ಶ್ರೀಮಂಗಲ, ಆ. ೧೪: ಪೊನ್ನಂಪೇಟೆ ತಾಲೂಕು ಬಿರುನಾಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಲ್ಲಿ ಪ್ರಸಕ್ತ ವರ್ಷ ಅತಿ ಹೆಚ್ಚು ಮಳೆಯಾಗಿದ್ದು, ಇದರಿಂದ ಕಾಫಿ, ಕಾಳುಮೆಣಸು, ಅಡಿಕೆ ಮತ್ತು ಭತ್ತದ ಬೆಳೆಗೆ ಭಾರೀ ಪ್ರಮಾಣದಲ್ಲಿ ನಷ್ಟವಾಗಿದೆ. ಕಾಫಿ ಮಂಡಳಿ ಕೂಡಲೇ ಬೆಳೆ ನಷ್ಟ ಸಮೀಕ್ಷೆ ವರದಿಯನ್ನು ಸರಕಾರಕ್ಕೆ ಸಲ್ಲಿಸಬೇಕು. ಸರಕಾರ ಪರಿಹಾರ ಪ್ರಮಾಣ ಪರಿಷ್ಕರಿಸಿ ಆದಷ್ಟು ಬೇಗ ಹೆಚ್ಚಿನ ಪ್ರಮಾಣದಲ್ಲಿ ಪರಿಹಾರವನ್ನು ಬೆಳೆಗಾರರಿಗೆ ಪಾವತಿಸಬೇಕೆಂದು ಬಿರುನಾಣಿ ಬೆಳೆಗಾರ ಒಕ್ಕೂಟದ ಅಧ್ಯಕ್ಷ ಬೊಳ್ಳೆರ ಅಪ್ಪುಟ ಪೊನ್ನಪ್ಪ ಒತ್ತಾಯಿಸಿದ್ದಾರೆ.

ಬಿರುನಾಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ೫ ಗ್ರಾಮಗಳಾದ ಬಾಡಗರಕೇರಿ, ಪೊರಾಡು, ತೆರಾಲು, ಬಿರುನಾಣಿ ಮತ್ತು ಪರಕಟಗೇರಿ ಗ್ರಾಮಗಳಲ್ಲಿ ಬೆಳೆಗಾರರ ತೋಟಗಳಿಗೆ ಭೇಟಿ ನೀಡಿದ ಬೆಳೆಗಾರ ಒಕ್ಕೂಟದ ತಂಡ ಭಾರೀ ಬಿರುಗಾಳಿ ಸಹಿತ ಮಳೆಯಿಂದ ಬೆಳೆ ನಷ್ಟ ಪ್ರಮಾಣ ಹೆಚ್ಚಿದ್ದು, ನಿರಂತರವಾಗಿ ಕಳೆದ ೫ ವರ್ಷಗಳಿಂದ ಅತಿವೃಷ್ಟಿಗೆ ತುತ್ತಾಗಿ ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ. ಸರಕಾರ ಹೆಚ್ಚಿನ ಪ್ರಮಾಣದಲ್ಲಿ ಪರಿಹಾರವನ್ನು ನೀಡಬೇಕು ಹಾಗೂ ಪರಿಹಾರ ಪ್ಯಾಕೇಜ್ ಅನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.

ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಈಗಾಗಲೇ ೧೭೦ ಇಂಚಿಗಿAತ ಹೆಚ್ಚು ಮಳೆಯಾಗಿದ್ದು ಕಳೆದ ವರ್ಷ ಇದೇ ಅವಧಿಗೆ ೧೦೦ ರಿಂದ ೧೨೦ ಇಂಚು ಮಳೆಯಾಗಿತ್ತು. ಪ್ರಸಕ್ತ ವರ್ಷ ಜುಲೈ ತಿಂಗಳಲ್ಲಿ ಮೊದಲ ಎರಡು ವಾರಗಳ ಕಾಲ ನಿರಂತರವಾಗಿ ಸುರಿದ ಬಿರುಗಾಳಿ ಸಹಿತ ಮಳೆಯಿಂದ ಕಾಫಿ, ಕಾಳುಮೆಣಸು, ಅಡಿಕೆ ಬೆಳೆಗಳಿಗೆ ಕೊಳೆರೋಗ ಉಂಟಾಗಿದ್ದು, ಫಸಲು ಉದುರಿ ಹಾಗೂ ಕೊಳೆರೋಗಕ್ಕೆ ತುತ್ತಾಗಿ ಶೇ. ೬೦ ಕ್ಕಿಂತ ಹೆಚ್ಚು ಬೆಳೆ ಹಾನಿಯಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ ವರ್ಷ ಬೆಳೆ ನಷ್ಟಕ್ಕೆ ಪರಿಹಾರ ಬಹಳಷ್ಟು ಬೆಳೆಗಾರರಿಗೆ ದೊರೆತಿಲ್ಲ. ಇದಲ್ಲದೆ ಸಾಕಷ್ಟು ಬೆಳೆಗಾರರು ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಪರಿಹಾರ ಪಡೆದಿದ್ದಾರೆ. ಜಿಲ್ಲಾಡಳಿತ ಹಾಗೂ ಕಂದಾಯ ಇಲಾಖೆಯ ಲೋಪದೋಷದಿಂದ ಬಹಳಷ್ಟು ಬೆಳೆಗಾರರು ಪರಿಹಾರದಿಂದ ವಂಚಿತರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಬಹಳಷ್ಟು ತೋಟಗಳಲ್ಲಿ ೫ ಚೀಲ ಕಾಫಿ ಆಗುವುದಿಲ್ಲ, ರಸ ಗೊಬ್ಬರ ದರ ಏರಿಕೆಯಾಗಿದ್ದು, ಉತ್ಪಾದನಾ ವೆಚ್ಚ ಸಹ ಏರಿಕೆಯಾಗಿದೆ. ಇಂತಹ ಸಮಯದಲ್ಲಿ ನಿರಂತರವಾಗಿ ಕಳೆದ ಐದು ವರ್ಷಗಳಿಂದ ಬೆಳೆ ನಷ್ಟವಾಗುತ್ತಿದ್ದು, ಕೇವಲ ಸಣ್ಣ ಪ್ರಮಾಣದ

(ಮೊದಲ ಪುಟದಿಂದ) ಹಾಗೂ ಅವೈಜ್ಞಾನಿಕ ಪರಿಹಾರ ಮೊತ್ತವನ್ನು ನೀಡುವುದರಿಂದ ಬೆಳೆಗಾರರ ಸಂಕಷ್ಟ ನಿವಾರಣೆ ಆಗುವುದಿಲ್ಲ ಎಂದು ನೋವು ವ್ಯಕ್ತಪಡಿಸಿದರು. ಈ ಸಂದರ್ಭ ಬಿರುನಾಣಿ ಬೆಳೆಗಾರರ ಒಕ್ಕೂಟದ ಉಪಾಧ್ಯಕ್ಷ ಅಣ್ಣಳಮಾಡ ಲಾಲ ಅಪ್ಪಣ್ಣ, ಸದಸ್ಯರಾದ ಕರ್ತಮಾಡ ನಂದಾ, ಕಳಕಂಡ ಜೀತು ಕುಶಾಲಪ್ಪ, ಕಾಳಿಮಾಡ ಶಿವಪ್ಪ, ಗುಡ್ಡಮಾಡ ಕವನ್, ಕಳಕಂಡ ದರ್ಶನ್ ಹಾಜರಿದ್ದರು.