ಕೂಡಿಗೆ, ಆ. ೧೯: ಕಣಿವೆ ಮತ್ತು ಹುಲುಸೆ ಗ್ರಾಮಸ್ಥರ ಸಹಕಾರ ದೊಂದಿಗೆ ಆರ್.ಕೆ. ನಾಗೇಂದ್ರ ಬಾಬು ಅವರ ಗದ್ದೆಯಲ್ಲಿ ಗ್ರಾಮೀಣ ಕ್ರೀಡಾಕೂಟವಾದ ಕೆಸರುಗದ್ದೆ ಕ್ರೀಡಾ ಕೂಟವು ನಡೆಯಿತು.
ಕ್ರೀಡಾಕೂಟದ ಉದ್ಘಾಟನೆ ಯನ್ನು ಕಣಿವೆಯ ಸಾಹಿತಿ ಭಾರತಧ್ವಜ್ ನೆರವೇರಿಸಿದರು. ನಂತರ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಕ್ರೀಡಾ ಕೂಟಗಳು ನಡೆಯುವುದರಿಂದ ಗ್ರಾಮಸ್ಥರು ಮತ್ತು ಯುವಕರು ಒಂದೆಡೆ ಸೇರುವ ಮೂಲಕ ಗ್ರಾಮದಲ್ಲಿರುವ ವಿವಿಧ ಸಮಸ್ಯೆಗಳ ಪರಿಹಾರ ಬಗ್ಗೆ ಚರ್ಚೆಗಳು ಮತ್ತು ಅಭಿವೃದ್ಧಿ ಪೂರಕವಾದ ಅಂಶಗಳ ವಿಷಯಗಳನ್ನು ಹಂಚಿಕೆ ಮಾಡಿಕೊಳ್ಳಲು ಅವಕಾಶವಾಗುವುದು ಎಂದರು. ಮುಖ್ಯ ಅತಿಥಿಯಾಗಿ ಅಗಮಿಸಿದ ಶ್ರೀ ರಾಮಲಿಂಗೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಎನ್. ಸುರೇಶ್ ಮಾತನಾಡಿ, ಕ್ರೀಡಾಕೂಟದ ಮುಖೇನ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲು ಅನುಕೂಲವಾಗುವುದು. ಅಲ್ಲದೆ ಯುವಕರಿಗೆ ಕ್ರೀಡೆಗೆ ಉತ್ತೇಜನ ನೀಡಲು ಸಹಕಾರಿ ಯಾಗುತ್ತದೆ ಎಂದರು. ಕೆಸರುಗದ್ದೆ ಕ್ರೀಡಾಕೂಟದಲ್ಲಿ ಬಾಲಕರ ಮತ್ತು ಬಾಲಕಿಯರ ಓಟದ ಸ್ಪರ್ಧೆ, ಪುರುಷ ಮತ್ತು ಮಹಿಳೆಯರ ಓಟ, ಚಮಚದಲ್ಲಿ ನಿಂಬೆಹಣ್ಣು ಇಟ್ಟು ನಡೆಯುವುದು, ಹಗ್ಗ ಜಗ್ಗಾಟ, ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆದವು.
ಈ ಸಂದರ್ಭ ದೇವಾಲಯ ಸಮಿತಿಯ ಸದಸ್ಯರಾದ ಮಾದವ, ನವೀನ್, ಮಧುಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರಾದ ಶಿವನಂಜಪ್ಪ, ಲತಾ, ತೇಜಸ್ವಿನಿ ಸೇರಿದಂತೆ ಸುತ್ತಮುತ್ತಲಿನ ನೂರಾರು ಯುವಕರು ಮತ್ತು ಯುವತಿಯರು, ಗ್ರಾಮಸ್ಥರು ಭಾಗವಹಿಸಿದರು.