ಕರಿಕೆ, ಆ. ೧೭: ದೇಶ ಅಭಿವೃದ್ಧಿಯತ್ತ ದಾಪುಗಾಲಿಡುತ್ತಿದ್ದು ಸ್ವಾತಂತ್ರö್ಯ ಬಂದು ೭೫ ವರ್ಷಗಳು ಕಳೆದರೂ ಜಿಲ್ಲೆಯ ಗಡಿಗ್ರಾಮ ಕರಿಕೆ ಜನತೆ ಮಾತ್ರ ಇನ್ನೂ ಸಮರ್ಪಕ ವೈದ್ಯಕೀಯ ಸೌಲಭ್ಯವಿಲ್ಲದೆ ಪರದಾಡುತ್ತಿದ್ದಾರೆ. ಗ್ರಾಮದಲ್ಲಿ ಒಟ್ಟು ಜನಸಂಖ್ಯೆ ೪,೯೭೫ ಆಗಿದ್ದು, ೧೦೬೭ ಪ.ಜಾತಿ, ೭೬೮ ಪ.ಪಂಗಡ ಸೇರಿದಂತೆ ಉಳಿದಂತೆ ಇತರರು ಇದ್ದಾರೆ.
ಈ ಭಾಗದ ಜನರ ಸಂಕಷ್ಟ ಅರಿತು ಕೆಲವು ವರ್ಷಗಳ ಹಿಂದೆ ಶಾಸಕ ಕೆ.ಜಿ. ಬೋಪಯ್ಯ ಅವರು ಸರಕಾರದ ಮಟ್ಟದಲ್ಲಿ ಗಮನ ಸೆಳೆದು ಗ್ರಾಮಕ್ಕೆ ಒಂದು ಆರೋಗ್ಯ ವಿಸ್ತರಣಾ ಕೇಂದ್ರ ಮಂಜೂರಾಯಿತು. ಜಿಲ್ಲೆಯ ಏಕೈಕ ಆರೋಗ್ಯ ವಿಸ್ತರಣಾ ಕೇಂದ್ರ ಇದಾಗಿದೆ. ನಂತರ ಕೋವಿಡ್ ಸಂದರ್ಭದಲ್ಲಿ ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಆರೋಗ್ಯ ಕೇಂದ್ರದಲ್ಲಿ ಔಷಧಿ, ತುರ್ತು ಚಿಕಿತ್ಸಾ ವಾಹನ ಹಾಗೂ ಇತರೆ ಮೂಲಭೂತ ಸೌಕರ್ಯಗಳ ಕೊರತೆ ಬಗ್ಗೆ ವೈದ್ಯ ಅಧಿಕಾರಿ ಡಾ. ಪುಂಡಲೀಕ ಕೃಷ್ಣ ಲಮಾಣಿಯವರು ಗಮನ ಸೆಳೆದಾಗ ಕೂಡಲೇ ತುರ್ತು ಅಗತ್ಯಕ್ಕೆ ಒಂದು ತುರ್ತು ಚಿಕಿತ್ಸಾ ವಾಹನ, ಔಷಧಿ, ಶೀತಲೀಕರಣ ಯಂತ್ರ ಸೇರಿದಂತೆ ಕೆಲವು ಪರಿಕರಗಳನ್ನು ಒದಗಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಸೂಚಿಸಿದ ಮೇರೆಗೆ ಅವುಗಳನ್ನು ಒದಗಿಸಲಾಯಿತು.
ಸರಕಾರ ಕೋವಿಡ್ ನಿಯಮ ಹಿಂಪಡೆದ ಕೂಡಲೇ ತುರ್ತು ಚಿಕಿತ್ಸಾ ವಾಹನವನ್ನು ಕೂಡ ಇಲಾಖೆ ಹಿಂಪಡೆಯಿತು.
