ಗೋಣಿಕೊಪ್ಪಲು, ಆ. ೧೫: ದಲಿತ ಸಂಘರ್ಷ ಸಮಿತಿ ವತಿಯಿಂದ ತಾಲೂಕು ಕೇಂದ್ರ ಪೊನ್ನಂಪೇಟೆಯ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಅರೆಬೆತ್ತಲೆ ಮೆರವಣಿಗೆ ಹಾಗೂ ಧರಣಿ ನಡೆಸುವ ಮೂಲಕ ತಮಗೆ ದೊರಕಬೇಕಾದ ಹಕ್ಕುಗಳಿಗಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಸ್ವಾತಂತ್ರö್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿ ಇನ್ನೂ ಕೂಡ ದಲಿತರು,ಕೂಲಿ ಕಾರ್ಮಿಕರು, ಆದಿವಾಸಿಗಳು ನೆಲೆಸಲು ಸೂರಿಲ್ಲದೆ ಕಷ್ಟ ಎದುರಿಸುತ್ತಿದ್ದಾರೆ. ಬಡವರಿಗೆ ಸರ್ಕಾರ ಕೂಡಲೇ ನಿವೇಶನ ಮಂಜೂರು ಮಾಡಬೇಕು. ಹೋರಾಟ ಗಾರರ ಮೇಲೆ ಪೊಲೀಸರು ಹಾಕಿರುವ ಪ್ರಕರಣ ಗಳನ್ನು ಹಿಂದಕ್ಕೆ ಪಡೆಯಬೇಕು. ಇಲ್ಲದಿದ್ದಲ್ಲಿ ಮುಂದಿನ ಒಂದು ತಿಂಗಳ ಒಳಗೆ ಮಡಿಕೇರಿಯ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಆರ್.ಪರಶುರಾಮ್ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.
ನಗರದ ಪಂಚಾಯಿತಿ ಮುಂಭಾಗದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಜಮಾವಣೆಗೊಂಡ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿ ಗಳು ಹಾಗೂ ಸದಸ್ಯರು ಅರೆ ಬೆತ್ತಲೆಯಲ್ಲಿ ತಮ್ಮ ಹೋರಾಟವನ್ನು ಮಾಡುವ ಮೂಲಕ ಗಮನ ಸೆಳೆದರು.ಸರ್ಕಾರದ ಹೆಸರಿನಲ್ಲಿರುವ ಜಾಗವನ್ನು ಗುರುತಿಸಿ ಮನೆ ಇಲ್ಲದವರಿಗೆ ನಿವೇಶನಗಳನ್ನಾಗಿ ಪರಿವರ್ತಿಸಿ ನಿವೇಶನ ನೀಡಬೇಕು. ಇನ್ನೂ ಕೂಡ ನಿವೇಶನಕ್ಕಾಗಿ ಬಡವರು ಹೋರಾಟ ನಡೆಸುತ್ತಿರು ವುದು ನಮ್ಮ ಆಡಳಿತ ವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.
ಹಲವು ಬಾರಿ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆದಿದ್ದರೂ ಈ ಬಗ್ಗೆ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ತಿಂಗಳೊಳಗೆ ಜಿಲ್ಲಾಡಳಿತ ನಿವೇಶನ ರಹಿತರಿಗೆ ಜಾಗ ಕೊಡಲು ಮುಂದೆ ಬರದಿದ್ದಲ್ಲಿ ಹಲವು ಸಂಘ ಸಂಸ್ಥೆಗಳ ಸಹಕಾರ ಪಡೆದು ಡಿಸಿ ಕಚೇರಿಯ ಮುಂದೆ ಹೋರಾಟ ಕೈಗೆತ್ತಿಕೊಳ್ಳ ಲಾಗುತ್ತದೆ ಎಂದು ಜಿಲ್ಲಾ ಸಂಚಾಲಕ ಹೆಚ್.ಆರ್. ಪರಶುರಾಮ್ ತಿಳಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಪ್ರಶಾಂತ್ ಅವರಿಗೆ ಮನವಿ ಪತ್ರ ನೀಡಿದ ದಸಂಸ ಪದಾಧಿಕಾರಿಗಳು ಕೂಡಲೇ ಜಿಲ್ಲಾಡಳಿತ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವಿಭಾಗೀಯ ಸಂಚಾಲಕ ಕೃಷ್ಣಪ್ಪ ಬೆಳ್ಳೂರು, ರಾಜ್ಯ ಸಮಿತಿ ಸದಸ್ಯ ಟಿ.ಎನ್. ಗೋವಿಂದಪ್ಪ, ಜಿಲ್ಲಾ ದಸಂಸ ಪದಾಧಿಕಾರಿಗಳಾದ ರಜನಿಕಾಂತ್, ಕುಮಾರ್ ಮಹಾದೇವ್, ಉಣ್ಣಿ ಕೃಷ್ಣ, ಮುತ್ತ, ಮುರುಗ, ರಾಜು, ಸುಬ್ರಮಣಿ, ಚೆಲುವ, ಸೇರಿದಂತೆ ಮುಂತಾದವರು ಭಾಗವಹಿಸಿದ್ದರು. ತಾಲೂಕಿನ ವಿವಿಧ ಭಾಗಗಳಿಂದ ನೂರಾರು ಸಂಖ್ಯೆಯಲ್ಲಿ ದಸಂಸ ಪದಾಧಿಕಾರಿಗಳು ಭಾಗವಹಿಸಿದ್ದರು. ಪೊನ್ನಂಪೇಟೆ, ಠಾಣಾಧಿಕಾರಿ ಕುಮಾರ್, ಎಎಸ್‌ಐ ವೆಂಕಟೇಶ್, ಸುಬ್ರಮಣಿ, ಸೂಕ್ತ ಬಂದೋಬಸ್ತ್ ಕಲ್ಪಿಸಿದರು.