ಹೆಬ್ಬಾಲೆ, ಆ. ೧೫: ತಾಲೂಕಿನ ಕೂಡುಮಂಗಳೂರು ಗ್ರಾಮದಲ್ಲಿ ಕಾವೇರಿ ನದಿ ಮೂಲಕ ಕಳೆದ ನಾಲ್ಕು ದಶಕಗಳ ಹಿಂದೆ ಅನುಷ್ಠಾನ ಗೊಂಡಿದ್ದ ಕೂಡುಮಂಗಳೂರು ಏತ ನೀರಾವರಿ ಯೋಜನೆಯ ಅಭಿವೃದ್ಧಿಗೆ ರೂ. ೧.೭೦ ಕೋಟಿ ಅನುದಾನ ಒದಗಿಸಲಾಗಿದೆ ಎಂದು ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.
ಕೂಡುಮಂಗಳೂರು ಏತ ನೀರಾವರಿ ಯೋಜನೆಯ ಅಭಿವೃದ್ಧಿ ಕಾಮಗಾರಿಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವರು, ಕಾಮಗಾರಿ ಗುಣಮಟ್ಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಯೋಜನೆಯ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ರೈತರ ಜಮೀನುಗಳಿಗೆ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಾಸಕ ಎಂ.ಪಿ.ಅಪ್ಪಚ್ಚುರAಜನ್ ಮಾತನಾಡಿ, ೧೯೭೫ ನೇ ಇಸವಿಯಲ್ಲಿ ಅನುಷ್ಠಾನಗೊಂಡು ಪ್ರಾರಂಭವಾದ ಈ ಏತ ನೀರಾವರಿ ಯೋಜನೆ ರೈತರ ಬದುಕಿನ ಜೀವನಾಡಿಯಾಗಿದೆ.
ತುಂಬ ವರ್ಷಗಳ ಹಿಂದೆ ಅಳವಡಿಸಿದ್ದ ಪೈಪ್ಗಳು ಒಡೆದು ಹೋಗಿ ನೀರು ಪೋಲಾಗುತ್ತಿತ್ತು. ಇದರಿಂದ ರೈತರ ಜಮೀನು ಗಳಿಗೆ ಸಕಾಲದಲ್ಲಿ ನೀರು ಪೂರೈಸಲು ಸಾಧ್ಯವಾಗುತ್ತಿರಲಿಲ್ಲ. ಇದೀಗ ಸಂಪೂರ್ಣ ನವೀಕರಣ ಕಾರ್ಯ ಕೈಗೊಳ್ಳಲಾಗಿದ್ದು, ರೈತರಿಗೆ ಅನುಕೂಲವಾಗಲಿದೆ ಎಂದರು. ಅದೇ ರೀತಿ ಜಿಲ್ಲೆಯಲ್ಲಿ ಹಾನಿಯಾಗಿ ರುವ ಕೆರೆಕಟ್ಟೆ ಹಾಗೂ ಸಣ್ಣ ನೀರಾವರಿ ಯೋಜನೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸಿ ಕೊಡಬೇಕು ಎಂದು ಶಾಸಕರು ಸಚಿವ ಮಾಧುಸ್ವಾಮಿ ಅವರಿಗೆ ಮನವಿ ಮಾಡಿದರು.
ಏತನೀರಾವರಿ ಯೋಜನೆಯ ಕಾಮಗಾರಿ ಬಹುತೇಕ ಪೂರ್ಣ ಗೊಂಡಿದ್ದು, ಪೈಪ್ಲೈನ್ ಹಾಗೂ ಟಿಸಿ ವಿದ್ಯುತ್ಲೈನ್ ಅಳವಡಿಕೆ ಮಾತ್ರ ಬಾಕಿ ಉಳಿದಿದೆ.ಮಳೆಗಾಲ ಆರಂಭವಾದ ಕಾರಣ ಕಾಮಗಾರಿ ವಿಳಂಬವಾಗಿದೆ. ಮಳೆ ಕಡಿಮೆಯಾದ ನಂತರ ಇತರೆ ಕಾಮಗಾರಿಯನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸ ಲಾಗುವುದು ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕುಮಾರಸ್ವಾಮಿ ಸಚಿವರಿಗೆ ಮಾಹಿತಿ ನೀಡಿದರು.
ಈ ಸಂದರ್ಭ ಕುಶಾಲನಗರ ಪ.ಪಂ. ಅಧ್ಯಕ್ಷ ಬಿ. ಜೈವರ್ಧನ್, ಯೋಜನಾ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಪುಂಡಾರೀಕಾಕ್ಷ, ರಾಜ್ಯ ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಮೃತ್ಯುಂಜಯ, ಮೈಸೂರು ವಿಭಾಗದ ಮುಖ್ಯ ಎಂಜಿನಿಯರ್ ರಾಘವನ್, ಕೊಡಗು ಜಿಲ್ಲೆಯ ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಗೋಕುಲ್ ದಾಸ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕುಮಾರಸ್ವಾಮಿ, ಸಹಾಯಕ ಎಂಜಿನಿಯರ್ ರಫೀಕ್ ಇದ್ದರು.