ಕುಶಾಲನಗರ, ಆ. ೧೩: ಹೊಸಕೋಟೆ ಬಳಿ ಸರ್ಕಾರಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಮಗುಚಿಕೊಂಡ ಘಟನೆ ನಡೆದಿದೆ.ಅದೃಷ್ಟವಶಾತ್ ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

(ಮೊದಲ ಪುಟದಿಂದ) ಹಾಸನದಿಂದ ಕುಶಾಲನಗರ ಮೂಲಕ ಮಡಿಕೇರಿ ಕಡೆಗೆ ತೆರಳುತ್ತಿದ್ದ ಸರ್ಕಾರಿ ಬಸ್ (ಕೆಎ-೧೩ ಎಫ್-೨೧೫೪) ಎದುರುಗಡೆಯಿಂದ ವಿದ್ಯಾರ್ಥಿಗಳ ಮೆರವಣಿಗೆ ಬರುತ್ತಿದ್ದ ಹಿನ್ನೆಲೆಯಲ್ಲಿ ರಸ್ತೆಯಿಂದ ಎಡಗಡೆಗೆ ಸರಿದ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದು ಬಸ್ ಮಗುಚಿಕೊಂಡಿದೆ. ಈ ಸಂದರ್ಭ ಬಸ್‌ನಲ್ಲಿ ಒಟ್ಟು ೪೪ ಮಂದಿ ಪ್ರಯಾಣಿಕರಿದ್ದು, ಬಸ್ ನಿರ್ವಾಹಕ ಶಿವಕುಮಾರ್ ಸೇರಿದಂತೆ ಕೆಲವು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಸ್ಥಳದಲ್ಲಿದ್ದ ವಾಹನ ಸವಾರರು ಮತ್ತು ಮಾಹಿತಿ ತಿಳಿದು ಆಗಮಿಸಿದ ಪೊಲೀಸ್ ಹಾಗೂ ಸಾರಿಗೆ ಸಿಬಂದಿಗಳು ಪ್ರಯಾಣಿಕರನ್ನು ಚಾಲಕನ ಕಡೆಯ ಬಾಗಿಲಿನಿಂದ ಸುರಕ್ಷಿತವಾಗಿ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಯಾಣಿಕರಲ್ಲಿ ಮೂವರಿಗೆ ಅಲ್ಪ ಪ್ರಮಾಣದ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಗೆ ಸಾಗಿಸಲಾಯಿತು. ಉಳಿದಂತೆ ಪ್ರಯಾಣಿಕರನ್ನು ಬದಲಿ ಬಸ್‌ನಲ್ಲಿ ಕಳುಹಿಸಲು ಕ್ರಮ ಕೈಗೊಳ್ಳಲಾಯಿತು ಎಂದು ಕುಶಾಲನಗರದ ಸರ್ಕಾರಿ ಬಸ್ ನಿಲ್ದಾಣದ ಹಿರಿಯ ಸಂಚಾರಿ ನಿಯಂತ್ರಕ ಶ್ಯಾಮ ಶೆಟ್ಟಿ ತಿಳಿಸಿದ್ದಾರೆ.

ಬಸ್ ತೆರಳುತ್ತಿದ್ದ ಸಂದರ್ಭ ಹೆದ್ದಾರಿ ರಸ್ತೆಯಲ್ಲಿ ಎದುರುಗಡೆಯಿಂದ ವಿದ್ಯಾರ್ಥಿಗಳ ಮೆರವಣಿಗೆ ನಡುರಸ್ತೆಯಲ್ಲಿ ಬರುತ್ತಿದ್ದ ಹಿನ್ನೆಲೆ ಈ ಘಟನೆಗೆ ಕಾರಣವಾಗಿದೆ ಎಂದು ಚಾಲಕ ಶೇಖರ್ ಮಾಹಿತಿ ನೀಡಿದ್ದಾರೆ.

ಕುಶಾಲನಗರ ಕಡೆಗೆ ಕಾರ್ಯಕ್ರಮಕ್ಕೆ ಪಾಲ್ಗೊಳ್ಳಲು ಆಗಮಿಸುತ್ತಿದ್ದ ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಘಟನಾ ಸ್ಥಳದಲ್ಲಿ ಇಳಿದು ಗಾಯಾಳುಗಳನ್ನು ಮಡಿಕೇರಿ ಕಡೆಗೆ ಸಾಗಿಸುವಲ್ಲಿ ಮುಂದಾಗಿದ್ದ ದೃಶ್ಯ ಕಂಡುಬAತು.

ಬಸ್ ರಾಮನಾಥಪುರ ಡಿಪ್ಪೋಗೆ ಸೇರಿದ್ದು, ಘಟನಾ ಸ್ಥಳಕ್ಕೆ ಮಡಿಕೇರಿ ಮತ್ತು ರಾಮನಾಥಪುರ ಡಿಪ್ಪೋ ವ್ಯವಸ್ಥಾಪಕರುಗಳಾದ ಗೀತಾ ಮತ್ತು ದೇವರಾಜೇಗೌಡ ಅವರುಗಳು ಭೇಟಿ ನೀಡಿದರು.