ಸೋಮವಾರಪೇಟೆ, ಆ. ೧೪: ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಎಂಬ ಘೋಷವಾಕ್ಯದಡಿ ಸ್ವಾತಂತ್ರö್ಯ ಹೋರಾಟಕ್ಕೆ ಹೊಸ ಕಿಚ್ಚು ಹತ್ತಿಸಿದ ಸಂದರ್ಭವೇ, ಕೊಡಗಿನ ೧೮ರ ತರುಣನೋರ್ವ ಆಂಗ್ಲರ ವಿರುದ್ದದ ಹೋರಾಟದಲ್ಲಿ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಐತಿಹಾಸಿಕ ಘಟನೆಯೊಂದು ಸದ್ದಿಲ್ಲದೇ ಬದಿಗೆ ಸರಿದಿದೆ!

೧೯೪೨ರ ಆಗಸ್ಟ್ ೮ರಂದು ಭಾರತದ ಸ್ವಾತಂತ್ರö್ಯಕ್ಕಾಗಿ ಮಹಾತ್ಮ ಗಾಂಧೀಜಿ ಅವರು ಬ್ರಿಟಿಷರ ವಿರುದ್ಧ ‘ದೇಶಬಿಟ್ಟು ತೊಲಗಿ’ ಎಂದು ಘೋಷಿಸಿ ಹೋರಾಟಕ್ಕೆ ಹೊಸ ಆಯಾಮ ನೀಡಿದರು. ಇದಾದ ಕೇವಲ ೬ ದಿನಗಳಲ್ಲೇ (ಆ. ೧೪ ರಂದು) ಕೊಡಗಿನಲ್ಲಿಯೂ ಹೋರಾಟ ಆರಂಭಿಸಿದ ವಿದ್ಯಾರ್ಥಿ ಗಳ ಮೇಲೆ ಬ್ರಿಟಿಷರು ನಡೆಸಿದ ದೌರ್ಜನ್ಯಕ್ಕೆ ಸೋಮವಾರಪೇಟೆ ತಾಲೂಕಿನ ಕಿರಗಂದೂರು ಗ್ರಾ.ಪಂ. ವ್ಯಾಪ್ತಿಯ ಸಿಂಗೂರು ಗ್ರಾಮದ ಕುಟ್ಟಪ್ಪನವರು ದೇಶದ ಸ್ವಾತಂತ್ರö್ಯದ ಯಜ್ಞಕ್ಕೆ ಸಮಿಧೆಯಾದರು. ಸಿಂಗೂರು ಗ್ರಾಮದ ಮಾದಪ್ಪ ಮತ್ತು ಗಂಗಮ್ಮನವರ ಹಿರಿಯ ಪುತ್ರನಾಗಿ ೧೯೨೪ರಲ್ಲಿ ಜನಿಸಿದ ಕುಟ್ಟಪ್ಪನವರು ಮಡಿಕೇರಿಯ ಸೆಂಟ್ರಲ್ ಹೈಸ್ಕೂಲ್‌ನಲ್ಲಿ ಓದುತ್ತಿದ್ದ ಸಂದರ್ಭ ೧೯೪೨ರ ಆಗಸ್ಟ್ ೧೪ ರಂದು ಕೊಡಗಿನ ವಿದ್ಯಾರ್ಥಿಗಳಾದ ಅಜ್ಜಿಕುಟ್ಟೀರ ಅಪ್ಪಣ್ಣ, ಪಾರುವಂಗಡ ಉತ್ತಪ್ಪ, ಮಲಚೀರ ಮುತ್ತಣ್ಣ, ಕೋದಂಡ ದೇವಯ್ಯ, ಕರ್ತಮಾಡ ಸುಬ್ಬಯ್ಯ

(ಮೊದಲ ಪುಟದಿಂದ) ಸೇರಿದಂತೆ ನೂರಾರು ವಿದ್ಯಾರ್ಥಿಗಳು ಮಡಿಕೇರಿಯಲ್ಲಿ ಹೋರಾಟ ಆರಂಭಿಸಿದ್ದರು.

