ಮಡಿಕೇರಿ, ಆ.೧೪ : ಕೊಡಗು ಕುಲಾಲ (ಕುಂಬಾರ) ಮಡಿಕೆ ತಯಾರಕರ ಸಹಕಾರ ಸಂಘದ ಸಭೆಯಲ್ಲಿ ಕ್ಲಸ್ಟರ್ ತರಬೇತಿ ಶಿಬಿರ ನಡೆಯಿತು.
ಬೆಂಗಳೂರು ಸಹಕಾರ ಮಂಡಳಿ, ಕೊಡಗು ಸಹಕಾರ ಯೂನಿಯನ್ ಹಾಗೂ ಜಿಲ್ಲಾ ಸಹಕಾರ ಅಧಿಕಾರಿಗಳ ಸಮ್ಮುಖದಲ್ಲಿ ಮಡಿಕೇರಿಯ ಸಂಘದ ಕಚೇರಿಯಲ್ಲಿ ನಡೆದ ತರಬೇತಿ ಶಿಬಿರದಲ್ಲಿ ಸಹಕಾರ ಕಾನೂನು, ಲೆಕ್ಕಪತ್ರ, ಸಂಘ, ಸಂಸ್ಥೆಗಳ ಬಗ್ಗೆ ಮಾಹಿತಿ ನೀಡಲಾಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಎಂ.ಡಿ.ನಾಣಯ್ಯ ಸಂಘದ ಗುರಿ ಮತ್ತು ಉದ್ದೇಶದ ಕುರಿತು ವಿವರಿಸಿದರು.
ಸಹಕಾರಿ ಇಲಾಖೆಯ ಅಧಿಕಾರಿ ಯೋಗೇಂದ್ರ ನಾಯಕ್ ಮಾತನಾಡಿ, ಸಂಘದ ಸಹಕಾರಿ ನಿಯಮಗಳನ್ನು ಪಾಲಿಸುವಂತೆ ಸಲಹೆ ನೀಡಿದರು.
ನಿವೃತ್ತ ಉಪನ್ಯಾಸಕಿ ಶ್ಯಾಮಲ ಮಾತನಾಡಿ ಸಂಘದ ಸದಸ್ಯರು ಹಾಗೂ ನಿರ್ದೇಶಕರು ತಮ್ಮ ಜವಾಬ್ದಾರಿಯನ್ನು ಅರಿತು ಸಮುದಾಯದ ಬೆಳವಣಿಗೆಗೆ ಮುಂದಾಗಬೇಕು ಎಂದರು ಮತ್ತು ಗುಡಿ ಕೈಗಾರಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಸಂಘದ ಸದಸ್ಯ ಓ.ಆರ್.ಮಾಯಲಪ್ಪ ವಂದಿಸಿದರು. ಸಂಘದ ಸದಸ್ಯರು ಹಾಜರಿದ್ದರು.