ಶನಿವಾರಸಂತೆ, ಆ. ೧೮: ಸಮೀಪದ ಕೊಡ್ಲಿಪೇಟೆ ಹೋಬಳಿ ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೀರುಗುಂದ ಗ್ರಾಮದ ಯುವ ಕೃಷಿಕ ಎನ್.ಡಿ. ಆದರ್ಶ (೩೦) ಬುಧವಾರ ಬಳ್ಳಾರಿ ಜಿಲ್ಲೆಯ ತುಂಗಭದ್ರಾ ಜಲಾಶಯದ ನಾಲೆಯಲ್ಲಿ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಮುಳುಗಿ ನೀರುಪಾಲಾದ ಘಟನೆ ನಡೆದಿದೆ.
ಬೆಳೆಗಾರ ಎನ್.ಜೆ. ಧನಂಜಯ್-ರೇಖಾ ದಂಪತಿಯ ಪುತ್ರ ಆದರ್ಶ ಬೈಕ್ನಲ್ಲಿ ಸ್ನೇಹಿತನ ಜೊತೆ ಹಂಪಿ-ಹೊಸಪೇಟೆ ಪ್ರವಾಸಕ್ಕೆ ತೆರಳಿದ್ದು, ಫೋಟೋ ತೆಗೆಸಿಕೊಳ್ಳುವ ಸಂದರ್ಭ ನಾಲೆಗೆ ಬಿದ್ದಿದ್ದಾರೆ ಎನ್ನಲಾಗಿದೆ. ತಂದೆ ಧನಂಜಯ್ ಕುರುಡುಗೋಡು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಪ್ರಕರಣ ದಾಖಲಾಗಿದೆ.
ಇಂಜಿನಿಯರ್ ಪದವೀಧರರಾಗಿದ್ದ ಆದರ್ಶ ಅವಿವಾಹಿತರಾಗಿದ್ದು, ಕೃಷಿಯಲ್ಲಿ ಆಸಕ್ತಿ ಹೊಂದಿ ಗ್ರಾಮದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಗುರುವಾರ ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹ ಪತ್ತೆ ಹಚ್ಚಿದ್ದು, ಮೃತದೇಹವನ್ನು ಸ್ವಗ್ರಾಮಕ್ಕೆ ತರಲಾಗುವುದು. ಅಂತ್ಯಸAಸ್ಕಾರ ಶುಕ್ರವಾರ ನೆರವೇರಲಿದೆ ಎಂದು ಸಂಬAಧಿ ತಿಳಿಸಿದ್ದಾರೆ.