ಇವರೆನ್ನೆಲ್ಲಾ ಬ್ರಿಟಿಷರು ಬಂಧಿಸಿ ಸೆರೆಮನೆಗೆ ತಳ್ಳಿದರು. ಈ ಸಂದರ್ಭ ಬ್ರಿಟಿಷ್ ಅಧಿಕಾರಿಗಳ ಆಕ್ರೊಶಕ್ಕೆ ಗುರಿಯಾದ ವಿದ್ಯಾರ್ಥಿಗಳ ಮೇಲೆ ನಡೆಸಿದ ಲಾಠಿ ಪ್ರಹಾರದಲ್ಲಿ ಸಿಂಗೂರು ಕುಟ್ಟಪ್ಪ ತೀವ್ರವಾಗಿ ಗಾಯಗೊಂಡರು. ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ರವಾನಿಸಲಾಯಿತು. ಚಿಕಿತ್ಸೆ ಫಲಕಾರಿಯಾದೇ ಕುಟ್ಟಪ್ಪ ತನ್ನ ೧೮ನೇ ವಯಸ್ಸಿನಲ್ಲಿಯೇ ದೇಶದ ಸ್ವಾತಂತ್ರö್ಯಕ್ಕಾಗಿ ಬಲಿಯಾದರು.

ಕ್ವಿಟ್ ಇಂಡಿಯಾ ಚಳವಳಿಗೆ ಬೆಂಬಲಿಸಲು ಕೊಡಗು ಸತ್ಯಾಗ್ರಹ ಸಮಿತಿಯ ಪ್ರಮುಖರಾದ ಪಂದ್ಯAಡ ಬೆಳ್ಯಪ್ಪ ಮತ್ತು ಅವರ ಪತ್ನಿ ಸೀತಾ, ಕೊಳ್ಳಿಮಾಡ ಕರುಂಬಯ್ಯ, ಮುಲ್ಲೇಂಗಡ ಚಂಗಪ್ಪ, ಕಾಕಮಾಡ ನಾಣಯ್ಯ, ಚೆಪ್ಪುಡಿರ ಪೂಣಚ್ಚ ಸೇರಿದಂತೆ ಹಲವು ನಾಯಕರು ಅಣಿಯಾದರು. ಕೊಡಗಿನಲ್ಲಿ ಸ್ವಾತಂತ್ಯದ ಕಹಳೆಯನ್ನು ಮೊಳಗಿಸಿ ಗಾಂಧೀಜಿಯವರ ಅಹಿಂಸಾತ್ಮಕ ಹೋರಾಟಕ್ಕೆ ತಮ್ಮ ಜೀವದ ಹಂಗು ತೊರೆದು ಶ್ರಮಿಸಿದರು. ಇವರುಗಳ ಮನವಿ ಮೇರೆಗೆ ಗಾಂಧೀಜಿಯವರು ೧೯೩೪ರ ಫೆಬ್ರವರಿ ೨೧ ರಿಂದ ೨೩ ರವರೆಗೆ ಕೊಡಗಿಗೆ ಭೇಟಿ ನೀಡಿ ಸ್ವಾತಂತ್ರö್ಯದ ಕಿಚ್ಚನ್ನು ಹೆಚ್ಚಿಸಿದರು. ಇದರಿಂದ ಪ್ರೇರಿತರಾದ ಕೊಡಗಿನ ಹಲವು ಹೋರಾಟಗಾರರು ಜೀವ ತೆತ್ತಾದರೂ ಸರಿ ದೇಶಕ್ಕೆ ಸ್ವಾತಂತ್ರö್ಯ ತರಲು ಮುಂದಾದರು.

ಕೊಡಗಿನ ಹಿರಿಯ ಮುತ್ಸದ್ಧಿ ಸೋಮವಾರಪೇಟೆಯ ಚೌಡ್ಲು ಗ್ರಾಮದ ಮಾಜಿ ವಿಧಾನಪರಿಷತ್ ಸದಸ್ಯ ದಿ. ಸಿ.ಕೆ. ಕಾಳಪ್ಪ ನವರ ಕುಟುಂಬ, ಸಿಂಗೂರು ಮಾದಪ್ಪನವರ ಕುಟುಂಬ ಸೇರಿದಂತೆ ಅವರ ಹಲವು ಸ್ನೇಹಿತರು, ಬೆಂಬಲಿಗರು ಅದಾಗಲೇ ದೇಶದ ಸ್ವಾತಂತ್ರö್ಯ ಹೋರಾಟಕ್ಕೆ ಧುಮುಕಿದ್ದರು.

ಸಿಂಗೂರು ಮಾದಪ್ಪನವರು ೧೯೩೮ರಲ್ಲಿಯೇ ಡಿಸ್ಟಿçಕ್ಟ್ ಬೋರ್ಡ್ ಸದಸ್ಯರಾಗಿ ಸಮಾಜ ಸೇವೆಯನ್ನು ಆರಂಭಿಸಿದ್ದರು. ಇವರಿಂದ ಪ್ರೇರಿತರಾದ ಕುಟ್ಟಪ್ಪ ಬಾಲ್ಯದಿಂದಲೇ ಸ್ವಾತಂತ್ರö್ಯ ಚಳವಳಿಯ ಹೋರಾಟವನ್ನು ಕಣ್ಣಾರೆ ಕಂಡು ತಾವೂ ಕೂಡ ಸ್ವಾತಂತ್ರö್ಯ ಹೋರಾಟದಲ್ಲಿ ಪಾಲ್ಗೊಳ್ಳಬೇಕೆಂದು ತೀರ್ಮಾನಿಸಿದ್ದರು.

ಪ್ರಾಥಮಿಕ ಶಿಕ್ಷಣವನ್ನು ಸೋಮವಾರಪೇಟೆಯಲ್ಲಿ ಪೂರೈಸಿದ ನಂತರ, ಸೋಮವಾರಪೇಟೆಯಲ್ಲಿ ಹೈಸ್ಕೂಲ್ ಇಲ್ಲದ್ದರಿಂದ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮಡಿಕೇರಿಯ ಸೆಂಟ್ರಲ್ ಹೈಸ್ಕೂಲ್‌ಗೆ ಸೇರ್ಪಡೆಗೊಂಡರು. ಅಲ್ಲಿ ಇವರಿಗೆ ಮಡಿಕೇರಿ, ವೀರಾಜಪೇಟೆ, ಗೋಣಿಕೊಪ್ಪ, ಪೊನ್ನಂಪೇಟೆ ಸೇರಿದಂತೆ ಹಲವು ಪ್ರದೇಶಗಳ ವಿದ್ಯಾರ್ಥಿಗಳು ಮತ್ತು ಹಿರಿಯ ಸ್ವಾತಂತ್ರö್ಯ ಹೋರಾಟಗಾರರ ಸಂಪರ್ಕ ದೊರೆಯಿತು.

ಆದರೆ ಸ್ವಾತಂತ್ರö್ಯ ಹೋರಾಟ ಪೂರ್ಣಗೊಳ್ಳುವ ಮುನ್ನವೇ ೧೯೪೨ರ ಆಗಸ್ಟ್ ೧೪ ರಂದು ಬ್ರಿಟಿಷರ ಲಾಠಿ ಏಟಿಗೆ ಸಿಲುಕಿ ಆ. ೧೬ ರಂದು ಮೈಸೂರಿನಲ್ಲಿ ಜೀವತೆತ್ತರು. ಕೇವಲ ೧೮ ವರ್ಷದ ತರುಣ ದೇಶಕ್ಕಾಗಿ ಪ್ರಾಣಾರ್ಪಣೆಗೈದರು. ಇವರ ಕುಟುಂಬದ ಸುಬೇದಾರ್ ಸಿಂಗೂರು ಮೇದಪ್ಪ ಅವರು ಪಾಕಿಸ್ತಾನದ ಸೈನ್ಯದ ವಿರುದ್ಧ ನಡೆದ ೧೯೯೯ರ ಕಾರ್ಗಿಲ್ ಯುದ್ಧದಲ್ಲಿ ವೀರಮರಣವನ್ನು ಅಪ್ಪಿದರು.

ಮಡಿಕೇರಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಚಳವಳಿಯಲ್ಲಿ ಪಾಲ್ಗೊಂಡಿದ್ದ ಸೋಮವಾರಪೇಟೆ ತಾಲೂಕಿನ ೧೮ ವರ್ಷದ ತರುಣ ಸಿಂಗೂರು ಗ್ರಾಮದ ಕುಟ್ಟಪ್ಪ ಅವರು ಬ್ರಿಟಿಷರ ಲಾಠಿ ಏಟಿಗೆ ಬಲಿಯಾಗಿ ೫ ವರ್ಷ ಒಂದು ದಿನದ ತರುವಾಯ ದೇಶಕ್ಕೆ ಸ್ವಾತಂತ್ರö್ಯ ಲಭಿಸಿತು.

ಇದೀಗ ಸ್ವಾತಂತ್ರö್ಯ ಅಮೃತೋತ್ಸವ ಸಂದರ್ಭ ಕೊಡಗಿನ ವೀರ ಪರಂಪರೆಯ ಇತಿಹಾಸದಲ್ಲಿ ಸಿಂಗೂರು ಕುಟ್ಟಪ್ಪ ಅವರ ಬದುಕಿನ ಪುಟ ಹೊಸ ಚೈತನ್ಯವನ್ನು ಹುಟ್ಟುಹಾಕಲಿ!