ಪೊನ್ನಂಪೇಟೆ, ಆ. ೧೫: ಪೊನ್ನಂಪೇಟೆ ಗ್ರಾಮ ಪಂಚಾಯಿತಿಯಲ್ಲಿ ಡಿಜಿಟಲ್ ಗ್ರಂಥಾಲಯ ಮತ್ತು ಓದುವ ಬೆಳಕು ಕಾರ್ಯಕ್ರಮದ ಗ್ರಾಮ ಚದುರಂಗ ಆಡೋಣ ಅಭಿಯಾನದಡಿಯಲ್ಲಿ ಗ್ರಂಥಾಲಯದಲ್ಲಿ ಆಯೋಜಿಸಲಾಗಿದ್ದ ಚದುರಂಗ ಸ್ಪರ್ಧೆಗೆ ಪೊನ್ನಂಪೇಟೆ ಗ್ರಾ.ಪಂ. ಪಂಚಾಯಿತಿ ಅಧ್ಯಕ್ಷೆ ಗಿರಿಜಾ ವೆಂಕಟೇಶ್ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಮಕ್ಕಳು ಓದಿನ ಜೊತೆ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಹಾಗೂ ದೇಶಕ್ಕೆ ಉತ್ತಮ ಕೊಡುಗೆ ನೀಡುವಂತಾಗಬೇಕು ಎಂದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪುಟ್ಟರಾಜು ಮಾತನಾಡಿ, ಸರ್ಕಾರವು ಶಾಲಾ ಮಕ್ಕಳಿಗೆ ಚದುರಂಗದ ಆಟವನ್ನು ಉತ್ತೇಜಿಸುವ ಸಲುವಾಗಿ ಪ್ರತಿ ಡಿಜಿಟಲ್ ಗ್ರಂಥಾಲಯಗಳಲ್ಲಿ ಚದುರಂಗ ಆಟವನ್ನು ಕಡ್ಡಾಯಗೊಳಿಸಲಾಗಿದ್ದು, ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಹಾಗೂ ವಯಸ್ಕರು ಸೇರಿದಂತೆ ಒಟ್ಟು ೫೧ ಸ್ಪರ್ಧಿಗಳು ಉತ್ಸಾಹದಿಂದ ಭಾಗವಹಿಸಿದರು. ಚದುರಂಗ ಸ್ಪರ್ಧೆಯ ಜೂನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನ ಲಿಜೋ ಜೆಮ್ಸ್, ದ್ವಿತೀಯ ಸ್ಥಾನ ಹರಿಕೃಷ್ಣ ಹಾಗೂ ತೃತೀಯ ಸ್ಥಾನ ಹರ್ಮಲ್, ಸಬ್ ಜೂನಿಯರ್ ವಿಭಾಗ ದಲ್ಲಿ ಪ್ರಥಮ ಸ್ಥಾನ ಆರ್. ಲಿಖಿತ, ದ್ವಿತೀಯ ಸ್ಥಾನ ಯದುನಂದನ್ ಹಾಗೂ ತೃತೀಯ ಸ್ಥಾನ ಸಮರ್ ಮಾದಪ್ಪ, ಸೀನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನ ಎಂ.ಎಸ್.. ದರ್ಶನ್, ದ್ವಿತೀಯ ಸ್ಥಾನ ಪ್ರಶಾಂತ್ ಹಾಗೂ ತೃತೀಯ ಸ್ಥಾನವನ್ನು ಸಾಹೇಬ್ ಗೌಡ ಅವರು ಪಡೆದುಕೊಂಡರು. ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಪ್ರಶಂಸನಾ ಪತ್ರ ನೀಡಲಾಯಿತು. ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ಗ್ರಾ.ಪಂ. ಉಪಾಧ್ಯಕ್ಷೆ ಡಿ.ವಿ. ದಶಮಿ, ಸದಸ್ಯರಾದ ಮಧುಕುಮಾರ್, ವಿಜಯ್ ಕುಮಾರ್, ರಾಮಕೃಷ್ಣ, ಸುಮೀತ, ಭಾರತಿ, ತಾಲೂಕು ಐ.ಇ.ಸಿ. ಸಂಯೋಜಕರು, ಪಂಚಾಯಿತಿ ಸಿಬ್ಬಂದಿ ವರ್ಗದವರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.