ಮಡಿಕೇರಿ, ಆ. ೧೮: ಇತ್ತೀಚಿನ ವರ್ಷಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ಉಂಟಾಗುತ್ತಿರುವ ಪ್ರವಾಹ ಹಾಗೂ ಭೂಕುಸಿತ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳುವ ಸಂಬAಧ ಸದನದಲ್ಲಿ ಪ್ರಸ್ತಾಪಿಸಿ ಸರಕಾರದ ಗಮನ ಸೆಳೆಯುವುದಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಜಿಲ್ಲೆಗೆ ಭೇಟಿ ನೀಡಿದ್ದ ಅವರು ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ನಗರದ ಸುದರ್ಶನ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯ ಸರಕಾರ ಕೊಡಗಿನಲ್ಲಿ ಮೂರ್ನಾಲ್ಕು ವರ್ಷಗಳಲ್ಲಿ ಸಂಭವಿಸಿರುವ ಮಳೆಹಾನಿಗೆ ಇದುವರೆಗೂ ಪರಿಹಾರ ನೀಡಿಲ್ಲ ಎಂಬ ಬಗ್ಗೆ ಸಂತ್ರಸ್ತರೆ ತನ್ನ ಬಳಿ ಹೇಳಿಕೊಂಡಿದ್ದಾರೆ. ಕೊಯನಾಡಿನಲ್ಲಿ ಮಣ್ಣು ಕುಸಿದು ಶಾಲಾ ಕಟ್ಟಡವೊಂದಕ್ಕೆ ಹಾನಿಯಾಗಿದೆ. ಕೆಲದಿನಗಳ ಹಿಂದೆ ಅದೇ ದಾರಿಯಲ್ಲಿ ತೆರಳಿದ ಮುಖ್ಯಮಂತ್ರಿ ಆ ಶಾಲೆಗೆ ಭೇಟಿ ನೀಡಿಲ್ಲ. ಪಯಸ್ವಿನಿ ನದಿಯಲ್ಲಿ ನಿರ್ಮಿಸಿರುವ ಕಿಂಡಿ ಅಣೆಕಟ್ಟನ್ನು ಅಲ್ಲಿನ ಸ್ಥಳೀಯರ ಬೇಡಿಕೆಗೆ ವಿರುದ್ಧವಾಗಿ ಕಟ್ಟಲಾಗಿದೆ. ಇದರಿಂದಾಗಿ ಪ್ರವಾಹ ಸಮಸ್ಯೆ ಆ ಭಾಗದಲ್ಲಿ ಹೆಚ್ಚಾಗಿದೆ. ರಾಮಕೊಲ್ಲಿ ಗ್ರಾಮದಲ್ಲಿ ನಿರ್ಮಿಸಲಾಗಿರುವ ಸೇತುವೆಯೂ ಕಳಪೆ ಗುಣಮಟ್ಟದ್ದಾಗಿದೆ ಎಂದು ಸಿದ್ದರಾಮಯ್ಯ ದೂರಿದರು.

ಕೊಡಗಿನ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಹಿಡಿಯುವ ಬದಲು ಸರಕಾರ ತೇಪೆ ಹಾಕುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು. ಕರ್ನಾಟಕದಲ್ಲಿ ೫ ಲಕ್ಷದ ೨೩ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಳೆಯಿಂದ ಬೆಳೆ ನಷ್ಟವಾಗಿದೆ. ಆದರೆ ಇದುವರೆಗೂ ಸರ್ವೆ ನಡೆಸಿ ಪರಿಹಾರ ನೀಡುವ ಕೆಲಸವನ್ನು ಸರಕಾರ ಮಾಡಿಲ್ಲ. ಸರಕಾರಕ್ಕೆ ಮಳೆ ಹಾನಿಯ ಬಗ್ಗೆ ಯಾವುದೇ ಮಾಹಿತಿ ಇಲ್ಲ. ರಾಜ್ಯದಲ್ಲಿ ಸರಕಾರ ಸತ್ತು ಹೋಗಿದೆ.

(ಮೊದಲ ಪುಟದಿಂದ) ಮುಖ್ಯಮಂತ್ರಿ ಅಸಮರ್ಥರಾಗಿದ್ದಾರೆ ಎಂದು ಸಿದ್ದರಾಮಯ್ಯ ನುಡಿದರು.

ಗೋಷ್ಠಿಯಲ್ಲಿ ಮಾಜಿ ಸಚಿವರುಗಳಾದ ಯಂ.ಸಿ. ನಾಣಯ್ಯ, ಬಿ.ಎ. ಜೀವಿಜಯ, ಮಾಜಿ ಶಾಸಕಿ ವೀಣಾ ಅಚ್ಚಯ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಎ.ಎಸ್. ಪೊನ್ನಣ್ಣ, ಕಾಂಗ್ರೆಸ್ ಪ್ರಮುಖ ಚಂದ್ರಮೌಳಿ ಉಪಸ್ಥಿತರಿದ್ದರು.