ಸೋಮವಾರಪೇಟೆ, ಆ. ೧೪: ಶ್ರೀಗಂಧವನ್ನು ಅಕ್ರಮವಾಗಿ ಕಡಿದು ತುಂಡುಗಳನ್ನಾಗಿ ಪರಿವರ್ತಿಸಿ ಮಾರಾಟಕ್ಕೆ ಯತ್ನಿಸುತ್ತಿದ್ದ ಪ್ರಕರಣವನ್ನು ಭೇದಿಸಿರುವ ಅರಣ್ಯ ಇಲಾಖಾಧಿಕಾರಿಗಳು, ಶ್ರೀಗಂಧದ ಮರ ತುಂಡುಗಳ ಸಹಿತ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಕಾರ್ಯಾಚರಣೆ ಸಂದರ್ಭ ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ.
ಸೋಮವಾರಪೇಟೆ ಅರಣ್ಯ ವಲಯದ ಮಾದಾಪುರ ಶಾಖೆಗೆ ಒಳಪಡುವ ಐಗೂರು-ಯಡವಾರೆ ಗ್ರಾಮದ ಗೋಟಮಾಳ ಮಂಟಿ ಜಾಗದಲ್ಲಿ ಅನಧಿಕೃತವಾಗಿ ಶ್ರೀಗಂಧ ಮರವನ್ನು ಕಡಿದು ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪದ ಮೇರೆ ಯಡವಾರೆ ಗ್ರಾಮದ ಕೆ.ಕೆ. ರವಿ ಎಂಬಾತನನ್ನು ಬಂಧಿಸಿದ್ದಾರೆ.
ಶ್ರೀಗAಧ ಕಳ್ಳತನ ಕೃತ್ಯದಲ್ಲಿ ಭಾಗಿಯಾಗಿದ್ದ ಸೋಮವಾರಪೇಟೆ ಪಟ್ಟಣ ಸಮೀಪದ ನೇಗಳ್ಳೆ ಗ್ರಾಮದ ಮದನ್ ಎಂಬಾತ ತಲೆಮರೆಸಿ ಕೊಂಡಿದ್ದು, ಆತನ ಮೇಲೂ ಮೊಕದ್ದಮೆ ದಾಖಲಿಸಿಕೊಂಡು ಬಂಧನಕ್ಕೆ ಕ್ರಮಕೈಗೊಳ್ಳಲಾಗಿದೆ.
ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಚೇತನ್, ಡಿಆರ್‌ಎಫ್‌ಓ ಜಗದೀಶ್, ಅರಣ್ಯ ರಕ್ಷಕ ಭರಮಪ್ಪ, ಚೇತನ್, ವೀರಪ್ಪ, ಸಿಬ್ಬಂದಿಗಳಾದ ನಂದೀಶ್, ವಿನು, ಹರ್ಷಿತ್ ಪಾಲ್ಗೊಂಡಿದ್ದರು.