ಮಡಿಕೇರಿ, ಆ. ೧೭: ಭಾಷೆಯನ್ನು ನಿರಂತರವಾಗಿ ಬಳಸುವುದರಿಂದ ಮಾತ್ರ ಆಯಾ ಭಾಷೆಯ ಬೆಳವಣಿಗೆ ಹಾಗೂ ಉಳಿವು ಸಾಧ್ಯ ಎಂದು ಬ್ರಹ್ಮಗಿರಿ ಕೊಡವ ವಾರಪತ್ರಿಕೆಯ ಸಂಪಾದಕ ಉಳ್ಳಿಯಡ ಎಂ.ಪೂವಯ್ಯ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಕೊಡವ ಮಕ್ಕಡ ಕೂಟ ಪ್ರಕಟಿಸಿರುವ ಉಡುವೆರ ರಾಜೇಶ್ ಉತ್ತಪ್ಪ ಬರೆದ ‘ಕೋಲೆಲ್ಲಿಯಾ.?’ (ಕೋಲು ಎಲ್ಲಿ) ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪ್ರಸ್ತುತ ಕಾಲಘಟ್ಟದಲ್ಲಿ ಪುಸ್ತಕಗಳ ಪ್ರಕಟಣೆ ಅತ್ಯಂತ ಕಷ್ಟ ಸಾಧ್ಯ ಎಂಬAತಾಗಿದೆ. ಕೊಡವ ಪುಸ್ತಕ ಕ್ಷೇತ್ರ ಕೂಡ ಇದೇ ಪರಿಸ್ಥಿತಿ ಎದುರಿಸುತ್ತಿದ್ದು, ಲಾಭದ ನಿರೀಕ್ಷೆ ಇಲ್ಲದೆ ಪುಸ್ತಕ ಪ್ರಕಟಿಸಬೇಕಾಗಿದೆ. ೧೯೦೦ರ ಈಚೆಗೆ ಕೊಡವ ಸಾಹಿತ್ಯ ಚಿಗುರೊಡೆಯಿತು. ನಂತರ ದಿನಗಳಲ್ಲಿ ಕೊಡವರಲ್ಲಿ ಸಾಹಿತ್ಯಾಭಿಮಾನ ಮೂಡಿದ ಹಿನ್ನೆಲೆ ಕೆಲವಾರು ಪುಸ್ತಕಗಳು ಪ್ರಕಟಗೊಂಡವು. ಆದರೆ, ಇಂದು ಭಾಷೆಯ ಪ್ರಾಮುಖ್ಯತೆ ಜನಾಂಗ ಮರೆಯುತ್ತಿದೆ. ಇದರಿಂದ ಸಂಸ್ಕೃತಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಭಾಷೆಯ ಶುದ್ಧತೆಯನ್ನು ಹಾಳು ಮಾಡಲಾಗುತ್ತಿದ್ದು, ಸಾಹಿತ್ಯದ ಮೌಲ್ಯ ಕ್ಷೀಣಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಕೊಡವ ಮಕ್ಕಡ ಕೂಟ ೫೮ ಪುಸ್ತಕಗಳನ್ನು ಯಾವುದೇ ಲಾಭದ ನಿರೀಕ್ಷೆ ಇಲ್ಲದೆ ಹೊರತಂದು ಕೊಡವ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ರಾಜೇಶ್ ಉತ್ತಪ್ಪ ಸಾಹಿತ್ಯ ಕ್ಷೇತ್ರದಲ್ಲಿ ಪ್ರತಿಭಾನ್ವಿತನಾಗಿ ಚಾಪು ಮೂಡಿಸಲಿದ್ದಾರೆ ಎಂದು ಭವಿಷ್ಯ ನುಡಿದರು.
ಸಾಹಿತಿ, ಪತ್ರಕರ್ತೆ ಉಳ್ಳಿಯಡ ಡಾಟಿ ಪೂವಯ್ಯ ಮಾತನಾಡಿ, ಪುಸ್ತಕಗಳಲ್ಲಿ ಮೌಲ್ಯವಿದ್ದರೆ ಜನರನ್ನು ತಲುಪೇ ತಲುಪುತ್ತವೆ. ಇದಕ್ಕೆ ‘ಪಟ್ಟೋಳೆ ಪಳಮೆ’ ಸೇರಿದಂತೆ ಅನೇಕ ಪುಸ್ತಕಗಳು ಸಾಕ್ಷಿ ಇವೆ. ಸ್ವಹಿತಾಸಕ್ತಿಗೆ ಯಾರು ಸಾಹಿತ್ಯ ರಚನೆ ಮಾಡಬಾರದು. ಅದು ಆತ್ಮತೃಪ್ತಿ ತರಬೇಕು. ‘ಕೋಲೆಲ್ಲಿಯಾ’ ಪುಸ್ತಕ ಉತ್ತಮ ಅಭಿರುಚಿಯುಳ್ಳ ಪುಸ್ತಕವಾಗಿದೆ. ಕೊಡಗಿನ ಹಲವು ವಿಚಾರಗಳು ದಾಖಲೆಯಾಗಿ ಉಳಿದಿಲ್ಲ. ಕೊಡಗಿನ ಸ್ವಾತಂತ್ರö್ಯ ಹೋರಾಟಗಾರರನ್ನು ಸರಕಾರ ಮರೆತಿದೆ. ಇದಕ್ಕೆ ದಾಖಲೆಗಳ ಕೊರತೆಯೂ ಕಾರಣವಾಗಿದೆ ಎಂದು ಹೇಳಿದರು.
ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಮಾತನಾಡಿ. ಈಗಾಗಲೇ ೫೭ ಪುಸ್ತಕಗಳನ್ನು ಕೂಟ ಪ್ರಕಟಿಸಿದೆ. ಇದು ೫೮ನೇ ಪುಸ್ತಕವಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಪುಸ್ತಕ ಹೊರತರುವ ಇರಾದೆ ಇದೆ. ಜೊತೆಗೆ ಸಾಮಾಜಿಕ ಚಟುವಟಿಕೆಯಲ್ಲಿ ಸಂಘಟನೆ ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದರು. ಗೋಷ್ಠಿಯಲ್ಲಿ ಲೇಖಕ ಉಡುವೆರ ರಾಜೇಶ್, ಸಮಾಜ ಸೇವಕರಾದ ಚೆರುಮಾಡಂಡ ಸತೀಶ್ ಸೋಮಣ್ಣ, ಮುಕ್ಕಾಟಿರ ಅಂಜು ಸುಬ್ರಮಣಿ ಇದ್ದರು.