ಮಡಿಕೇರಿ, ಆ. ೧೬; ಭೂಮಿ ಮೇಲೆ ಇರುವ ಪ್ರತಿಯೊಂದು ಜೀವ ಸಂಕುಲ, ಸಸ್ಯ ಪ್ರಬೇಧಗಳನ್ನು ಸಂರಕ್ಷಣೆ ಮಾಡುವ ಮಹತ್ತರ ಜವಾಬ್ದಾರಿ ಇರುವ ಜೀವ ವೈವಿಧ್ಯ ಮಂಡಳಿ ಮೂಲಕ ಅಳಿವಿನಂಚಿನಲ್ಲಿರುವ ಜೀವ ಹಾಗೂ ಸಸ್ಯ ಸಂಕುಲಗಳನ್ನು ಸ್ಥಳೀಯ ಸಂಸ್ಥೆಗಳ ಮೂಲಕ ಗುರುತಿಸಿ ಅವುಗಳನ್ನು ದಾಖಲೀಕರಣ ಮಾಡುವ ಯೋಜನೆ ಬಗ್ಗೆ ಚಿಂತನೆ ಹರಿಸಲಾಗಿದೆ ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿಕಾಳಪ್ಪ ಹೇಳಿದರು.

ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಪತ್ರಿಕಾಭವನದಲ್ಲಿ ಏರ್ಪಡಿಸಲಾಗಿದ್ದ ಮಾತುಕತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ೧೯೯೨ರಲ್ಲಿ ಬ್ರೆಝಿಲ್‌ನಲ್ಲಿ ಮೊದಲ ಜೀವವೈವಿಧ್ಯ ಸಮಾವೇಶ ನಡೆದಿದ್ದು, ಭಾರತ ಕೂಡ ಸಹಿ ಮಾಡಿತ್ತು. ೨೦೦೨ರಲ್ಲಿ ಭಾರತದಲ್ಲಿ ಅಧಿನಿಯಮ ಹೊರಡಿಸಲಾಯಿತು. ೨೦೦೩ರಲ್ಲಿ ಕಾರ್ಯರೂಪಕ್ಕೆ ಬಂದಿದ್ದು, ೨೦೦೫ರಲ್ಲಿ ಎಲ್ಲ ರಾಜ್ಯಗಳಲ್ಲಿಯೂ ಜಾರಿಗೆ ಬಂದಿತು. ಒಂಭತ್ತು ಮಂದಿಯನ್ನೊಳಗೊAಡ ಮಂಡಳಿಯ ಕಾರ್ಯಕಾರಿ ಸಮಿತಿಯಲ್ಲಿ ಎಪಿಸಿಸಿಎಫ್ ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ. ಐಎಎಸ್, ಐಎಫ್‌ಎಸ್ ಅಧಿಕಾರಿಗಳು ವಿಷಯ ತಜ್ಞರು ಹಾಗೂ ಸದಸ್ಯರುಗಳಾಗಿರುತ್ತಾರೆ. ಕೊಡಗು ಜಿಲ್ಲೆಯಿಂದ ಅರಣ್ಯ ಮಹಾ ವಿದ್ಯಾಲಯದ ಡೀನ್ ಸಿ.ಜೆ. ಕುಶಾಲಪ್ಪ ಅವರೂ ಕೂಡ ಇದ್ದರು ಎಂದು ಮಾಹಿತಿ ನೀಡಿದರು.

ಸ್ಥಳೀಯ ಸಮಿತಿಗಳಿಗೆ ಅಧಿಕಾರ

ಮಂಡಳಿಯಲ್ಲಿ ಸ್ಥಳೀಯ ಸಮಿತಿಗಳಿಗೂ ಮಹತ್ತರ ಅಧಿಕಾರವಿದೆ. ಜಿಲ್ಲಾ ಪಂಚಾಯ್ತಿ, ನಗರ, ಪುರಸಭೆ, ಗ್ರಾಮ ಪಂಚಾಯ್ತಿಗಳಲ್ಲೂ ಸಮಿತಿಗಳಿದ್ದು ಕೇವಲ ನಾಮಕಾವಸ್ಥೆಗೆ ಮಾತ್ರ ಇವೆ. ಇವುಗಳಿಗೆ ಜೀವ-ಸಸ್ಯ ಸಂಕುಲಗಳ ದಾಖಲೀಕರಣ, ಜೀವಿಗಳ ಆವಾಸ ಸ್ಥಾನಗಳ ರಕ್ಷಣೆ, ಹಳೆಯ ಜೀವನ ಪದ್ಧತಿ, ನಾಟಿ ತಳಿಗಳ ರಕ್ಷಣೆ, ಸೂಕ್ಷಾö್ಮಣು ಜೀವಿಗಳ ರಕ್ಷಣೆ, ಜೈವಿಕ ಸಂಪನ್ಮೂಲಗಳ ಜ್ಞಾನ, ರಕ್ಷಣೆ, ಹೀಗೇ ಮಹತ್ತರ ಜವಾಬ್ದಾರಿಗಳಿವೆ. ಆದರೆ, ಸಮಿತಿಗಳಿಗೆ ಈ ಬಗ್ಗೆ ಅರಿವಿಲ್ಲದಾಗಿದೆ. ಈ ಹಿನ್ನೆಲೆಯಲ್ಲಿ ಆಯಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಲಭ್ಯವಿರುವ ಸೂಕ್ಷö್ಮ ಜೀವ ಹಾಗೂ ಸಸ್ಯ

