ಮಡಿಕೇರಿ, ಆ. ೧೭: ಇತ್ತೀಚೆಗೆ ನಡೆದ ಕಾಮನ್‌ವೆಲ್ತ್ ಕ್ರೀಡಾ ಕೂಟದಲ್ಲಿ ಬ್ಯಾಡ್ಮಿಂಟನ್‌ನಲ್ಲಿ ಬೆಳ್ಳಿ ಪದಕ ವಿಜೇತರಾದ ಕ್ರೀಡಾಪಟು ಕರ್ನಾಟಕದ ಆಟಗಾರ್ತಿ ಕೊಡಗಿನವರಾದ ಅಶ್ವಿನಿ ಪೊನ್ನಪ್ಪ ಅವರಿಗೆ ರಾಜ್ಯ ಸರಕಾರದಿಂದ ರೂ. ೧೫ ಲಕ್ಷ ಪ್ರೋತ್ಸಾಹಧನ ವಿತರಿಸಲಾಗಿದೆ.
ನಿನ್ನೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕ್ರೀಡಾ ಸಚಿವ ಡಾ. ನಾರಾಯಣಗೌಡ ಅವರುಗಳು ರಾಜ್ಯದ ಸಾಧಕ ಕ್ರೀಡಾ ಪಟುಗಳಿಗೆ ಚೆಕ್ ವಿತರಿಸಿದ್ದು, ಅಶ್ವಿನಿಗೆ ಬೆಳ್ಳಿ ಪದಕಕ್ಕಾಗಿ ರೂ. ೧೫ ಲಕ್ಷ ನೀಡಲಾಗಿದೆ.
ಅಶ್ವಿನಿ ಪೊನ್ನಪ್ಪ ಅವರು ಇದೀಗ ತಾ. ೨೨ ರಿಂದ ಜಪಾನ್‌ನ ಟೋಕಿಯೋದಲ್ಲಿ ನಡೆಯಲಿರುವ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್‌ನಲ್ಲಿ ಪಾಲ್ಗೊಳ್ಳುತ್ತಿದ್ದು,
(ಮೊದಲ ಪುಟದಿಂದ) ತಾ. ೧೮ ರಂದು (ಇಂದು) ಟೋಕಿಯೋಗೆ ತೆರಳುತ್ತಿದ್ದಾರೆ. ಈ ಕಾರಣದಿಂದಾಗಿ ಅವರು ನಿನ್ನೆ ನಡೆದ ಸಮಾರಂಭದಲ್ಲಿ ಗೈರು ಹಾಜರಾಗಿದ್ದು, ಸಂಬAಧಿ ಪಟ್ಟಡ ಕೃಪಾ ತಮ್ಮಯ್ಯ ಅವರು ಅಶ್ವಿನಿ ಪರವಾಗಿ ಚೆಕ್ ಸ್ವೀಕರಿಸಿದರು.
ವಿಶ್ವ ಬ್ಯಾಡ್ಮಿಂಟನ್ ಮತ್ತೊಂದು ಪ್ರತಿಷ್ಠಿತ ಕ್ರೀಡಾಕೂಟವಾಗಿದ್ದು, ಅಶ್ವಿನಿ ತಮ್ಮ ಜೋಡಿ ಸಿಕ್ಕಿರೆಡ್ಡಿ ಅವರೊಂದಿಗೆ ಡಬಲ್ಸ್ನಲ್ಲಿ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ದೇಶದ ಎಲ್ಲಾ ಪ್ರಮುಖ ಬ್ಯಾಡ್ಮಿಂಟನ್ ಆಟಗಾರರು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ.