್ರತಿಭಟನಾಕಾರರು ಸಿದ್ದರಾಮಯ್ಯ ಅವರ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.

ತಿತಿಮತಿಯಲ್ಲಿ

*ಗೋಣಿಕೊಪ್ಪ: ಜಿಲ್ಲಾ ಪ್ರವಾಸ ಹಾಗೂ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಲು ಕೊಡಗು ಜಿಲ್ಲೆಗೆ ಆಗಮಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಬಿಜೆಪಿ ವಿವಿಧ ಮೋರ್ಚಾದ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸಿದ್ದಲ್ಲದೇ ನೆರೆದ ಪ್ರತಿಯೊಬ್ಬ ಕಾರ್ಯಕರ್ತನು ವೀರ ಸಾವರ್ಕರ್ ಅವರ ಭಾವಚಿತ್ರವನ್ನು ಪ್ರದರ್ಶಿಸಿ ಸಿದ್ದರಾಮಯ್ಯ ಅವರು ಹಿಂದೂ ವಿರೋಧಿ ಎಂಬ ಘೋಷಣೆಯನ್ನು ಕೂಗುತ್ತಾ ಆಕ್ರೋಶವನ್ನು ವ್ಯಕ್ತಪಡಿಸಿದರು.

ತಿತಿಮತಿ ಆನೆಚೌಕರು ಪ್ರವೇಶ ದ್ವಾರದಿಂದ ಕೊಡಗಿಗೆ ಆಗಮಿಸುತ್ತಿದ್ದಂತೆ ತಿತಿಮತಿ ಪಟ್ಟಣದಲ್ಲಿ ಬಿಜೆಪಿಯ ನೂರಾರು ಕಾರ್ಯಕರ್ತರು ಗುಪ್ತವಾಗಿ ನಿಂತು ‘ಹಿಂದೂ ವಿರೋಧಿ ಸಿದ್ದರಾಮಯ್ಯ ಗೋ ಬ್ಯಾಕ್’ ಎಂಬ ಘೋಷಣೆಯನ್ನು ಕೂಗುವ ಮೂಲಕ ಪ್ರತಿಭಟನೆಗೆ ನಿರತರಾದರು.

ಸ್ವಾಗತಿಸಲು ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿದ್ದಾರೆ ಎಂಬ ಮನಸ್ಥಿತಿಯಲ್ಲಿದ್ದ ಸಿದ್ದರಾಮಯ್ಯ ಅವರು ಅವರ ವಾಹನ ಗುಂಪು ಸೇರಿದ ಸ್ಥಳದಲ್ಲಿ ನಿಧಾನವಾಗಿ ನಿಲ್ಲಿಸುವ ಪ್ರಯತ್ನಕ್ಕೆ ಮುಂದಾದರು. ಅಷ್ಟರಲ್ಲಿ ನೆರೆದ ಬಿಜೆಪಿ ಕಾರ್ಯಕರ್ತರು ದಿಢೀರ್ ಪ್ರತಿಭಟನೆಗೆ ಮುಂದಾದರು. ಈ ಬೆಳವಣಿಗೆ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರನ್ನು ಕಸಿವಿಸಿ ಹಾಗೂ ಗೊಂದಲಕ್ಕೆ ದೂಡಿತು.

ತಕ್ಷಣವೇ ಪ್ರತಿಭಟನೆಯಲ್ಲಿ ನಿರತರಾದ ಕಾರ್ಯಕರ್ತರನ್ನು ಚದುರಿಸಿ ಸೂಕ್ತ ಬಂದೋಬಸ್ತ್ ನೀಡುವ ಮೂಲಕ ಸಿದ್ದರಾಮಯ್ಯ ಅವರ ಸುಗಮ ಸಂಚಾರಕ್ಕೆ ಪೊಲೀಸರು ಅನುವು ಮಾಡಿಕೊಟ್ಟರು.

ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ನೆಲ್ಲೀರ ಚಲನ್‌ಕುಮಾರ್ ಮುಂದಾಳತ್ವದಲ್ಲಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ದರ್ಶನಜೋಯಪ್ಪ, ತಾಲೂಕು ಅಧ್ಯಕ್ಷ ಸೋಮೆಯಂಡ ಕವನ್‌ಕಾರ್ಯಪ್ಪ, ಮಂಡಲ ಎಸ್.ಸಿ ಮೋರ್ಚಾ ಅಧ್ಯಕ್ಷ ಶಶಿ, ಕಾರ್ಯದರ್ಶಿ ಜ್ಯೋತಿ, ಒಬಿಸಿ ಘಟಕ ಅಧ್ಯಕ್ಷ ರಾಜೇಶ್ ಕೆ, ತಾಲೂಕು ಮಂಡಲ ಪ್ರಧಾನ ಕಾರ್ಯದರ್ಶಿ ಅಜ್ಜಿಕುಟ್ಟಿರ ಪ್ರವೀಣ್, ಖಜಾಂಜಿ ಚೆಪುö್ಪಡಿರ ಮಾಚಯ್ಯ, ತಿತಿಮತಿ ಶಕ್ತಿ ಕೇಂದ್ರದ ಪ್ರಮುಖ್ ಅನೂಪ್‌ಕುಮಾರ್, ದೇವರಪುರ ಸ್ಥಾನೀಯ ಸಮಿತಿ ಅಧ್ಯಕ್ಷ ಮನೆಯಪಂಡ ಮಹೇಶ್, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ (ಮೊದಲ ಪುಟದಿಂದ) ತೋರಿರ ವಿನು, ಪೊನ್ನಂಪೇಟೆ ಶಕ್ತಿ ಕೇಂದ್ರದ ಪ್ರಮುಖ್ ಮೂಕಳೆರ ಮಧುಕುಮಾರ್, ತಾಲೂಕು ಮಾಧ್ಯಮ ವಕ್ತಾರ ಕುಟ್ಟಂಡ ಅಜಿತ್ ಕರುಂಬಯ್ಯ ಹಾಗೂ ವಿವಿಧ ಮೋರ್ಚಾದ ಕಾರ್ಯಕರ್ತರು ಇದ್ದರು.

ಮಡಿಕೇರಿಯಲ್ಲಿ

ಕರ್ತೋಜಿ, ರಾಮಕೊಲ್ಲಿ, ಕೊಯನಾಡು ಭಾಗಗಳಲ್ಲಿ ಮಳೆಹಾನಿ ಪ್ರದೇಶಗಳಿಗೆ ಸಿದ್ದರಾಮಯ್ಯ ಭೇಟಿ ನೀಡಿ ಅಲ್ಲಿಂದ ಹಿಂತಿರುಗುತ್ತಿದ್ದAತೆ ಮಡಿಕೇರಿ ಜಿ.ಟಿ. ವೃತ್ತದಲ್ಲಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ಸಿದ್ದರಾಮಯ್ಯ ಅವರ ವಿರುದ್ಧ ಪ್ರತಿಭಟನೆ ಆರಂಭಿಸಿದ್ದವು. ಕೊಡಗಿನಲ್ಲಿ ಯಾರಿಗೂ ಬೇಡವಾದ ಟಿಪ್ಪು ಜಯಂತಿ ಆಚರಣೆ ಮೂಲಕ ಕೊಡಗಿನ ಶಾಂತಿ ಸುವ್ಯವಸ್ಥೆಯನ್ನು ನಾಶ ಮಾಡಿದ ಸಿದ್ದರಾಮಯ್ಯ ಹಿಂದೂ ವಿರೋಧಿಯಾಗಿದ್ದು, ಅವರು ಕೊಡಗಿನಿಂದ ಕೂಡಲೇ ಹಿಂತಿರುಗ ಬೇಕೆಂದು ಆಗ್ರಹಿಸಿ ಸಿದ್ದರಾಮಯ್ಯ ಅವರ ಬ್ಯಾನರ್ ಹರಿದು ಧಿಕ್ಕಾರ ಕೂಗಲಾರಂಭಿಸಿದ್ದರು. ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮಾಜಿ ಶಾಸಕಿ ವೀಣಾ ಅಚ್ಚಯ್ಯ ಅವರ ವಿರುದ್ಧವೂ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಮಡಿಕೇರಿ ನಗರವನ್ನು ಪ್ರವೇಶಿಸುತ್ತಿದ್ದಂತೆ ಜಿಲ್ಲಾಧಿಕಾರಿ ತಡೆಗೋಡೆ ಸಮೀಪ ಕಾಂಗ್ರೆಸ್ ಕಾರ್ಯಕರ್ತರು ಸಿದ್ದರಾಮಯ್ಯ ಅವರನ್ನು ಬರಮಾಡಿಕೊಳ್ಳಲು ಸಿದ್ಧರಾಗಿ ನಿಂತಿದ್ದರು. ಸಿದ್ದರಾಮಯ್ಯ ಅವರು ಬಂದ ವೇಳೆ ಅವರನ್ನು ಸ್ವಾಗತಿಸಿದ ಕಾರ್ಯಕರ್ತರು ಮೆರವಣಿಗೆ ಮೂಲಕ ಜಿ.ಟಿ. ವೃತ್ತದತ್ತ ಬಂದರು. ಈ ಸಂದರ್ಭ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಸಿದ್ದರಾಮಯ್ಯಗೆ ಧಿಕ್ಕಾರ ಕೂಗಿದರೆ ಕಾಂಗ್ರೆಸ್ ಕಾರ್ಯಕರ್ತರು ಸಿದ್ದ ರಾಮಯ್ಯಗೆ ಜೈಕಾರ ಮೊಳಗಿಸಿದರು.

ಈ ವೇಳೆ ಬಿಜೆಪಿ, ಹಿಂದೂ ಸಂಘಟನೆಗಳ ಕಾರ್ಯಕರ್ತರು ಕಾಂಗ್ರೆಸ್ ಕಾರ್ಯಕರ್ತರತ್ತ; ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರತ್ತ ನುಗ್ಗುವ ಪ್ರಯತ್ನಕ್ಕೆ ಮುಂದಾದರಾದರೂ ಸ್ಥಳದಲ್ಲಿದ್ದ ಪೊಲೀಸರು ಇದಕ್ಕೆ ಅವಕಾಶ ನೀಡಲಿಲ್ಲ. ಪೊಲೀಸರು ಹಾಗೂ ಕಾರ್ಯಕರ್ತರು, ಪ್ರತಿಭಟನಾಕಾರರ ನಡುವೆ ತಳ್ಳಾಟ ನಡೆಯಿತು. ಈ ಬೆಳವಣಿಗೆಗಳ ನಡುವೆ ಬಿಗಿ ಬಂದೋ ಬಸ್ತ್ನೊಂದಿಗೆ ಸಿದ್ದರಾಮಯ್ಯ ಅವರನ್ನು ಅವರ ಕಾರಿನಲ್ಲಿ ಅಲ್ಲಿಂದ ಕಳುಹಿಸಲಾಯಿತು.

ಈ ವೇಳೆ ಸಿದ್ದರಾಮಯ್ಯ ಅವರ ಕಾರಿನತ್ತ ಪ್ರತಿಭಟನಾಕಾರರು ಮೊಟ್ಟೆ ಎಸೆದರು. ನಂತರ ಜಿ.ಟಿ. ವೃತ್ತದ ಬಳಿ ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರು ಪ್ರತಿಭಟನೆ ಮುಂದುವರಿಸಿದರೆ, ಅವರ ಎದುರು ಭಾಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ವಿರುದ್ಧ ಪ್ರತಿಭಟನೆ ಆರಂಭಿಸಿದರು. ಸ್ಥಳಕ್ಕೆ ಬಂದ ಎಸ್ಪಿ ಎಂ.ಎ. ಅಯ್ಯಪ್ಪ ಪ್ರತಿಭಟನಾಕಾರರ ಮನವೊಲಿಸಿದ ಬಳಿಕ ಎರಡೂ ಕಡೆಯವರು ಪ್ರತಿಭಟನಾ ಸ್ಥಳದಿಂದ ತೆರಳಿದರು.

ಬಿಜೆಪಿ ವಕ್ತಾರ ಮಹೇಶ್ ಜೈನಿ, ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಉಪಾಧ್ಯಕ್ಷೆ ಸವಿತಾ ರಾಕೇಶ್, ಬಿಜೆಪಿ ನಗರಸಭಾ ಸದಸ್ಯರುಗಳು, ಹಿಂದೂಪರ ಸಂಘಟನೆಯ ವಿನಯ್, ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಮಾಜಿ ಅಧ್ಯಕ್ಷ ರವಿ ಕುಶಾಲಪ್ಪ ಮತ್ತಿತರರು ಪಾಲ್ಗೊಂಡಿದ್ದರು.

ಕಾAಗ್ರೆಸ್ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಎ.ಎಸ್. ಪೊನ್ನಣ್ಣ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್, ಮಡಿಕೇರಿ ಬ್ಲಾಕ್ ಅಧ್ಯಕ್ಷ ಕೊಟ್ಟಮುಡಿ ಹಂಸ ಮತ್ತಿತರರು ಇದ್ದರು.