(ಮೊದಲ ಪುಟದಿಂದ) ಸಂಕುಲಗಳ ಮಾಹಿತಿ ಸಂಗ್ರಹಿಸಿ ಅವುಗಳ ಬಗ್ಗೆ ದಾಖಲೀಕರಣ ಮಾಡಿ ಮಂಡಳಿಗೆ ಮಾಹಿತಿ ಸಲ್ಲಿಸುವಂತೆ ಸೂಚಿಸಲಾಗುವದು. ಈ ರೀತಿ ದಾಖಲೀಕರಣ ಮಾಡಿದರೆ, ಜೀವ ಹಾಗೂ ಸಸ್ಯ ಸಂಕುಲಗಳ ಬಗ್ಗೆ ಸಂಶೋಧನೆ, ಅಧ್ಯಯನ ಮಾಡುವವರು, ಔಷಧಿ ತಯಾರಕರು ಮಂಡಳಿಯ ಅನುಮತಿ ಪಡೆದು ಬಳಸಬೇಕಿದೆ. ಆಯಾ ಕಂಪೆನಿಗಳಿಗೆ ಲಭಿಸುವ ಲಾಭಾಂಶದಲ್ಲಿ ೦.೧ ರಿಂದ ೦.೫೦ದಷ್ಟು ಸ್ಥಳೀಯ ಸಮಿತಿಗಳಿಗೆ ನೀಡಬೇಕಿದ್ದು, ಅದನ್ನು ಬಳಸಿಕೊಂಡು ಸಂಕುಲಗಳನ್ನು ಬೆಳೆಸಬಹುದೆಂದು ಕಾಳಪ್ಪ ತಿಳಿಸಿದರು.

ಸಮಿತಿಯವರಿಗೆ ತರಬೇತಿ

ಮಂಡಳಿಯ ಕಾರ್ಯವೈಖರಿ ಬಗ್ಗೆ ಸ್ಥಳೀಯ ಸಮಿತಿಗಳಿಗೆ ಮಾಹಿತಿ ಇಲ್ಲದೇ ಇರುವದರಿಂದ ಪ್ರತಿ ಜಿಲ್ಲೆಯಲ್ಲಿ ಜಿ.ಪಂ., ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಮಂಡಳಿ ವ್ಯಾಪ್ತಿಗೆ ಬರುವ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿ, ಚರ್ಚೆ ಮಾಡಿ ನಂತರದಲ್ಲಿ ಸಮಿತಿ ಸದಸ್ಯರುಗಳಿಗೆ ತರಬೇತಿ ನೀಡುವ ಉದ್ದೇಶ ಹೊಂದಲಾಗಿದೆ. ಮಂಡಳಿಗೆ ಮೂರು ತಿಂಗಳಿಗೊಮ್ಮೆ ಮಾತ್ರ ಸಭೆ ನಡೆಸಲು ಅವಕಾಶವಿದ್ದು, ದೊರಕುವ ಕಾಲಾವಧಿಯಲ್ಲಿ ಸಾಧ್ಯವಾದಷ್ಟು ಸಭೆ ನಡೆಸಿ ಮಂಡಳಿಯ ಕಾರ್ಯಚಟುವಟಿಕೆಗಳ ಉದ್ದೇಶ ಈಡೇರಿಸಲು ಪ್ರಯತ್ನಿಸಲಾಗುವದೆಂದು ಹೇಳಿದರು.

ನಾಟಿ ವೈದ್ಯರ ಸಮಾವೇಶ

ರಾಜ್ಯದಲ್ಲಿ ನಾಟಿ ವೈದ್ಯರು ಸಾಕಷ್ಟು ಮಂದಿ ಇದ್ದಾರೆ. ಅವರುಗಳನ್ನು ಗುರುತಿಸಿ ಅವರುಗಳಿಗೆ ಸರಕಾರದಿಂದ ಅಧಿಕೃತ ದಾಖಲೆ ನೀಡುವ ನಿಟ್ಟಿನಲ್ಲಿ ನಾಟಿ ವೈದ್ಯರ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ. ಅಕ್ಟೋಬರ್ ೭ರಂದು ಹಾಸನದಲ್ಲಿ ಈ ಸಮಾವೇಶ ನಡೆಯಲಿದೆ. ಕೊಡಗು ಜಿಲ್ಲೆಯಲ್ಲಿಯೂ ಸಾಕಷ್ಟು ಮಂದಿ ನಾಟಿ ವೈದ್ಯರುಗಳಿದ್ದು, ಜಿಲ್ಲೆಯಲ್ಲಿಯೂ ಸಮಾವೇಶ ಮಾಡುವ ಮೂಲಕ ದಾಖಲಾತಿ ಮಾಡಲಾಗುವದು. ಇದರಿಂದಾಗಿ ಅಳಿವಿನಂಚಿನಲ್ಲಿರುವ ಗಿಡಮೂಲಿಕೆಗಳನ್ನು ದಾಖಲೀಕರಿಸಿ ಬೆಳೆಸಲು ಅನುಕೂಲವಾಗಲಿದೆ ಎಂದು ಹೇಳಿದರು.

