ಶನಿವಾರಸಂತೆ, ಆ. ೧೪: ಸಮೀಪದ ಕೊಡ್ಲಿಪೇಟೆ ಹೋಬಳಿಯ ಬ್ಯಾಡಗೊಟ್ಟ ಗ್ರಾಮದಲ್ಲಿ ಪಂಚಾಯಿತಿ ಹಿಂಭಾಗದ ಗುಡ್ಡ ಮಳೆಗೆ ಕುಸಿದು ವ್ಯಾಪಾರಿ ಅಬ್ದುಲ್ ಅವರ ಮನೆಯ ಸುತ್ತ ಮಣ್ಣು ಆವರಿಸಿ ಹಾನಿಯುಂಟಾಗಿದೆ. ಜಲ ಉಕ್ಕಿ ಬರುತ್ತಿದ್ದು, ಮನೆಯೊಳಗೆ ನೀರು ತುಂಬಿದೆ.
ಊರುಗುತ್ತಿ ಗ್ರಾಮದ ಕಾಫಿ ತೋಟದಲ್ಲಿ ಭೂ ಕುಸಿತವಾಗಿ ಅರ್ಧ ಎಕರೆ ತೋಟ ಕೊಚ್ಚಿಹೋಗಿದೆ.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೀನಾ ಪರಮೇಶ್ ಮಾತನಾಡಿ, ಪಂಚಾಯಿತಿ ವತಿಯಿಂದ ಗುಡ್ಡ ಕುಸಿತದ ಮಣ್ಣನ್ನು ಜೆಸಿಬಿಯಿಂದ ತೆಗೆಸಿ ಬೇರೆಡೆಗೆ ಸ್ಥಳಾಂತರಿಸಲಾಗುತ್ತಿದೆ. ಕಂದಾಯ ಇಲಾಖೆ ಆದೇಶದಂತೆ ಕಾಲುವೆ ಮಾಡಿ ಮನೆಯೊಳಗೆ ಹರಿದು ಬರುತ್ತಿರುವ ಜಲವನ್ನು ಕಾಲುವೆ ಮೂಲಕ ಹರಿಯಬಿಡಲಾಗಿದೆ. ಪಂಚಾಯಿತಿ ಮಟ್ಟದ ನೆರವನ್ನು ನೀಡಲಾಗುತ್ತಿದ್ದು, ಹೆಚ್ಚಿನ ನೆರವಿಗೆ ಮನವಿ ಸಲ್ಲಿಸಲಾಗಿದೆ. ಗುಡ್ಡದ ಕೆಳಗೆ ೨೫ ಮನೆಗಳಿದ್ದು, ಎಲ್ಲರಲ್ಲೂ ಆತಂಕ ಮನೆ ಮಾಡಿದೆ ಎಂದು ಹೇಳಿದರು.