ಈ ಭಾಗವು ಗುಡ್ಡಗಾಡು ಪ್ರದೇಶವಾಗಿದ್ದು ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಕೂಲಿ ಕಾರ್ಮಿಕರು ಹೆಚ್ಚಾಗಿ ವಾಸವಿದ್ದು, ನಿರಂತರವಾಗಿ ಗಾಳಿ ಮಳೆಯಾಗಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದು ಹೆಚ್ಚಿನ ಚಿಕಿತ್ಸೆಗೆ ಕೇರಳ ರಾಜ್ಯದ ಪಾಣತ್ತೂರು, ಕಾಂಙAಗಾಡ್ ಅಥವಾ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಮಂಗಳೂರಿಗೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಾರಣ ಆರೋಗ್ಯ ವಿಸ್ತರಣಾ ಕೇಂದ್ರದಲ್ಲಿ ಓರ್ವ ಎಂಬಿ.ಬಿ.ಎಸ್. ವೈದ್ಯರು, ಇಬ್ಬರು ಶುಶ್ರೂಷಕಿಯರು, ಓರ್ವ ಸಹಾಯಕಿ ಸಮರ್ಪಕವಾಗಿ ಸೇವೆ ಸಲ್ಲಿಸುತ್ತಿದ್ದರೂ ಅಗತ್ಯ ಸಲಕರಣೆಗಳು ಇಲ್ಲದಿರುವುದು. ಶೀತಲೀಕರಣ ಯಂತ್ರವಿದ್ದು, ಯುಪಿಸ್ ವ್ಯವಸ್ಥೆ ಇಲ್ಲದಿರುವುದರಿಂದ ಯಾವುದೇ ಔಷಧಿಯನ್ನು ಸಂಗ್ರಹಿಸಿ ಇಡಲು ಅಸಾಧ್ಯ. ಯಾವುದೇ ಗಾಯಗಳಾದಲ್ಲಿ ಚುಚ್ಚುಮದ್ದು ಸರಬರಾಜು ಇಲ್ಲ. ಅಲ್ಲದೆ ಗಾಯಕ್ಕೆ ಹೊಲಿಗೆ ಹಾಕಲು ಪಾಣತ್ತೂರಿನ ಸರಕಾರಿ ಆಸ್ಪತ್ರೆಯೇ ಗತಿ.
ಅಲ್ಲದೇ ಇತ್ತೀಚೆಗೆ ಇಲಾಖೆಯ ಕೋವಿಡ್ ಚುಚ್ಚುಮದ್ದು, ಔಷಧಿ ದಾಸ್ತಾನು, ಆರೋಗ್ಯ ಮಾಹಿತಿಯನ್ನು ಸಂಪೂರ್ಣ ಮಾಹಿತಿ ಆನ್ಲೈನ್ ಮಾಡಬೇಕಿದ್ದು ಇದಕ್ಕೆ ಗಣಕಯಂತ್ರ, ಮುದ್ರಣ ಯಂತ್ರ ಸರಬರಾಜು ಮಾಡಿದ್ದು ವಿದ್ಯುತ್ ಸಮಸ್ಯೆ ನಿರಂತರವಾಗಿದ್ದು ಯುಪಿಯಸ್ ವ್ಯವಸ್ಥೆ ಹಾಗೂ ಇಂಟರ್ನೆಟ್ ಸಂಪರ್ಕ ಇಲ್ಲದ ಕಾರಣ ಗಣಕಯಂತ್ರ ದೂಳು ಹಿಡಿಯುತ್ತಿದೆ. ಒಂದು ಔಷಧ ವಿತರಕರ ಹುದ್ದೆ ಖಾಲಿ ಇದ್ದು ಬೇರೆ ಕರ್ತವ್ಯನಿರತ ಶುಶ್ರೂಷಕಿಯೇ ಔಷಧಿ ನೀಡ ಬೇಕಾದ ಪರಿಸ್ಥಿತಿ ಎದುರಾಗಿದೆ.
ಒಟ್ಟಿನಲ್ಲಿ ಸೂಕ್ತ ಕಟ್ಟಡ ನುರಿತ ವೈದ್ಯರಿದ್ದರೂ ಸೂಕ್ತ ಉಪಕರಣಗಳ ಕೊರತೆಯಿಂದಾಗಿ ಗ್ರಾಮದ ಜನತೆ ನೆರೆಯ ರಾಜ್ಯದ ಜಿಲ್ಲೆಯ ಆಸ್ಪತ್ರೆಗಳನ್ನು ಅವಲಂಬಿ ಸುತ್ತಿರುವುದು ಇಂದಿನ ಕಾಲ ಘಟ್ಟದಲ್ಲಿ ದುರಂತವೇ ಸರಿ. ಇದಲ್ಲದೆ ಚಿಕಿತ್ಸೆಗಾಗಿ ಬರುವ ರೋಗಿಗಳು ಬಿಸಿಲು ಮಳೆಯಲ್ಲಿ ಆವರಣದಲ್ಲಿ ನಿಲ್ಲಬೇಕಿದ್ದು, ಕುಳಿತುಕೊಳ್ಳಲು ಆಸನ ವ್ಯವಸ್ಥೆ ಕೂಡ ಇರುವುದಿಲ್ಲ. ಆಜಾದಿ ಕಾ ಅಮೃತ ಮಹೋತ್ಸವ ಆಚರಣೆಯ ಜೊತೆ ಜೊತೆಗೆ ಸರಕಾರ ಗ್ರಾಮದ ಜನತೆಯ ಈ ಎಲ್ಲಾ ಬವಣೆ ನೀಗಿಸುವತ್ತ ಕೂಡ ದಿಟ್ಟ ಹೆಜ್ಜೆ ಇಡಬೇಕೆಂಬುದೇ ಗ್ರಾಮಸ್ಥರ ಆಶಯವಾಗಿದೆ.
- ಸುಧೀರ್ ಹೊದ್ದೆಟ್ಟಿ