ಮಡಿಕೇರಿ, ಆ. ೧೫: ಪ್ರಣಾಮ್ ಭಾರತ್ ವತಿಯಿಂದ ಭಾರತೀಯ ವಿದ್ಯಾ ಭವನದಲ್ಲಿ "ಸೈನಿಕರಿಗಾಗಿ ಒಂದು ಸಂಜೆ" ಕಾರ್ಯಕ್ರಮದಲ್ಲಿ ಮಾಜಿ ಸೈನಿಕರ ಸಮಸ್ಯೆಗಳ ಕುರಿತು ವಿಚಾರ ವಿನಿಮಯ ಮತ್ತು ಸಂವಾದ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಣಾಮ್ ಭಾರತ್ ಮಾರ್ಗದರ್ಶಕ ಖ್ಯಾತ ವೈದ್ಯ ಮನೋಹರ್ ಜಿ ಪಾಟ್ಕರ್ ವಹಿಸಿದ್ದರು. ವೀರಾಜಪೇಟೆಯ ತಾಹಶೀಲ್ದಾರರೂ ಮತ್ತು ಭಾರತೀಯ ವಾಯುಸೇನೆಯ ಮಾಜಿ ಅಧಿಕಾರಿ ಪ್ಲೆöÊಟ್ ಲೆಫ್ಟಿನೆಂಟ್ ಅರ್ಚನಾ ಡಿ ಭಟ್ ಮಾತನಾಡಿ, ಮಾಜಿ ಸೈನಿಕರಿಗಿರುವ ಸರಕಾರಿ ಉದ್ಯೋಗಾವಕಾಶಗಳನ್ನು ವಿವರವಾಗಿ ತಿಳಿಸಿದರು.
ಮಾಜಿ ಸೈನಿಕರಿಗೆ ಭೂ ಮಂಜೂರಾತಿ ಮಾಡುವ ಪ್ರಕ್ರಿಯೆಯಲ್ಲಿರುವ ಕಾನೂನು ತೊಡಕುಗಳ ಬಗ್ಗೆ ಮಾತನಾಡಿದ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಘಟಕದ ಅಧ್ಯಕ್ಷ ಕೆ.ಪಿ. ಸೋಮಣ್ಣ ಅವರು ಭೂ ಮಂಜೂರಾತಿಯ ಜ್ವಲಂತ ಸಮಸ್ಯೆಗಳ ಬಗ್ಗೆ ವಿಸ್ತಾರವಾಗಿ ಮಾಹಿತಿಯಿತ್ತರು. ಕಾರ್ಯಕ್ರಮದ ಕೊನೆಗೆ ನಡೆದ ಸಂವಾದದಲ್ಲಿ ಅನೇಕ ಮಾಜಿ ಸೈನಿಕರು ತಮ್ಮ ಗೊಂದಲಗಳ ಕುರಿತಾದ ಪ್ರಶ್ನೆಗಳನ್ನು ಕೇಳಿದರು. ವೀರಾಜಪೇಟೆಯ ಶಾಸಕ ಕೆ.ಜಿ. ಬೋಪಯ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಸಮಸ್ಯೆಗಳನ್ನು ಆಲಿಸಿದರು. ಮೇಜರ್ ಕುಶ್ವಂತ್ ಕೋಳಿಬೈಲು ಕಾರ್ಯಕ್ರಮವನ್ನು ನಿರೂಪಿಸಿದರು.