ಸೋಮವಾರಪೇಟೆ, ಆ.೧೯: ಸಮಾರಂಭಗಳಲ್ಲಿ ಸದಾ ತೊಡಗಿಸಿಕೊಂಡು ಜಂಜಾಟದಲ್ಲೇ ದಿನ ಕಳೆಯುವ ಛಾಯಾಚಿತ್ರಗಾರರು ಕೆಲಸದ ಒತ್ತಡ ಮರೆತು ಸಮ್ಮಿಲನ ಕಾರ್ಯಕ್ರಮದಲ್ಲಿ ಬೆರೆತು ಸಂಭ್ರಮಿಸಿದರು.
ಕೊಡಗು ಜಿಲ್ಲಾ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಸೋಮವಾರಪೇಟೆಯ ಪುಷ್ಪಗಿರಿ ಛಾಯಾಗ್ರಾಹಕರ ಸಂಘದ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಜಾನಕಿ ಸಭಾಂಗಣದಲ್ಲಿ ಆಯೋಜಿಸಿದ್ದ ಹಿರಿಯ ಛಾಯಾಗ್ರಾಹಕ ಎಸ್.ಎನ್. ನಾಣಿ ಅವರ ಸ್ಮರಣಾರ್ಥ, ಛಾಯಾಚಿತ್ರಗಾರರ ಸಮ್ಮಿಲನ ಕಾರ್ಯಕ್ರಮ ಸಂಭ್ರಮ ಸಡಗರದಿಂದ ನಡೆಯಿತು.
ಕಾರ್ಯಕ್ರಮದಲ್ಲಿ ಹಿರಿಯ ಛಾಯಾಗ್ರಾಹಕ ದಿ. ನಾಣಿ ಅವರ ಸ್ಮರಣಾರ್ಥ ಉತ್ತಮ ಛಾಯಾಚಿತ್ರ ಗಾರರು, ವೀಡಿಯೋಗ್ರಾಫರ್‌ಗಳಿಗೆ ಪ್ರಶಸ್ತಿ ವಿತರಿಸಿ, ಸನ್ಮಾನಿಸಲಾಯಿತು. ಇದೇ ಸಂದರ್ಭ ಸಂಘದ ಸದಸ್ಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
ಕೊಡಗಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಛಾಯಾಚಿತ್ರಗಾರರು ನೃತ್ಯ ಸೇರಿದಂತೆ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭ್ರಮ ಪಟ್ಟರು. ಸಮಾರಂಭದಲ್ಲಿ ಛಾಯಾಚಿತ್ರ, ವೀಡಿಯೋಗ್ರಫಿಗೆ ಸಂಬAಧಿಸಿದAತೆ ಮಾಹಿತಿ, ತರಬೇತಿ ಕಾರ್ಯಾಗಾರವೂ ನಡೆಯಿತು. ವಿನೂತನ ಮಾದರಿಯ ಕ್ಯಾಮೆರಾಗಳ ಪ್ರದರ್ಶನ, ಗುಡ್ಡೆಹೊಸೂರಿನ ಛಾಯಾಚಿತ್ರಗಾರ ವಿಶ್ವಕುಮಾರ್ ಅವರ ಕ್ಯಾಮೆರಾದಲ್ಲಿ ಸೆರೆಯಾದ ವಿಶೇಷ ಚಿತ್ರಗಳ ಪ್ರದರ್ಶನಗಳು ಗಮನ ಸೆಳೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಾಲೂಕು ತಹಶೀಲ್ದಾರ್ ಗೋವಿಂದರಾಜು ಅವರು, ಛಾಯಾಚಿತ್ರಗಾರರ ಸೇವೆ ಸ್ಮರಣೀಯವಾಗಿದೆ. ತಮ್ಮ ಕೆಲಸದಲ್ಲಿ ಶ್ರದ್ಧ ಹಾಗೂ ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡರೆ ಜೀವನದಲ್ಲಿ ಯಶಸ್ಸು ಗಳಿಸಬಹುದು ಎಂದು ಅಭಿಪ್ರಾಯಿಸಿದರು. ಛಾಯಾಚಿತ್ರಗಾರರ ಬದುಕಿನ ಭದ್ರತೆಯ ಬಗ್ಗೆಯೂ ಯೋಚಿಸಬೇಕಾಗಿದೆ. ಸರ್ಕಾರದ ಯೋಜನೆಗಳ ಪ್ರಯೋಜನವನ್ನು ಪಡೆದುಕೊಂಡು ಸಾಮಾಜಿಕವಾಗಿ ಮುನ್ನೆಲೆಗೆ ಬರಬೇಕು ಎಂದು ಕಿವಿಮಾತು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಎಸ್.ಆರ್. ವಸಂತ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೆ.ಪಿ.ಎ. ಸಂಘಟನೆಯ ಮಾಜಿ ಉಪಾಧ್ಯಕ್ಷ ಹೆಚ್.ಎಸ್. ನಾಗೇಶ್, ಪುಷ್ಪಗಿರಿ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಎಸ್. ಸುಬ್ರಮಣಿ, ವನ್ಯಜೀವಿ ಛಾಯಾಗ್ರಾಹಕ ಉಮಾ ಶಂಕರ್, ಜಾನಕಿ ಕನ್ವೆನ್‌ಷನ್ ಮಾಲೀಕ ಬಿ.ಎಸ್. ಸುಂದರ್, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ದೀಪಕ್‌ಕುಮಾರ್, ದಕ್ಷಿಣ ಕೊಡಗು ಸಂಘದ ಅಧ್ಯಕ್ಷ ಕೆ.ಸುರೇಶ್, ಮಡಿಕೇರಿ ತಾಲೂಕು ಅಧ್ಯಕ್ಷ ಪ್ರದೀಪ್, ಕುಶಾಲನಗರ ಸಂಘದ ಉಪಾಧ್ಯಕ್ಷ ಈಶ ಸೇರಿದಂತೆ ಇತರರು ಉಪಸ್ಥಿತರಿದ್ದರು. ಪುಷ್ಪಗಿರಿ ಛಾಯಾಗ್ರಾಹಕರ ಸಂಘದ ಉಪಾಧ್ಯಕ್ಷ ಜನಾರ್ದನ್ ಕಾರ್ಯಕ್ರಮ ನಿರ್ವಹಿಸಿದರು.