ಶ್ರೀಮಂಗಲ, ಆ. ೧೫: ಕೊಡಗು ಜಿಲ್ಲೆಯ ಗಡಿಭಾಗ ಕುಟ್ಟದಲ್ಲಿ ಇಲ್ಲಿನ ಕೊಡವ ಸಮಾಜದ ಆಶ್ರಯದಲ್ಲಿ ಎಂಟನೇ ವರ್ಷದ "ಕಕ್ಕಡ ಪದ್‌ನೆಟ್ಟ್" ನಮ್ಮೆಯನ್ನು ವಿಜೃಂಭಣೆಯಿAದ ಆಚರಿಸಲಾಯಿತು. ಆರಂಭದಲ್ಲಿ ಕಕ್ಕಡ -೧೮ ನಮ್ಮೆಯ ವಿಶೇಷ ಖಾದ್ಯ ಸಾಂಪ್ರದಾಯಿಕ ಮದ್ದ್ ಪಾಯಸ ನೀಡಿ ಎಲ್ಲರನ್ನು ಸ್ವಾಗತಿಸಲಾಯಿತು. ಕಕ್ಕಡ- ೧೮ ನಮ್ಮೆಯಲ್ಲಿ ಕೊಡವ ಸಾಂಪ್ರದಾಯಿಕ ಆಹಾರ ಪ್ರದರ್ಶನ, ಹೂಕುಂಡಗಳ ಪ್ರದರ್ಶನ, ವಿಶೇಷ ತಳಿಯ ಹೂವು ಗಿಡ ಪ್ರದರ್ಶನ, ಹೊಸ ಬಗೆಯ ಆಹಾರ ತಯಾರಿಕೆ ಮತ್ತು ವೈವಿಧ್ಯಮಯ ಆಹಾರ - ತಿಂಡಿಗಳ ತಯಾರಿಕೆ ಮತ್ತು ಅಲಂಕಾರಿಕ ವಸ್ತುಗಳ ಪ್ರದರ್ಶನ,ವಿವಿಧ ಆಟೋಮೊಬೈಲ್ ಕಂಪನಿಗಳು ಈಗಷ್ಟೇ ಬಿಡುಗಡೆ ಮಾಡಿದ ವಾಹನ ಪ್ರದರ್ಶನ ಗಮನ ಸೆಳೆಯಿತು.

ಕಕ್ಕಡ- ೧೮ ನಮ್ಮೆಯ ಮುಖ್ಯ ಅತಿಥಿ ಅಂತರಾಷ್ಟ್ರೀಯ ಮಾಜಿ ಅಥ್ಲೆಟ್ ಮನೆಯಪಂಡ ಅಶ್ವಿನಿ ನಾಚಪ್ಪ ಅವರು ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದರು.ಈ ಸಂದರ್ಭ ಮಾತನಾಡಿ ಅವರು ಹಬ್ಬಗಳನ್ನು ಆಚರಿಸುವುದರಿಂದ ಹಬ್ಬಗಳ ಜೀವಂತಿಕೆ ಕಾಪಾಡಲು ಸಾಧ್ಯ. ಅದರಲ್ಲೂ ಹಬ್ಬಗಳನ್ನು ಎಲ್ಲರೂ ಸೇರಿ ನಡೆಸಿದಾಗ ಹೆಚ್ಚು ಸಂತೋಷವಾಗುತ್ತದೆ ಎಂದು ಅಭಿಪ್ರಾಯಪಟ್ಟ ಅವರು ಇದೇ ರೀತಿ ಎಲ್ಲರೂ ಮಕ್ಕಳು, ಹಿರಿಯರು, ಮಹಿಳೆಯರು ಸಾಮೂಹಿಕವಾಗಿ ಹಬ್ಬ ಆಚರಿಸುವಂತಗಬೇಕು ಎಂದು ಅಭಿಪ್ರಾಯ ಪಟ್ಟರು.

