ಕುಶಾಲನಗರ, ಆ.೧೩: ಪ್ರೇಮ ಪ್ರಕರಣ ಹಿನ್ನೆಲೆಯಲ್ಲಿ ಯುವಕನೊಬ್ಬ ತನ್ನ ಪ್ರೇಯಸಿ ಸೇರಿದಂತೆ ಆಕೆಯೊಂದಿಗೆ ಇದ್ದ ಇನ್ನೊಬ್ಬ ಯುವಕನಿಗೆ ಚಾಕುವಿನಿಂದ ಇರಿದ ಪ್ರಕರಣ ಕುಶಾಲನಗರದ ಕಾವೇರಿ ಪ್ರವಾಸಿ ತಾಣದಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ. ಇರಿತಕ್ಕೆ ಒಳಗಾದ ಸ್ಥಳೀಯ ಸರ್ಕಾರಿ ಕಾಲೇಜು ವಿದ್ಯಾರ್ಥಿ ಗಳಿಬ್ಬರೂ ಮಡಿಕೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಾಕು ಇರಿದ ಆರೋಪಿ ವಿಜಯಕುಮಾರ್ (೨೨) ಕುಶಾಲನಗರ ಹೊಟೇಲ್‌ವೊಂದರ ಕಾರ್ಮಿಕನಾಗಿದ್ದು, ಕುಶಾಲನಗರ ಪೊಲೀಸರು ಬಂಧಿಸಿ ಕ್ರಮ ಕೈಗೊಂಡಿದ್ದಾರೆ.

ಪ್ರಕರಣದ ವಿವರ: ಕಳೆದ ನಾಲ್ಕು ವರ್ಷದಿಂದ ಸ್ಥಳೀಯ ಹೊಟೇಲ್‌ನಲ್ಲಿ ಸಪ್ಲೇಯರ್ ಆಗಿ ಕೆಲಸ ಮಾಡುತ್ತಿದ್ದ ಕೊಪ್ಪ ಸಮೀಪದ ದೊಡ್ಡಹರವೆ ಗ್ರಾಮದ ಯುವಕ ವಿಜಯಕುಮಾರ್ ಮಾದಪಟ್ಟಣ ಗ್ರಾಮದÀ ವಿದ್ಯಾರ್ಥಿನಿ ಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ.

ಇಬ್ಬರ ನಡುವೆ ಸಣ್ಣಪುಟ್ಟ ಮನಸ್ತಾಪ ಬಂದು ನಿತ್ಯ ಫೋನ್ ಕರೆಗಳ ಮೂಲಕ ಕ್ಷೇಮ ಸಮಾಚಾರ ವಿನಿಮಯ ಆಗುತ್ತಿದ್ದ ನಡುವೆ ಶನಿವಾರ ಯುವತಿ ತಾನು ಕಾಲೇಜಿಗೆ ಹೋಗುತ್ತೇನೆ ಎಂದುಕೊAಡು, ನಿಸರ್ಗಧಾಮ ಪ್ರವಾಸಿ ಕೇಂದ್ರಕ್ಕೆ ತನ್ನ ಸಹಪಾಠಿ ಸೂಳೆಕೋಟೆ ಗ್ರಾಮದ ಯುವಕನೊಂದಿಗೆ ತೆರಳಿದ್ದಾಳೆ. ಈ ಬಗ್ಗೆ ಮಾಹಿತಿ ಅರಿತ ಹೊಟೇಲ್ ಕಾರ್ಮಿಕ ವಿಜಯಕುಮಾರ್ ಕಾವೇರಿ ನಿಸರ್ಗಧಾಮದಲ್ಲಿ ಹೊಂಚು ಹಾಕಿ ಇವರುಗಳ ನಡುವೆ ಗಲಾಟೆ ನಡೆದಿದೆ.

ಪ್ರವಾಸಿ ಕೇಂದ್ರದ ಒಳಭಾಗದಲ್ಲಿ ಮಾತಿನ ಚಕಮಕಿ ವಿಕೋಪಕ್ಕೆ ತೆರಳಿದಾಗ ಆರೋಪಿ ಯುವಕ ಇಬ್ಬರು ವಿದ್ಯಾರ್ಥಿಗಳಿಗೂ ಚಾಕುವಿನಿಂದ ಇರಿದಿರುವ ಬಗ್ಗೆ ಮಾಹಿತಿಗಳು ಹೊರಬಿದ್ದಿದೆ. ಗಾಯಾಳುಗಳನ್ನು ಕುಶಾಲನಗರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮಡಿಕೇರಿಗೆ ಸಾಗಿಸಲಾಗಿದೆ. ಆರೋಪಿ ಯುವಕನನ್ನು ಪ್ರವಾಸಿ ಕೇಂದ್ರದ ಸಿಬ್ಬಂದಿಗಳು ಕುಶಾಲನಗರ ಪೊಲೀಸರ ವಶಕ್ಕೆ ನೀಡಿದ್ದಾರೆ. ಕುಶಾಲನಗರ ಪೊಲೀಸರು ಬಂಧಿಸಿ ಕ್ರಮ ಕೈಗೊಂಡಿದ್ದಾರೆ. ಘಟನೆಯ ದೃಶ್ಯಾವಳಿ ಪ್ರವಾಸಿ ಕೇಂದ್ರದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ತ್ರಿಕೋನ ಪ್ರೇಮ ಪ್ರಕರಣ ಈ ಘಟನೆಗೆ ಕಾರಣ ಎನ್ನಲಾಗಿದೆ.