ಗುಡ್ಡೆಹೊಸೂರಿನಲ್ಲಿ ವಿಕೋಪ ಸ್ಥಿತಿ

ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ

ಕುಶಾಲನಗರ: ಕೊಡಗು ಜಿಲ್ಲೆಯ ಪ್ರಕೃತಿ ವಿಕೋಪ ಪ್ರದೇಶಗಳಿಗೆ ಭೇಟಿ ನೀಡಿ ಮಡಿಕೇರಿಯಿಂದ ಕುಶಾಲನಗರ ಮಾರ್ಗವಾಗಿ ತೆರಳುತ್ತಿದ್ದ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಾಹನವನ್ನು ಗುಡ್ಡೆಹೊಸೂರಿನಲ್ಲಿ ಬಿಜೆಪಿ ಮತ್ತು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಸಾವರ್ಕರ್ ಭಾವಚಿತ್ರದೊಂದಿಗೆ, ಕಪ್ಪು ಬಾವುಟ ಸಹಿತ ತಡೆದು ಕಾರಿಗೆ ಮೊಟ್ಟೆ ಎಸೆಯುವ ಮೂಲಕ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿಚಾರ್ಜ್ ಮಾಡುವ ಪರಿಸ್ಥಿತಿ ಉಂಟಾಯಿತು. ಘಟನೆಗೆ ಸಂಬAಧಿಸಿ ದಂತೆ ಇಬ್ಬರು ಜನಪ್ರತಿನಿಧಿಗಳು ಮತ್ತು ಬಿಜೆಪಿ ಮುಖಂಡರು ಸೇರಿದಂತೆ ಹತ್ತು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಂಜೆ ೫ ಗಂಟೆ ವೇಳೆಗೆ ಸಿದ್ದರಾಮಯ್ಯ ಅವರ ಕಾರು ಕುಶಾಲನಗರದ ಕಡೆಗೆ ಬರುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಪ್ರತಿಭಟನಾ ಕಾರರು ರಸ್ತೆಗೆ ಬಂದು ಸಿದ್ದರಾಮಯ್ಯ ವಿರುದ್ಧ ಘೋಷಣೆ ಮುಗಿಲು ಮುಟ್ಟುತ್ತಲೆ ಪೊಲೀಸರಿಗೆ ಗುಂಪನ್ನು ತಹಬದಿಗೆ ತರಲು ಪರದಾಡು ವಂತಾಯಿತು. ಇದೇ ಸಂದರ್ಭ ಕಾರಿಗೆ ಮೊಟ್ಟೆಗಳನ್ನು ಎಸೆದ ಘಟನೆ ನಡೆಯಿತು. ಸ್ಪಲ್ಪ ಕಾಲ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿ ಮಾಜಿ ಮುಖ್ಯಮಂತ್ರಿಗಳ ವಾಹನ ತೆರಳಿದ ಬೆನ್ನಲ್ಲೇ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಹಾಗೂ ಸಾರ್ವಜನಿಕರ ಮೇಲೆ ಲಾಠಿಚಾರ್ಜ್ ಮಾಡಿದ ಬಗ್ಗೆ ವಾಗ್ವಾದ ನಡೆಯಿತು. ಈ ಹಿನ್ನೆಲೆಯಲ್ಲಿ ಕೂಡುಮಂಗಳೂರು ಪಂಚಾಯಿತಿ ಉಪಾಧ್ಯಕ್ಷ ಭಾಸ್ಕರ ನಾಯಕ್, ಸದಸ್ಯ ಮಣಿಕಂಠ, ಗುಡ್ಡೆಹೊಸೂರು ಪಂಚಾಯಿತಿ ಸದಸ್ಯ ಪ್ರವೀಣ್, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಎಂ.ಡಿ ಕೃಷ್ಣಪ್ಪ ಅವರುಗಳನ್ನು ಪೊಲೀಸರು ವಶಕ್ಕೆ ಪಡೆದರು. ಈ ಸಂದರ್ಭ ಪೊಲೀಸರ ವರ್ತನೆ ಖಂಡಿಸಿ ಸೋಮವಾರಪೇಟೆ ತಾಲೂಕು ವಕ್ತಾರ ಕೆ.ಜಿ ಮನು ರಸ್ತೆಗೆ ಅಡ್ಡಲಾಗಿ ಮಲಗಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಯಿತು.

