ನಾಪೋಕ್ಲು, ಆ. ೧೭: ಸ್ವಾತಂತ್ರö್ಯದ ಅಮೃತ ಮಹೋತ್ಸವದ ಅಂಗವಾಗಿ ಸಮೀಪದ ಬಲ್ಲಮಾವಟಿ ಗ್ರಾಮ ಪಂಚಾಯಿತಿ, ನೇತಾಜಿ ಪ್ರೌಢಶಾಲೆ, ಕಾವೇರಿ ಮಹಿಳಾ ಸಂಘ ಹಾಗೂ ಬಲ್ಲಮಾವಟಿ ಮತ್ತು ನೆಲಜಿ ಗ್ರಾಮಗಳ ಪ್ಲಾಂಟರ್ಸ್ ರಿಕ್ರಿಯೇಷನ್ ಕ್ಲಬ್‌ಗಳ ಸಂಯುಕ್ತ ಆಶ್ರಯದಲ್ಲಿ ಸ್ವಚ್ಛತಾ ಆಂದೋಲನವನ್ನು ಹಮ್ಮಿಕೊಳ್ಳಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಮಣವಟ್ಟೀರ ಕುಶಾಲಪ್ಪ, ನೇತಾಜಿ ವಿದ್ಯಾಸಂಸ್ಥೆಯ ಅಧ್ಯಕ್ಷ ಮನುಮುತ್ತಪ್ಪ, ಪಿಡಿಒ ಪೂಣಚ್ಚ, ಗ್ರಾಮ ಪಂಚಾಯಿತಿ ಸದಸ್ಯರ ನೇತೃತ್ವದಲ್ಲಿ ವಿವಿಧ ಗ್ರಾಮಗಳಲ್ಲಿ ಹಾಗೂ ನಾಪೋಕ್ಲು-ಭಾಗಮಂಡಲ ಮುಖ್ಯ ರಸ್ತೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಪುಲಿಕೋಟು, ಬಲ್ಲಮಾವಟಿ, ಪೇರೂರು, ನೆಲಜಿ, ಪಡಿಯಾಣಿ ಗ್ರಾಮಗಳ ರಸ್ತೆ ಬದಿಯಲ್ಲಿ ಇದ್ದ ಪ್ಲಾಸ್ಟಿಕ್ ಹಾಗೂ ಬಾಟಲಿಗಳನ್ನು ಸಂಗ್ರಹಿಸಲಾಯಿತು. ಗ್ರಾಮಸ್ಥರ ನೆರವಿನೊಂದಿಗೆ ಗ್ರಾಮ ಪಂಚಾಯಿತಿ ಸದಸ್ಯರು ತ್ಯಾಜ್ಯಗಳನ್ನು ಸಂಗ್ರಹಿಸಿದರು. ನೇತಾಜಿ ಪ್ರೌಢಶಾಲಾ ವಿದ್ಯಾರ್ಥಿಗಳೂ ಕೈಜೋಡಿಸಿದರು.