ಎಲ್ಲರಿಗೂ ಜವಾಬ್ದಾರಿ ಇರಬೇಕು

ಪ್ರಾಣಿ-ಪಕ್ಷಿ ಇದ್ದರೆ ಮಾತ್ರ ಭೂಮಿ ಉಳಿಯಲು ಸಾಧ್ಯ, ಕೆಲವೊಂದು ಸಂಕುಲಗಳು ವಿನಾಶದ ಅಂಚಿನಲ್ಲಿದ್ದು, ಇದಕ್ಕೆ ಕಾರಣದ ಬಗ್ಗೆ ಅಧ್ಯಯನ ನಡೆಯಬೇಕಿದೆ. ಪರಿಸರ, ಪ್ರಾಣಿ-ಪಕ್ಷಿ ಸಂಕುಲಗಳ ರಕ್ಷಣೆ ಬಗ್ಗೆ ಎಲ್ಲರೂ ಕಾಳಜಿ ವಹಿಸಬೇಕು. ಎಲ್ಲವನ್ನೂ ಸಮಾಜದ ಮೇಲೆ ಹಾಕುವದಕ್ಕಿಂತ ನಮ್ಮ ಜವಾಬ್ದಾರಿಯನ್ನು ನೋಡಿಕೊಳ್ಳಬೇಕು. ಸ್ವಚ್ಛತೆ ಕಾಪಾಡುವಲ್ಲಿ ಸ್ಥಳೀಯ ಸಂಸ್ಥೆಗಳು ಜವಾಬ್ದಾರಿ ವಹಿಸಿಕೊಳ್ಳಬೇಕು, ಎಲ್ಲರೂ ಭಾಗಿಗಳಾಗಬೇಕೆಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ಲಂಟನ ತೆರವು ಬಗ್ಗೆ ಚಿಂತನೆ

ಅರಣ್ಯ ಪ್ರದೇಶದಲ್ಲಿ ಬೃಹತ್ತಾಗಿ ಲಂಟನ (ಗಾಂಧಿ ಗುಲಾಬಿ) ಬೆಳೆಯುತ್ತಿರುವದರಿಂದ ಸಸ್ಯ ಪ್ರಬೇಧಗಳು ನಾಶವಾಗುತ್ತಿದ್ದು, ಇದರಿಂದಾಗಿ ಜೀವ ಸಂಕುಲಗಳು ಕೂಡ ನಾಶವಾಗುತ್ತಿದ್ದು, ಲಂಟನ ತೆರವಿಗೆ ಅರಣ್ಯ ಇಲಾಖೆ ಮೂಲಕ ಯೋಜನೆ ಕೈಗೊಳ್ಳಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅಧ್ಯಕ್ಷರು, ಇದು ಉತ್ತಮ ವಿಚಾರವಾಗಿದ್ದು, ಈ ಬಗ್ಗೆ ಇಲಾಖೆಯ ಗಮನಕ್ಕೆ ತಂದು ಕ್ರಮ ವಹಿಸುವದಾಗಿ ಹೇಳಿದರು. ಯಾವದೇ ಕಾರಣಕ್ಕೂ ಯಾರೊಂದಿಗೂ ಸಂಘರ್ಷ ಮಾಡಿಕೊಳ್ಳದೆ ಮುತುವರ್ಜಿಯಿಂದ ನಿಭಾಯಿಸಿಕೊಂಡು ಹೋಗುತ್ತೇನೆ. ಪಕ್ಷ ಸಾಮಾನ್ಯ ಕಾರ್ಯಕರ್ತನಾದ ನನಗೆ ಅವಕಾಶ ನೀಡಿದೆ. ಕಾರ್ಯಕರ್ತರಾದವರಿಗೆ ರಾಜಕೀಯದಲ್ಲಿ ಉನ್ನತ ಹುದ್ದೆ ಬೇಕೆಂಬ ಆಸೆ ಎಲ್ಲರಿಗೂ ಇರುತ್ತದೆ. ನನಗೆ ಸಿಕ್ಕಿದ ಹುದ್ದೆ ಬಗ್ಗೆ ಯಾವದೇ ಅಸಮಾಧಾನವಿಲ್ಲವೆಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರೆಸ್‌ಕ್ಲಬ್‌ನ ಸಹ ಕಾರ್ಯದರ್ಶಿ ಪ್ರಜ್ಞಾ ರಾಜೇಂದ್ರ ಪ್ರಾರ್ಥಿಸಿದರೆ, ಸುನಿಲ್ ಪೊನ್ನೆಟ್ಟಿ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ಚಂದ್ರಮೋಹನ್ ಸ್ವಾಗತಿಸಿದರೆ, ಸದಸ್ಯ ಪ್ರಭುದೇವ್ ವಂದಿಸಿದರು.