ಮಡಿಕೇರಿ, ಆ. ೧೯: ಮೈಸೂರಿನ ಎಂಐಸಿಎ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ "ಪೊನ್ನಮ್ಮ ಮೆಮೋರಿಯಲ್ ಕಪ್ ೨೦೨೨" ಅಂತರ ಕಾಲೇಜು ರಾಜ್ಯ ಮಟ್ಟದ ಹಾಕಿ ಟೂರ್ನಮೆಂಟ್‌ನಲ್ಲಿ ಕಾವೇರಿ ಪದವಿ ಕಾಲೇಜು ವೀರಾಜಪೇಟೆ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಎದುರಾಳಿ ತಂಡಗಳನ್ನು ಉತ್ತಮ ಗೋಲ್ ಮೂಲಕ ಹಿಂದಿಕ್ಕಿ ಫೈನಲ್ ಪ್ರವೇಶ ಪಡೆದು ಸೇಂಟ್ ಜೋಸೆಫ್ ಕಾಲೇಜು,ಬೆಂಗಳೂರು ತಂಡದೊಡನೆ ಫೈನಲ್ ಪ್ರವೇಶ ಪಡೆಯಿತು. ಮುತ್ತಪ್ಪ ಎಂ ಕೆ ಮತ್ತು ತಂಡದ ನಾಯಕ ವಿನಿಶ್ ಪೂವಯ್ಯ ಅವರು ದಾಖಲಿಸಿದ ೨ ಗೋಲ್ ಮತ್ತು ತಂಡದ ಆಟಗಾರರ ಆಕ್ರಮಣಕಾರಿ ಆಟದ ಮೂಲಕ ಉತ್ತಮ ಪೈಪೋಟಿ ನೀಡಿ ೫-೨ ಗೋಲ್‌ಗಳ ಅಂತರದಲ್ಲಿ ರನ್ನರ್ ಸ್ಥಾನವನ್ನು ಪಡೆದುಕೊಂಡಿತು. ೭೦೦೦ ನಗದು ಬಹುಮಾನದೊಂದಿಗೆ ತಂಡದ ಕ್ರೀಡಾಪಟು ದಾನಿಷ್ ಪೊನ್ನಣ್ಣ ಫೇರ್ ಪ್ಲೇಯರ್ ಸ್ಥಾನವನ್ನು ಮುಡಿಗೇರಿಸಿಕೊಳ್ಳುವ ಮೂಲಕ ಕಾಲೇಜಿಗೆ ಹೆಸರನ್ನು ತಂದಿದ್ದಾರೆ. ತಂಡದ ಸಾಧನೆಗೆ ಕೋಚ್ ತಮ್ಮಯ್ಯ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಟೂರ್ನಿಯಲ್ಲಿ ಕಾಲೇಜಿನ ವಿನೀಶ್ ಪೂವಯ್ಯ (ನಾಯಕ), ನಂಜಪ್ಪ, ಮುತ್ತಪ್ಪ ಒ.ಏ, ಮುತ್ತಪ್ಪ ಒ.ಅ, ಗಗನ್, ಧಾನಿಶ್ ಪೊನ್ನಣ್ಣ, ನಾಚಪ್ಪ, ನಿಖಿಲ್ (ಗೋಲ್ ಕೀಪರ್) ಭಾಗವಹಿಸಿದ್ದರು.