ಪೊಲೀಸ್ ವರಿಷ್ಠಾಧಿಕಾರಿ ಎಂ.ಎ. ಅಯ್ಯಪ್ಪ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದರೂ ಪ್ರತಿಭಟನಾಕಾರರನ್ನು ಹತೋಟಿಗೆ ತರಲಾಗದೇ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಏಕಾಏಕಿ ಲಾಠಿಚಾರ್ಜ್ ಮಾಡಿದ ಕಾರಣ ಸ್ಥಳದಲ್ಲಿದ್ದ ಪತ್ರಕರ್ತರು ಸೇರಿದಂತೆ ಹಲವರು ಗಾಯಗೊಂಡರು.

ಸಿದ್ದರಾಮಯ್ಯ ಅವರ ವಾಹನ ಕುಶಾಲನಗರದ ಕಡೆಗೆ ತೆರಳಿದ ನಂತರ ಕೆಲವು ಸಮಯ ಗುಡ್ಡಹೊಸೂರಿನಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು. ನೂಕುನುಗ್ಗಲು ನಡುವೆ ಪೊಲೀಸರ ವಾಕಿಟಾಕಿ ಒಂದು ನಾಪತ್ತೆ ಆಗಿ ನಂತರ ರಸ್ತೆಯಲ್ಲಿ ಬಿದ್ದಿದ್ದ ದೃಶ್ಯಗೋಚರಿಸಿತು.

ಶಾಸಕರುಗಳ ಭೇಟಿ

ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದ ಹಿನ್ನೆಲೆ ಯಲ್ಲಿ ರಾತ್ರಿ ವೇಳೆ ಶಾಸಕರುಗಳಾದ ಎಂ.ಪಿ. ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ ಅವರುಗಳು ಕುಶಾಲನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ ಪೊಲೀಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.

ಸೋಮವಾರಪೇಟೆಯಲ್ಲಿ ಕಪ್ಪು ಬಾವುಟ ಪ್ರದರ್ಶನ: ಪೊಲೀಸರೊಂದಿಗೆ ನೂಕಾಟ

ಸೋಮವಾರಪೇಟೆ: ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸೋಮವಾರಪೇಟೆಗೆ ಭೇಟಿ ನೀಡಿ ಕೊಡ್ಲಿಪೇಟೆಯತ್ತ ತೆರಳುತ್ತಿದ್ದ ಸಂದರ್ಭ ಇಲ್ಲಿನ ಜೂನಿಯರ್ ಕಾಲೇಜು ಸಮೀಪ ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.

ನೂರಾರು ಸಂಖ್ಯೆಯಲ್ಲಿದ್ದ ಬಿ.ಜೆ.ಪಿ. ಕಾರ್ಯಕರ್ತರನ್ನು ಪೊಲೀಸರು ಪ್ರಯಾಸಪಟ್ಟು ತಡೆದರು. ಸಿದ್ದರಾಮಯ್ಯ ಅವರು ಆಗಮಿಸುತ್ತಿದ್ದಂತೆ ಕಪ್ಪು ಬಾವುಟ ಪ್ರದರ್ಶಿಸಿದ ಕಾರ್ಯಕರ್ತರು, ವಾಹನದ ಎದುರು ಭಾಗಕ್ಕೆ ನುಗ್ಗಲು ಪ್ರಯತ್ನಿಸಿದರು. ಈ ಸಂದರ್ಭ ಪೊಲೀಸರು ಲಾಠಿಯನ್ನು ಅಡ್ಡ ಹಿಡಿದು ತಡೆಯೊಡ್ಡಿದರು.

ಕಾರಿನಲ್ಲಿ ಕುಳಿತಿದ್ದ ಸಿದ್ದರಾಮಯ್ಯ ಅವರು ಬಿಗು ಮುಖದೊಂದಿಗೆ ಪ್ರತಿಭಟನಾ ಕಾರರನ್ನು ನೋಡಿಕೊಂಡೇ ಮುಂದೆ ಸಾಗಿದರು. ಟಿಪ್ಪು ಜಯಂತಿ ಆಚರಿಸಿ ಅಶಾಂತಿಗೆ ಕಾರಣಕರ್ತರಾದ ಸಿದ್ದರಾಮಯ್ಯಗೆ ಧಿಕ್ಕಾರ ಎಂದು ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರು, ವೀರ ಸಾವರ್ಕರ್ ಅವರ ಭಾವಚಿತ್ರವನ್ನು ಪ್ರದರ್ಶನ ಮಾಡಿದರು.

ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ತಮ್ಮೆಲ್ಲಾ ಶಕ್ತಿ ಉಪಯೋಗಿಸಿದರು. ಈ ಸಂದರ್ಭ ಡಿವೈಎಸ್‌ಪಿಯೋರ್ವರು ಲಾಠಿ ಬೀಸುವಂತೆ ಕರೆಕೊಟ್ಟರೂ ಸ್ಥಳದಲ್ಲಿದ್ದ ಪೊಲೀಸರು ಲಾಠಿ ಚಾರ್ಜ್ ಮಾಡದೇ ಪರಿಸ್ಥಿತಿಯನ್ನು ನಿಭಾಯಿಸಿದರು.

ಈ ನಡುವೆ ಕಾರ್ಯಕರ್ತ ನೋರ್ವನನ್ನು ಪೊಲೀಸರು ತಳ್ಳಿದ ಸಂದರ್ಭ ಕೆಲಕಾಲ ಪೊಲೀಸರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ತಳ್ಳಾಟ ನೂಕಾಟ ನಡೆಯಿತು. ಅಷ್ಟರಲ್ಲಾಗಲೇ ಸಿದ್ದರಾಮಯ್ಯ ಅವರ ಕಾರು ಮುಂದೆ ಸಾಗಿತ್ತು.

ಬಿಜೆಪಿ ಸೋಮವಾರಪೇಟೆ ಮಂಡಲ ಅಧ್ಯಕ್ಷ ಮನುಕುಮಾರ್ ರೈ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ದರ್ಶನ್ ಜೋಯಪ್ಪ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಹೆಚ್.ಕೆ. ಮಾದಪ್ಪ ಸೇರಿದಂತೆ ನೂರಾರು ಕಾರ್ಯ ಕರ್ತರು ಪ್ರತಿಭಟನೆ ಯಲ್ಲಿದ್ದರು.

ಶನಿವಾರಸಂತೆಯಲ್ಲಿ ಘೇರಾವ್

ಸೋಮವಾರಪೇಟೆ : ಸೋಮವಾರಪೇಟೆಗೆ ಭೇಟಿ ನೀಡಿದ ಬಳಿಕ ಕೊಡ್ಲಿಪೇಡೆಗೆ ತೆರಳಿದ ಮಾರ್ಗ ಮಧ್ಯೆ ಶನಿವಾರಸಂತೆಯ ಗುಡುಗಳಲೆ ಜಂಕ್ಷನ್‌ನಲ್ಲಿ ಬಿಜೆಪಿ ಮತ್ತು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರ ಪ್ರತಿಭಟನೆ ಎದುರಾಯಿತು. ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬಿಜೆಪಿ, ಹಿಂದೂ ಪರ ಸಂಘಟನೆಯವರು ಜಮಾವಣೆಗೊಂಡಿದ್ದರು.

ಸಿದ್ದರಾಮಯ್ಯ ಆಗಮಿಸು ತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರು ವಾಹನದ ಬಳಿಗೆ ತೆರಳಲು ಯತ್ನಿಸಿ ಸಿದ್ದರಾಮಯ್ಯ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಮತ್ತೊಂದು ಬದಿಯಿದ್ದ ಕಾಂಗ್ರೆಸ್ ಕಾರ್ಯಕರ್ತರು ಸಿದ್ದರಾಮಯ್ಯ ಪರ ಘೋಷಣೆಗಳನ್ನು ಕೂಗಿದರು. ಈ ಗೊಂದಲಗಳ ನಡುವೆಯೇ ಸಿದ್ದರಾಮಯ್ಯ ಅವರಿದ್ದ ಕಾರು ಮುಂದೆ ಸಾಗಿತು. ನಂತರ ಎದುರು ಬದುರಾಗಿದ್ದ ಉಭಯ ಪಕ್ಷದ ಕಾರ್ಯಕರ್ತರು ಜೋರು ಧ್ವನಿಯಲ್ಲಿ ಪರ-ವಿರೋಧ ಘೋಷಣೆಗಳನ್ನು ಕೂಗುತ್ತನೆ ಇದ್ದರು. ಎರಡು ಕಡೆಯವರನ್ನು ಸಮಾಧಾನ ಪಡಿಸಲು ಹರ ಸಾಹಸಪಟ್ಟರು.

-ಉಜ್ವಲ್ ರಂಜಿತ್, ಹೆಚ್.ಕೆ. ಜಗದೀಶ್, ಎನ್.ಎನ್. ದಿನೇಶ್, ಉಷಾ ಪ್ರೀತಂ, ಚಂದ್ರಮೋಹನ್, ಕುಡೆಕಲ್ ಗಣೇಶ್, ನಾಗರಾಜಶೆಟ್ಟಿ, ವಿಜಯ್ ಹಾನಗಲ್