ಕುಟ್ಟ ಕೊಡವ ಸಮಾಜದ ಅಧ್ಯಕ್ಷ ಹಾಗೂ ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷರೂ ಆಗಿರುವ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಕುಟ್ಟದಲ್ಲಿ ಕೊಡವ ಸಮಾಜ ಸ್ಥಾಪನೆಯಾಗಿ ೧೦ ವರ್ಷವಾಗಿದ್ದು ೮ನೇ ವರ್ಷದ ಕಕ್ಕಡ- ೧೮ ನಮ್ಮೆಯನ್ನು ಆಚರಿಸಲಾಗುತ್ತಿದೆ. ಕೊಡಗಿನಲ್ಲಿ ಹುಟ್ಟಿದ ಪ್ರತಿಯೊಬ್ಬರು ಕೊಡಗಿನ ಬಗ್ಗೆ ಅಭಿಮಾನ ಇಟ್ಟುಕೊಳ್ಳಬೇಕು. ಎಲ್ಲರೂ ಪ್ರೀತಿ ವಿಶ್ವಾಸದಿಂದ ಬದುಕುವಂತೆ ಆಗಬೇಕು ಎಂದು ಹೇಳಿದರು. ಹಬ್ಬ ಆಚರಣೆಯಿಂದ ಎಲ್ಲರೂ ಸೇರಲು ಅವಕಾಶವಾಗುತ್ತದೆ ಹಬ್ಬದ ಹೆಸರಿನಲ್ಲಿ ಮಹಿಳೆಯರು ಸ್ವತಃ ತಯಾರಿಸಿದ ಅಲಂಕಾರಿಕ ವಸ್ತುಗಳು, ವಿವಿಧ ಬಗೆಯ ಹೂಗಿಡಗಳು, ತಾವೇ ತಯಾರಿಸಿ ಆಹಾರ ಹಾಗೂ ತಿಂಡಿ ಹಂಚಿಕೊಳ್ಳಲು ವೇದಿಕೆಯಾಗಲಿದೆ ಎಂದರು.

ಮುಖ್ಯ ಅತಿಥಿ ಅಥ್ಲೆಟ್ ಅಶ್ವಿನಿ ನಾಚಪ್ಪ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಮತ್ತು ಕೊಡಗಿಗೆ ಕೀರ್ತಿ ತಂದಿದ್ದಾರೆ. ಅವರು ತಮ್ಮಂತೆ ಸಾವಿರಾರು ಅಶ್ವಿನಿ ನಾಚಪ್ಪ ಅವರನ್ನು ತಯಾರಿಸಲು ಶಾಲೆ ಸ್ಥಾಪಿಸಿ ಅಲ್ಲಿ ಪಠ್ಯದೊಂದಿಗೆ ಕ್ರೀಡೆ ಹಾಗೂ ಅಥ್ಲೆಟಿಕ್ಸ್ಗಳಿಗೆ ಪ್ರಾಶಸ್ತ್ಯ ನೀಡುತ್ತಿರುವುದು ಶ್ಲಾಘನೀಯ ಎಂದು ವಿಷ್ಣುಕಾರ್ಯಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭ ಕುಟ್ಟ ಕೊಡವ ಸಮಾಜದ ಉಪಾಧ್ಯಕ್ಷ ಹೊಟ್ಟೆಂಗಡ ರಮೇಶ್, ಕಾರ್ಯದರ್ಶಿ ಕೊಂಗAಡ ಸುರೇಶ್ ದೇವಯ್ಯ,ಉಪ ಕಾರ್ಯದರ್ಶಿ ತೀತಿರ ಮಂದಣ್ಣ, ಖಜಾಂಚಿ ಮಚ್ಚಮಾಡ ಸುಬ್ರಮಣಿ, ನಿರ್ದೇಶಕರುಗಳಾದ ಚೆಪ್ಪುಡಿರ ಪಾರ್ಥ, ಕೇಚಮಾಡ ವಾಸು ಉತ್ತಪ್ಪ, ತೀತಿರ ಕಭಿರ್ ತಿಮಯ್ಯ, ಕೊಟ್ರಮಾಡ ನಲಿನಿ ರಮೇಶ್, ಕೋದಂಡ ಲೀಲಾ ಕಾರ್ಯಪ್ಪ,ಖಾಯಂ ಸದಸ್ಯರಾದ ಮುಕ್ಕಾಟಿರ ರಾಜ ಮಂದಣ್ಣ, ಚಕ್ಕೆರ ರಾಜನ್ ಕಾರ್ಯಪ್ಪ ಹಾಜರಿದ್ದರು.

ಕೇಚಮಾಡ ಬೀನಾ,ತೀತಿರ ಪುಷಿ, ಕೊಟ್ರಮಾಡ ನಳಿನಿ ಅವರ ತಂಡ ಪ್ರಾರ್ಥಿಸಿದರು. ಮಚ್ಚಮಾಡ ಸುಬ್ರಮಣಿ ಸ್ವಾಗತಿಸಿ, ತೀತಿರ ಮಂದಣ್ಣ ನಿರೂಪಿಸಿ, ವಂದಿಸಿದರು.